- ರಾಘವೇಂದ್ರ ಅಡಿಗ ಎಚ್ಚೆನ್.
‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಮತ್ತೆ ಸುದ್ದಿಯಲ್ಲಿದೆ. ಈ ಸಿನಿಮಾ ಬಿಡುಗಡೆ ಸಮಯ ಹತ್ತಿರವಾಗುತ್ತಿದ್ದಂತೆ, ಈಗಾಗಲೇ ಅದರ ಪ್ರಚಾರ ಕಾರ್ಯಗಳಿಗೆ ಭರ್ಜರಿ ಚಾಲನೆ ದೊರೆತಿದೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ನಟಿಸಿರುವ ಈ ಸಿನಿಮಾದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹೆಚ್ಚಿದೆ. ಈ ನಡುವೆ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಇನ್ನು ಕುತೂಹಲ ಹೆಚ್ಚಿಸಿದೆ.
ಈ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ಬಾಲಿವುಡ್‌ನ ಜನಪ್ರಿಯ ನಟಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಿಡುಗಡೆಯಾದ ಫಸ್ಟ್ ಲುಕ್‌ನಲ್ಲಿ ಕಿಯಾರಾ ಅಡ್ವಾಣಿ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ‘ನಾಡಿಯಾ’ ಎಂಬ ಪಾತ್ರದಲ್ಲಿ ಕಿಯಾರಾ ಅವರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲೇ ಸಾಕಷ್ಟು ಯಶಸ್ಸು ಕಂಡಿರುವ ಕಿಯಾರಾ, ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾವು ಮೂಡಿಸಿದ್ದಾರೆ. ಇದೀಗ ಮೊದಲ ಬಾರಿಗೆ ಯಶ್ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ‘ಟಾಕ್ಸಿಕ್’ ಸಿನಿಮಾಗೆ ಇನ್ನಷ್ಟು ವಿಶೇಷತೆಯನ್ನು ತಂದಿದೆ.

ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನಾಡಿಯಾ ಪಾತ್ರದ ಕುರಿತು ಮಾತನಾಡುತ್ತಾ, “ಕೆಲವು ಪಾತ್ರಗಳು ಕೇವಲ ಸಿನಿಮಾದ ಭಾಗವಾಗಿರುವುದಿಲ್ಲ. ಅವು ಕಲಾವಿದರಿಗೂ ಹೊಸ ಆಯಾಮ ನೀಡುತ್ತವೆ. ನಾಡಿಯಾ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಅವರು ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.
‘ಟಾಕ್ಸಿಕ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಸಿದ್ಧವಾಗುತ್ತಿದೆ. ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಕಾಣಲಿದೆ.





