ನೆನ್ನೆ ಸಂಜೆ ಮುಂಬೈಯಿಂದ ಕರೆ ಮಾಡಿದ್ದ ನನ್ನ ಸಹೋದ್ಯೋಗಿಯೊಬ್ಬರು ಎಂದಿನಂತೆ ಉಭಯ ಕುಶಲೋಪರಿ ವಿಚಾರಿಸಿದ ನಂತರ ಕೇಳಿದ ಮೂತ್ತ ಮೊದಲನೇ ಪ್ರಶ್ನೆಯೇ, ಕಳೆದ ಒಂದು ವಾರದಿಂದ ಬೆಂಗಳೂರು ಮುಳುಗಿ ಹೋಗಿದೆಯಂತೆ? ಈಗ ಪರಿಸ್ಥಿತಿ ಹೇಗಿದೆ? ಎಂಚು. ನಿಮಗೆ ಹೇಗೆ ಈ ವಿಷಯ ಗೊತ್ತಾಯಿತು? ಎಂದು ವಿಚಾರಿಸಿದಾಗ, ವಾಟ್ಸಾಪ್ ನಲ್ಲಿ ಬೆಂಗಳೂರಿನ ಹತ್ತು ಹಲವಾರು ವೀಡಿಯೋಗಳು ಹರಿದಾಡುತ್ತಿವೆ. ಅದನ್ನು ನೋಡಿ ಗೊತ್ತಾಯಿತು ಎಂದಾಗ, ಜನರು ಇಲಿ ಹೋಯ್ತು ಎಂದರೆ ಹುಲಿ ಹೋಯ್ತು ಎಂದು ಹೇಳ್ತಾರಲ್ಲಾ ಎಂದು ಮನಸ್ಸಿನಲ್ಲಿ ಅಂದು ಕೊಂಡು, ಅಲ್ಲಾ ಪ್ರತಿ ವರ್ಷಾ ಮುಂಬೈನಲ್ಲಿ ಮಳೆ ಬಂದಾಗ ವಾರನು ಗಟ್ಟಲೇ ಲೋಕಲ್ ಟ್ರೈನ್ ಗಳು ಇಲ್ಲದೇ

ಪರದಾಡ್ತೀರಲ್ಲಾ ಅಂದಾಗ, ಹೇ.. ಹೇ.. ಅದೆಲ್ಲಾ ನಮಗೆ ಸಹಜವಾಗಿ ಅಭ್ಯಾಸವಾಗಿ ಹೋಗಿದೆ ಎಂದು ಹೇಳುತ್ತಲೇ ಮಾತನ್ನು ಬೇರೆಡೆಗೆ ತೆಗೆದುಕೊಂಡು ಹೋಗುವ ಮೂಲಕ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಿದರು. ತಮ್ಮ ತಟ್ಟೆಲೀ ಹೆಗ್ಗಣ ಬಿದ್ದಿದ್ರೂ ಪಕ್ಕದ ತಟ್ಟೇಲಿ ನೋಣ ಬಿದ್ದಿರುವುದರ ಬಗ್ಗೆ ಚಿಂತೆ ಅವರಿಗೆ. ಇದು ಖಂಡಿತವಾಗಿಯೂ ಅವರ ತಪ್ಪಿಲ್ಲದೇ, ಕೇವಲ ಒಂದು ಪ್ರದೇಶದ ವೀಡೀಯೋಗಳನ್ನು ಮಾಡಿಕೊಂಡು ಸಂಪೂರ್ಣ ಬೆಂಗಳೂರೇ ಜಲಾವೃತವಾಗಿದೆ ಎಂದು ಬಿಂಬಿಸುವಲ್ಲಿ ಬೆಂಗಳೂರಿನ ವಲಸಿಗರು ಮತ್ತು ರಾಷ್ಟ್ರೀಯ ಮಾಧ್ಯಮಗಳು ಯಶಸ್ವಿಯಾಗಿರುವುದು ದುರಂತವೇ ಸರಿ.

ಮಹದೇವಪುರ ಸುತ್ತಮುತ್ತಲಿನಲ್ಲಿ ಸುರಿದಷ್ಟೇ ಪ್ರಮಾಣದ ಮಳೆ ಬೆಂಗಳೂರಿನ ವಿಜಯನಗರ, ಜಯನಗರ, ಜೆಪಿ ನಗರ, ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ ಕ್ರಾಸ್ ರಾಜಾಜಿನಗರ ನಾಗರಬಾವಿ ಮುಂತಾದ ಕಡೆಗಳಲ್ಲಿ ಸುರಿದಿದ್ದರೂ, ಮಳೆ ನಿಂತ ಕೆಲವೇ ಗಂಟೆಗಳಲ್ಲಿ ಮಳೆ ನೀರು ಒಳಚರಂಡಿಯ ಮೂಲಕ ಹರಿದು ಹೋಗಿದೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಲ್ಲಿ 20 ವರ್ಷಗಳ ಹಿಂದೆ ಏನೂ ಇರದಿದ್ದ ಸಿಲ್ಕ್ ಬೋರ್ಡಿನಿಂದ ಮತ್ತು ಕೆ.ರ್.ಪುರದ ಸುತ್ತಮುತ್ತಲಿನ ಪ್ರದೇಶ ಅವೆರಡರ ಮಧ್ಯೆ ಈ ಹೊರವರ್ತುಲ ರಸ್ತೆಯಾಗಿದ್ದೇ ತಡಾ ಅಂದಿನ ನಗರಾಭಿವೃದ್ಧಿ ಸಚಿವಾಗಿದ್ದ ಕೆ.ಜೆ.ಜಾರ್ಚ್, ಡಿ.ಕೆ.ಶಿವಕುಮಾರ್, ಕುಪೇಂದ್ರ ರೆಡ್ಡಿ, ಎಂ.ಟಿ.ಬಿ. ನಾಗರಾಜ್ ಪಿ.ಸಿ.ಮೋಹನ್ ನಂತಹ ಪ್ರಭಾವಿ ರಾಜಾಕಾರಣಿಗಳು ಅ ವರ್ತುಲ ರಸ್ತೆಯ ಇಕ್ಕೆಲಗಳನ್ನೂ ಹರಿದು ಹಂಚಿ ಕೊಂಡು ತಮ್ಮ ತಮ್ಮ ಆಪ್ತ ಬಿಲ್ಡರ್ಗಳ ಮೂಲಕ ಕಂದಾಯ ಇಲಾಖೆಯ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ನೂರಾರು ಗಗನ ಚುಂಬಿ ಕಟ್ಟಡಗಳನ್ನು ಕಟ್ಟಿಸಿ ಕೋಟ್ಯಾಂತರ ರೂಪಾಯಿ ಬಾಡಿಗೆ ಹಣವನ್ನು ಪಡೆದಿರುವುದೇ ಸಮಸ್ಯೆಯಾಗಿದ್ದು, ಖಂಡಿತವಾಗಿಯೂ ಈಗ ಸುರಿಯುತ್ತಿರುವ ಮಳೆಯಂತೂ ಕಾರಣ ಅಲ್ಲವಾಗಿದೆ. ರಿಯಲ್ ಎಸ್ಟೇಟ್ ದಂಧೆ, ಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ವಲಸಿಗರ ಕ್ರೌರ್ಯದಿಂದಾಗಿ, ಐತಿಹಾಸಿಕ ಹಿನ್ನೆಲೆ ಇರುವ, ಉದ್ಯಾನನಗರಿ, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಎನಿಸಿಕೊಂಡಿರುವ ಬೆಂಗಳೂರಿಗೆ ಕೆಟ್ಟ ಹೆಸರು ಬರುವಂತಾಗಿದೆ.
ಅಂಕಿ ಆಂಶಗಳ ಪ್ರಕಾರ ಬೆಂಗಳೂರು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದ್ದು, ಸಹಜವಾಗಿ ಮಳೆಯಾದಾಗ ನೀರು ಉಳಿಸಿಕೊಳ್ಳದಿದ್ದರೆ ಮಳೆ ನೀರು ತಗ್ಗಿನ ಪ್ರದೇಶಗಳಿಗೆ ಹರಿಯುತ್ತದೆ. ಇದೇ ಭೌಗೋಳಿಕ ಆಧಾರವನ್ನೇ ಮನಸ್ಸಿನಲ್ಲಿಟ್ಟು ಕೊಂಡ ಕೆಂಪೇಗೌಡರು ತಮ್ಮ ಆಳ್ವಿಕೆಯ ಕಾಲದಲ್ಲಿ ನೂರಾರು ಕೆರೆಗಳನ್ನು ನಿರ್ಮಿಸಿದರು. ಈ ಹಿಂದಿನ ಲೇಖನದಲ್ಲಿ ತಿಳಿಸಿದಂತೆ, ಎತ್ತರದ ಪ್ರದೇಶಗಳಲ್ಲಿ ಸುರಿದ ಮಳೆಯ ನೀರು ರಾಜ ಕಾಲುವೆಗಳ ಮೂಲಕ ಹತ್ತಿರದ ತಗ್ಗಿನಲ್ಲಿರುವ ಕೆರೆಗೆ ಹೋಗಿ, ಆ ಕೆರೆ ತುಂಬಿದಾಗ ಮತ್ತೇ ಕೋಡಿ ಹರಿಯುವ ಮೂಲಕ ಮತ್ತೊಂದು ಅತ್ಯುತ್ತಮ ರಾಜಕಾಲುವೆಯ ಮೂಲಕ ತಗ್ಗಿರುವ ಕೆರೆಗೆ ಸೇರಿಕೊಳ್ಳುತ್ತಿತ್ತು. ಹೀಗೆ ಬಹುತೇಕ ಎಲ್ಲಾ ಕೆರೆಗಳೂ ರಾಜಕಾಲುವೆ ಎಂಬ ಅಧ್ಭುತ ಪರಿಕಲ್ಪನೆಯ ಮೂಲಕ ಪರಸ್ಪರ ಜೋಡಿಸಿದ್ದರು ಇದರಿಂದಾಗಿ ಎತ್ತರದ ಕೆರೆಗಳು ತುಂಬಿದಾಗ ನೀರು ಕಡಿಮೆ ಎತ್ತರದಲ್ಲಿರುವ ಕೆರೆಗಳಿಗೆ ಹರಿಯುವ ಮೂಲಕ ಗ್ರಾಮಗಳಾಗಲೀ ರಸ್ತೆಗಳಾಗಲೀ ಜಲಾವೃತವಾಗುತ್ತಿರಲಿಲ್ಲ.





