ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ ಪ್ರಮುಖ ಉದ್ಯಮಿ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್‌) ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.

ಈ ವಂಚನೆಯಿಂದಾಗಿ ಬ್ಯಾಂಕ್‌ಗೆ ಬರೋಬ್ಬರಿ 228 ಕೋಟಿ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಹಿಂದಿನ ಆಂಧ್ರ ಬ್ಯಾಂಕ್) ನೀಡಿದ ದೂರಿನನ್ವಯ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಅದರ ನಿರ್ದೇಶಕರಾದ ಜೈ ಅನ್ಮೋಲ್ ಅನಿಲ್ ಅಂಬಾನಿ ಮತ್ತು ರವೀಂದ್ರ ಶರದ್ ಸುಧಾಕರ್ ಅವರ ವಿರುದ್ಧ ಸಿಬಿಐ ಕ್ರಮ ಕೈಗೊಂಡಿದೆ.

ಕಂಪನಿಯು ತನ್ನ ವ್ಯವಹಾರದ ಅಗತ್ಯಗಳಿಗಾಗಿ ಮುಂಬೈನಲ್ಲಿರುವ ಬ್ಯಾಂಕ್‌ನ ಎಸ್‌ಸಿಎಫ್ ಶಾಖೆಯಿಂದ ಸುಮಾರು 450 ಕೋಟಿ ರೂ.ಗಳ ಸಾಲ ಪಡೆದಿತ್ತು. ಸಾಲ ಮಂಜೂರಾತಿ ವೇಳೆ ಬ್ಯಾಂಕ್‌ ಹಲವು ಷರತ್ತುಗಳನ್ನು ವಿಧಿಸಿತ್ತು. ಇದರಲ್ಲಿ ಸಕಾಲಕ್ಕೆ ಸಾಲ ಮರುಪಾವತಿ, ಬಡ್ಡಿ ಪಾವತಿ, ಭದ್ರತಾ ದಾಖಲೆಗಳ ಸಲ್ಲಿಕೆ ಮತ್ತು ಮಾರಾಟದ ಸಂಪೂರ್ಣ ಆದಾಯವನ್ನು ಬ್ಯಾಂಕ್ ಖಾತೆಯ ಮೂಲಕವೇ ನಿರ್ವಹಿಸುವುದು ಮುಂತಾದ ಆರ್ಥಿಕ ಶಿಸ್ತಿನ ನಿಯಮಗಳು ಸೇರಿದ್ದವು.

ಆದರೆ, ಕಂಪನಿಯು ಕಂತುಗಳನ್ನು ಸರಿಯಾಗಿ ಪಾವತಿಸುವಲ್ಲಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ, 2019ರ ಸೆಪ್ಟೆಂಬರ್ 30 ರಂದು ಈ ಖಾತೆಯನ್ನು ‘ನಾನ್ ಪರ್ಫಾರ್ಮಿಂಗ್ ಅಸೆಟ್’ (ಎನ್‌ಪಿಎ) ಅಥವಾ ಸುಸ್ತಿ ಸಾಲ ಎಂದು ಘೋಷಿಸಲಾಯಿತು.

ದುರುಪಯೋಗ ಪತ್ತೆ: ಖಾತೆಗಳಲ್ಲಿನ ಅವ್ಯವಹಾರದ ಬಗ್ಗೆ ತಿಳಿಯಲು 2016ರ ಏಪ್ರಿಲ್ 1 ರಿಂದ 2019ರ ಜೂನ್ 30 ರವರೆಗಿನ ಅವಧಿಗೆ ‘ಗ್ರಾಂಟ್ ಥಾರ್ನ್‌ಟನ್‌’ ಸಂಸ್ಥೆಯ ಮೂಲಕ ಫೊರೆನ್ಸಿಕ್ ಆಡಿಟ್ ನಡೆಸಲಾಯಿತು. ಈ ತನಿಖೆಯ ವೇಳೆ ಸಾಲವಾಗಿ ಪಡೆದ ಹಣವನ್ನು ಉದ್ದೇಶಿತ ಕೆಲಸಕ್ಕೆ ಬಳಸುವ ಬದಲು ಬೇರೆಡೆಗೆ ವರ್ಗಾಯಿಸಿರುವುದು ಕಂಡುಬಂದಿತ್ತು.ಹೀಗಾಗಿ, ಆರೋಪಿಗಳು ಮತ್ತು ಕಂಪನಿಯ ನಿರ್ದೇಶಕರು, ಯಾವ ಉದ್ದೇಶಕ್ಕಾಗಿ ಸಾಲ ಪಡೆದಿದ್ದರೋ ಅದನ್ನು ಬಿಟ್ಟು ಬೇರೆ ಉದ್ದೇಶಗಳಿಗೆ ಹಣ ಬಳಸಿಕೊಂಡಿದ್ದಾರೆ. ಖಾತೆಗಳನ್ನು ತಿರುಚುವ ಮೂಲಕ ಹಣಕಾಸಿನ ದುರುಪಯೋಗ ಎಸಗಿದ್ದಾರೆ ಮತ್ತು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಬ್ಯಾಂಕ್ ತನ್ನ ದೂರಿನಲ್ಲಿ ಆರೋಪಿಸಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ