- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಕೆಡಿ: ದಿ ಡೆವಿಲ್
ನಿರ್ದೇಶನ: ಜೋಗಿ ಪ್ರೇಮ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
ತಾರಾಂಗಣ: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ಯಶ್ ಶೆಟ್ಟಿ ಮುಂತಾದವರು.
ರೇಟಿಂಗ್: 3.5/5
1980ರ ದಶಕದ ಬೆಂಗಳೂರು, ಮಕ್ಕಳಿಗೆ ಪಾಠ ಮಾಡುವ ಮೇಷ್ಟ್ರು ಧರ್ಮ (ರಮೇಶ್). ಅಣ್ಣನೇ ಸರ್ವಸ್ವ ಎಂದುಕೊಂಡು ಸೀಮೆಎಣ್ಣೆ ಅಂಗಡಿ ವ್ಯಾಪಾರ ನಡೆಸುತ್ತಾ ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ (ಧ್ರುವ ಸರ್ಜಾ), ಕಲ್ಮಶವೇ ಇಲ್ಲದ ಆತ ಯಾರ ಮೇಲೂ ಕೈ ಎತ್ತುವುದಿಲ್ಲ. ಆದರೆ ಅಂತಹವನ ಜೀವನದಲ್ಲಿ ಎದುರಾದ ಆ ಒಂದು ಪರಿಸ್ಥಿತಿಯಿಂದ ಭಯಾನಕವಾದ ರಾಕ್ಷಸನ ರೂಪದಲ್ಲಿ ಭೂಗತ ಲೋಕಕ್ಕೆ ಪ್ರವೇಶಿಸುತ್ತಾನೆ. ಇನ್ನೊಂದೆಡೆ ಡಾಕ್ ದೇವ (ಸಂಜಯ್ ದತ್) ಇಡೀ ಬೆಂಗಳೂರಿನಲ್ಲಿ ತನ್ನದೇ ಹವಾ ಹೊಂದಿದ್ದಾನೆ. ಭೂಗತ ಜಗತ್ತಿನಲ್ಲಿ ಈ ಇಬ್ಬರ ನಡುವೆ ನಡೆಯುವ ಯುದ್ಧವೇ "ಕೆಡಿ" ಸಿನಿಮಾದ ಪ್ರಮುಖ ಕಥೆ. ಹಾಗಾದರೆ ಕಾಳಿದಾಸ ‘ಕೆಡಿ’ ಆಗಿ ಬದಲಾಗುವುದು ಹೇಗೆ? ಈ ಬದಲಾವಣೆಗೆ ಕಾರಣ ಏನು ಎಂಬುದನ್ನು ತಿಳಿಯಲು ನೀವು ಈ ಸಿನಿಮಾವನ್ನು ಸಿನಿಮಾ ಮಂದಿರದಲ್ಲಿ ನೋಡಬೇಕು.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಸೇರಿದಂತೆ ಚಿತ್ರಪ್ರೇಮಿಗಳ ಪಾಲಿನ ಬಹುನಿರೀಕ್ಷೆಯ "ಕೆಡಿ" ಪ್ರಾಥಮಿಕವಾಗಿ ಒಂದು ಫುಲ್ ಮಾಸ್ ಸಿನಿಮಾ. ಬಿಡುಗಡೆಗೂ ಮುನ್ನವೇ ಹೈಪ್ ಸೃಷ್ಟಿ ಮಾಡಿದ್ದ ಈ ಚಿತ್ರದಲ್ಲಿ ದೊಡ್ಡ ಸಂಖ್ಯೆಯ ಕಲಾವಿದರ ದಂಡು ಇದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಸಿನಿಮಾ ಹಾಗೂ ಜೋಗಿ ಪ್ರೇಮ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಅಂದಿನ ರಾಜಕೀಯ, ರೌಡಿಸಂ, ವ್ಯಾಪಾರ ಹೀಗೆ ವಿವಿಧ ಮಜಲುಗಳನ್ನು ತೋರಿಸಲಾಗಿದ್ದು, ಭೂಗತ ಜಗತ್ತು ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಎರಡೂ ಬಗೆಯ ಕಥೆ ಚಿತ್ರದಲ್ಲಿವೆ. ಚಿತ್ರದ ಮೇಕಿಂಗ್ ಅದ್ದೂರಿತನದಿಂದ ಕೂಡಿದ್ದು, ಬಹುತೇಕ ಚಿತ್ರೀಕರಣ ಬೃಹತ್ ಸೆಟ್ಗಳಲ್ಲಿ ನಡೆದಿದೆ. ಹಳೇ ಬೆಂಗಳೂರಿನ ಐಕಾನಿಕ್ ಶಿವಾಜಿ ಥಿಯೇಟರ್ ಹಾಗೂ ಕೃಷ್ಣರಾಜ ಮಾರ್ಕೆಟ್ ಸೇರಿದಂತೆ ಅಂದಿನ ದಿನಗಳ ಬೆಂಗಳೂರಿನ ದೃಶ್ಯಗಳು ಉತ್ತಮವಾಗಿ ಮೂಡಿಬಂದಿವೆ. ಅಷ್ಟೇ ಅಲ್ಲದೆ ವಿಂಟೇಜ್ ಕಾರುಗಳು, ಹಳೇ ಬೈಕ್‌ಗಳು, ಡಬಲ್ ಡೆಕ್ಕರ್ ಬಸ್, ಪಾತ್ರಗಳ ಕಾಸ್ಟ್ಯೂಮ್ ಹಾಗೂ ಹೇರ್ ಸ್ಟೈಲ್, ಅಲ್ಲಿ ಬರುವ ಪ್ರತಿ ವಸ್ತುವೂ ಸಹ ಅಂದಿನ ಕಾಲವನ್ನು ನೆನಪಿಸುತ್ತದೆ. ಅಷ್ಟರ ಮಟ್ಟಿಗೆ ಚಿತ್ರ ಅದ್ದೂರಿಯಾಗಿ ತಯಾರಾಗಿದೆ.
"ಕೆಡಿ"ಯಾಗಿ ಧ್ರುವ ಸರ್ಜಾ ಆಕ್ಷನ್ ದೃಶ್ಯಗಳಲ್ಲಿ ಹಾಗೂ ಡ್ಯಾನ್ಸ್‌ನಲ್ಲಿ ಮತ್ತು ಸೆಂಟಿಮೆಂಟ್ ದೃಶ್ಯಗಳಲ್ಲಿ ಮನಸ್ಸು ಗೆಲ್ಲುತ್ತಾರೆ. ಡೈಲಾಗ್ ಡೆಲಿವರಿ, ಮ್ಯಾನರಿಸಂ ಹಾಗೂ ಕಾಮಿಡಿ ಟೈಮಿಂಗ್ ಸಹ ಇಷ್ಟವಾಗುತ್ತದೆ. ಮಚ್ ಲಕ್ಷ್ಮಿ ಆಗಿ ರೀಷ್ಮಾ ನಾಣಯ್ಯ ಬಜಾರಿ ಪಾತ್ರದಲ್ಲಿ, ಎಮೋಷನಲ್ ಸನ್ನಿವೇಶದಲ್ಲಿ ಇಷ್ಟವಾಗುತ್ತಾರೆ.

ಇನ್ನು ಈ ಮೊದಲೇ ಹೇಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ. ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ಯಶ್ ಶೆಟ್ಟಿ ಅವರ ಪಾತ್ರಗಳೂ ಹೈಲೈಟ್ ಆಗುತ್ತವೆ. ಅದಲ್ಲದೆ ಪೊಲೀಸ್ ಕಮಿಷನರ್ ಸೂರಪ್ಪ ಆಗಿ ರವಿಶಂಕರ್, ಡಾಕ್ ದೇವನಾಗಿ ಸಂಜಯ್ ದತ್ ಸಖತ್ ಸ್ಟೈಲಿಶ್ ಆಗಿ ಕಾಣುತ್ತಾರೆ. ಇದರೊಂದಿಗೆ ರಕ್ಷಿತಾ - ಪ್ರೇಮ್ ಪುತ್ರ ಸೂರ್ಯ ಸಹ ಒಂದು ಸೀನ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಇನ್ನು ಕ್ಲೈಮ್ಯಾಕ್ಸ್ ನಲ್ಲಿ ಕಿಚ್ಚ ಸುದೀಪ್ ಎಂಟ್ರಿಯಾಗಿ ಕಥೆಗೆ ದೊಡ್ಡ ಟ್ವಿಸ್ಟ್ ಕೊಡುತ್ತಾರೆ.





