ಶಿರಸಿ, ಉತ್ತರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು, ಧಾರ್ಮಿಕವಾಗಿ, ಪೌರಾಣಿಕವಾಗಿ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮತ್ತು ಆರ್ಥಿಕವಾಗಿಯೂ ಕರ್ನಾಟಕದ ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾಗಿದೆ. ಶಿರಸಿ ಎಂದಾಕ್ಷಣ ಪ್ರತಿಯೊಬ್ಬರ ಬಾಯಿಯಲ್ಲಿಯೂ ಉದ್ಘಾರವಾಗುವುದೇ, ಪುರಾಣ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಮತ್ತು ಎರಡು ವರ್ಷಕ್ಕೊಮ್ಮೆ ಎಂಟು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬ ಜಾತ್ರೆ. ನಾವಿಂದು ಮಾರಿಕಾಂಬ ದೇವಾಲಯ, ಅಲ್ಲಿಯ ಸ್ಥಳ ಪುರಾಣದ ಜೊತೆ ಅಲ್ಲಿಯ ಜಾತ್ರಾ ಮಹೋತ್ಸವವನ್ನು ಕುಳಿತಲ್ಲಿಂದಲೇ ಕಣ್ತುಂಬಿಕೊಳ್ಳೋಣ ಬನ್ನಿ.

ಶಿರಸಿಯ ಮಾರಿಕಾಂಬ ದೇವಾಲಯ ಉಳಿದೆಲ್ಲಾ ದೇವಾಲಯಗಳಿಗಿಂತಲೂ ವಿಭಿನ್ನವಾಗಿದ್ದು ಬಾಹ್ಯ ನೋಟಕ್ಕೆ ಅದೊಂದು ಸುಂದರವಾದ ಅರಮನೆಯಂತೆಯೇ ಭಾಸವಾಗುತ್ತದೆ. ಈ ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಇಕ್ಕೆಲಗಳಲ್ಲಿರುವ ಆನೆಗಳ ಮೂರ್ತಿಯು ನಮ್ಮನ್ನು ದೇವಾಲಯದ ಒಳಗೆ ಆಹ್ವಾನಿದರೆ, ಈ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ.
ಪುರಾಣ ಕಥೆಗಳನ್ನು ಓದಿಕೊಂದು ಮುಂದುವರೆಯುತ್ತಾ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಸಭಾಭವನವನ್ನು ಪ್ರವೇಶಿಸುತ್ತಿದ್ದಂತೆಯೇ ಎಂಟು ಕೈಗಳ, ಏಳಡಿ ಎತ್ತರದ, ವ್ಯಾಘ್ರನ ಮೇಲೆ ಆಸೀನಳಾದ ತಾಯಿ ಮಾರಿಕಾಂಬೆಯ ದರ್ಶನ ಪಡೆಯುತ್ತಿದ್ದಂತೆಯೇ ನಮ್ಮ ಮೈನಗಳು ರೋಮಾಂಚನಗೊಂಡು ಫುಳಕಿತಗೊಳ್ಳುವುದಲ್ಲದೇ, ಇಂತಹ ಸೌಭಾಗ್ಯ ಪಡೆದ ಜೀವನವೇ ಧನ್ಯ ಎನ್ನುವ ಭಾವನೆ ನಮ್ಮಲ್ಲಿ ಮೂಡಿದರೆ ಅಚ್ಚರಿಯೇನಿಲ್ಲ ದೇವಾಲಯದ ಮುಂಭಾಗದಲ್ಲಿ ಶ್ರೀ ಮಹಾಗಣಪತಿ, ಈಶ್ವರ ಮತ್ತು ಹನುಮಂತನ ಸಣ್ಣ ದೇವಾಲಯಗಳನ್ನು ಆಧುನಿಕ ರೀತಿಯಲ್ಲಿ ಪುನರ್ನಿರ್ಮಿಸಲಾಗಿದೆ.

ಕರ್ನಾಟಕದಲ್ಲಿ ಶೃಂಗೇರಿ ಶಾರದಾಂಬ, ಮೈಸೂರು ಚಾಮುಂಡೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹೀಗೆ ದೇವಿಯರಿಗೆ ಬಹಳ ಮಹತ್ವವಿದ್ದು, ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ದೇವಿಯರ ದೊಡ್ಡಕ್ಕ ಎಂದೇ ಪರಿಗಣಿಸಲಾಗಿದೆ. ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಿರಸಿಯ ಮಾರಿಕಾಂಬಾ ದೇವಾಲಯ ಬಹಲ ಶಕ್ತಿಯುತ ದೇವಿ ಎಂದೇ ನಂಬಲಾಗಿದ್ದು. ಆ ತಾಯಿಯ ದರ್ಶನ ಪಡೆದು. ಆಕೆಯ ಬಳಿ ನಮ್ಮೆಲ್ಲಾ ಸಂಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದಲ್ಲಿ ಖಂಡಿತವಾಗಿ ಆಕೆ ನಮ್ಮೆಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದೇ ಸಕಲ ಭಕ್ತರ ನಂಬಿಕೆಯಾಗಿದೆ. ಹಾಗಾಗಿ ಪ್ರತಿದಿನವೂ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತಾಯಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.
ಶಿರಸಿಯಲ್ಲಿ ಮಾರಿಕಾಂಬೆ ಪ್ರತಿಷ್ಠಾಪನೆ ಆಗುವ ಹಿಂದಿನ ಕಥೆ ಬಹಳ ರೋಚಕವಾಗಿದೆ. ದ್ವಾರರಯುಗದಲ್ಲಿ ವಿರಾಟ ನಗರವಾಗಿತ್ತು ಎಂದೇ ನಂಬಲಾಗಿರುವ ಈಗಿನ ಹಾನಗಲ್ಲಿನಲ್ಲಿ ಧರ್ಮರಾಯನು ಈ ದೇವಿಯನ್ನು ಸ್ತುತಿಸಿದನು ಎಂದು ಮಹಾಭಾರತದಲ್ಲಿ ಹೇಳಲಾಗಿದ್ದರೆ, ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ.
ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಡುವುದು ಅಲ್ಲಿನ ಸಂಪ್ರದಾಯವಾಗಿರುತ್ತದೆ. ಅದೊಮ್ಮೆ ಕೆಲವು ಕಳ್ಳರು ಆ ಆಭರಣಗಳ ಪೆಟ್ಟಿಗೆಯನ್ನು ಅಪಹರಿಸಿ ಅದನ್ನು ಶಿರಸಿಗೆ ತಂದು, ಆಭರಣಗಳನ್ನು ಹಂಚಿಕೊಂಡ ನಂತರ ಅದರ ಜೊತೆಯಲ್ಲಿದ್ದ ವಿಗ್ರಹವನ್ನು ಅದೇ ಪೆಟ್ಟಿಗೆಯಲ್ಲಿಟ್ಟು ಅಲ್ಲಿದ ಕೆರೆಗೆ ಎಸೆಯುತ್ತಾರೆ. ಹೀಗೆ ದೇವಿ ಇದ್ದ ಕೆರೆ ಮುಂದೆ ದೇವಿಕೆರೆ ಎಂದೇ ಹೆಸರಾಗುತ್ತದೆ.





