ರಾಕಿಂಗ್ ಸ್ಟಾರ್ ಯಶ್ ನಟನೆಯ “ಟಾಕ್ಸಿಕ್” ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲಾ ಒಂದು ರೀತಿಯ ಸದ್ದು ಮಾಡುತ್ತಲೇ ಇದೆ.

ಈ ಚಿತ್ರದ ಪ್ರಮುಖ ಆಕರ್ಷಣೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರ ‘ನಾದಿಯಾ’ ಪಾತ್ರದ ಫಸ್ಟ್ ಲುಕ್. ಇದೀಗ ಈ ಪೋಸ್ಟ್​ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದೆ. ಈ ಕುರಿತು ಕಿಯಾರಾ ಅಡ್ವಾಣಿ ಹಂಚಿಕೊಂಡಿರುವ ಹೊಸ ಪೋಸ್ಟ್‌ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಕಿಯಾರಾ ಅಡ್ವಾಣಿ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ‘ನಾದಿಯಾ’ಪಾತ್ರಕ್ಕಾಗಿ ತಾವು ಪಟ್ಟ ಶ್ರಮವನ್ನು ವಿವರಿಸಿದ್ದಾರೆ. ಈ ಪಾತ್ರ ನನ್ನಿಂದ ಕೇವಲ ನಟನೆ ಮಾತ್ರ ಬಯಸಲಿಲ್ಲ, ಬದಲಾಗಿ ನನ್ನನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಪೂರ್ಣವಾಗಿ ಪರೀಕ್ಷಿಸಿತು ಎಂದು ಬರೆದುಕೊಂಡಿದ್ದಾರೆ. ಈ ಪಾತ್ರದ ಚಿತ್ರೀಕರಣದ ಅವಧಿಯಲ್ಲಿ ತಮ್ಮ ವ್ಯಕ್ತಿತ್ವದಲ್ಲೇ ಒಂದು ರೀತಿಯ ಬದಲಾವಣೆಯಾದ ಅನುಭವವಾಯಿತು ಎಂದು ಹೇಳಿದ್ದಾರೆ.ಬಾಲಿವುಡ್‌ನಲ್ಲಿ ಈಗಾಗಲೇ ಹಲವು ವಿಭಿನ್ನ ಪಾತ್ರಗಳನ್ನು ಮಾಡಿರುವ ಕಿಯಾರಾ ಅವರಿಗೆ ‘ಟಾಕ್ಸಿಕ್’ ಚಿತ್ರದ ನಾದಿಯಾ ಪಾತ್ರ ಸವಾಲಾಗಿ ಪರಿಣಮಿಸಿತ್ತು. ಈ ಬಗ್ಗೆಯೂ ತಿಳಿಸಿದರುವ ಅವರು, ನಾನು ಇದುವರೆಗೆ ನಿರ್ವಹಿಸಿದ ಪಾತ್ರಗಳಲ್ಲೇ ಇದು ಅತ್ಯಂತ ಕಷ್ಟಕರವಾದದ್ದು. ತಿಂಗಳುಗಳ ನಿರಂತರ ಹಾರ್ಡ್ ವರ್ಕ್ ಮತ್ತು ತಯಾರಿ ಈ ಪಾತ್ರದ ಹಿಂದಿದೆ. ಇದು ನನ್ನ ವೃತ್ತಿಜೀವನದ ಒಂದು ಧೈರ್ಯದ ಹೆಜ್ಜೆ ಎಂದು ಅವರು ಬರೆದುಕೊಂಡಿದ್ದಾರೆ.

ಚಿತ್ರದ ಫಸ್ಟ್ ಲುಕ್‌ಗೆ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆ ಕಿಯಾರಾ ಅವರಿಗೆ ಸಂತಸ ತಂದಿದೆ. ಫಸ್ಟ್ ಲುಕ್‌ಗೆ ಹರಿದು ಬರುತ್ತಿರುವ ಪ್ರೀತಿಯನ್ನು ಕಂಡು ಖುಷಿಯಾಗುತ್ತಿದೆ. ಇಂತಹ ಅದ್ಭುತ ಅವಕಾಶ ನೀಡಿದ ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಾನು ಸದಾ ಚಿರಋಣಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದ ಮೂಲಕ ಕಿಯಾರಾ ಅಡ್ವಾಣಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಿಯಾರಾ ಅವರ ಭಾವನಾತ್ಮಕ ಪೋಸ್ಟ್ ಚಿತ್ರದ ಮೇಲೆ ಇರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ನಾದಿಯಾ’ ತೆರೆಯ ಮೇಲೆ ಹೇಗೆ ಅಬ್ಬರಿಸಲಿದ್ದಾಳೆ ಎಂದು ಅಭಿಮಾನಿಗಳು ಈಗ ಕಾತರದಿಂದ ಕಾಯುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ