ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ‘ಸೀ ಬರ್ಡ್’ ಸ್ಲೀಪರ್ ಕೋಚ್ ಖಾಸಗಿ ಬಸ್ಗೆ ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ಗೆ ಹಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಚಿತ್ರದುರ್ಗದ ಹಿರಿಯೂರು ತಾಲೂಕಿನ ಗೊರ್ಲತ್ತು ಬಳಿ ಗುರುವಾರ ಮುಂಜಾನೆ 3 ಗಂಟೆಗೆ ಈ ಭೀಕರ ದುರಂತ ಸಂಭವಿಸಿದೆ. ಬಸ್ ಶಿವಮೊಗ್ಗ ಮತ್ತು ಹೊನ್ನಾವರ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿತ್ತು.
ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟಿದ್ದ ಕೆಎ 01-ಎಇ 5217 ನಂಬರಿನ ಸೀ ಬರ್ಡ್ ಬಸ್, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಕಂಟೈನರ್ ಲಾರಿಯೊಂದು ವೇಗವಾಗಿ ಬಂದು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್‌ಗೂ ಆವರಿಸಿದೆ.
ಸಜೀವ ದಹನ: ಬಸ್‌ನಲ್ಲಿ ಒಟ್ಟು 32 ಪ್ರಯಾಣಿಕರಿದ್ದರು. ಡೀಸೆಲ್ ಟ್ಯಾಂಕ್ ಬಳಿಯೇ ಲಾರಿ ಗುದ್ದಿದ್ದರಿಂದ ಬೆಂಕಿ ತೀವ್ರವಾಗಿ ಹರಡಿದ್ದು, ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿಲ್ಲ. ಈ ಪೈಕಿ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗೇ ಸಜೀವ ದಹನವಾಗಿದ್ದಾರೆ. ಉಳಿದ ಪ್ರಯಾಣಿಕರು ಕಿಟಕಿ ಹಾಗೂ ಎಮರ್ಜೆನ್ಸಿ ಡೋರ್ ಮೂಲಕ ಹಾರಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಲೀಕರ ಸ್ಪಷ್ಟನೆ: ಘಟನೆ ಕುರಿತು ಮಾಹಿತಿ ನೀಡಿರುವ ಸೀ ಬರ್ಡ್ ಸಂಸ್ಥೆ ಮಾಲೀಕರು, ‘ನಮ್ಮ ಬಸ್‌ನಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳಿದ್ದವು. ಎರಡು ಎಮರ್ಜೆನ್ಸಿ ಡೋರ್‌ಗಳೂ ಇದ್ದವು. ಆದರೆ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಮೊಹಮ್ಮದ್ ರಫೀಕ್ ಹುಲಗಾರ್ ಬಸ್ ಚಾಲನೆ ಮಾಡುತ್ತಿದ್ದರು,” ಎಂದು ತಿಳಿಸಿದ್ದಾರೆ.
ಒಟ್ಟು 29 ಸೀಟುಗಳ ಪೈಕಿ 25 ಮಂದಿ ಗೋಕರ್ಣಕ್ಕೆ, ಇಬ್ಬರು ಶಿವಮೊಗ್ಗ ಹಾಗೂ ಇಬ್ಬರು ಕುಮಟಾಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಆನ್‌ಲೈನ್ ಮೂಲಕ 28 ಸೀಟುಗಳು ಬುಕ್ ಆಗಿದ್ದವು. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಪ್ರಯಾಣಿಕರ ಪಟ್ಟಿ ಬಿಡುಗಡೆ : ಬಸ್‌ನಲ್ಲಿದ್ದ ಪ್ರಯಾಣಿಕರ ಸಂಪೂರ್ಣ ಪಟ್ಟಿ ಲಭ್ಯವಾಗಿದೆ. ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟಿದ್ದ ಈ ಬಸ್‌ನಲ್ಲಿ ಒಟ್ಟು 28 ಸೀಟುಗಳು ಆನ್‌ಲೈನ್ ಮೂಲಕ ಬುಕ್ ಆಗಿದ್ದವು. ಬಸ್ ಮಾಲೀಕರು ನೀಡಿರುವ ಮಾಹಿತಿಯಂತೆ, ರೆಡ್ ಬಸ್ ಮೂಲಕ 19 ಹಾಗೂ ಅಭಿ ಬಸ್ ಮೂಲಕ 9 ಸೀಟುಗಳನ್ನು ಪ್ರಯಾಣಿಕರು ಬುಕ್ ಮಾಡಿದ್ದರು. ಬೆಂಗಳೂರಿನಿಂದ ಹೊರಟಿದ್ದವರಲ್ಲಿ ಹೆಚ್ಚಿನವರು ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟವರಾಗಿದ್ದರು.
ಗೋಕರ್ಣಕ್ಕೆ ಹೊರಟಿದ್ದವರು (24 ಜನ). ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಹೆಚ್ ವಿ, ದಿಲೀಪ್, ಪ್ರೀತಿಸ್ವರನ್, ಬಿಂದು ವಿ, ಕವಿತಾ ಕೆ, ಅನಿರುದ್ಧ್ ಬ್ಯಾನರ್ಜಿ, ಅಮೃತಾ, ಈಶಾ, ಶಶಿಕಾಂತ್ ಎಂ, ನವ್ಯಾ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ, ದೇವಿಕಾ ಎಚ್, ಗಗನಶ್ರೀ ಎಸ್, ರಸ್ಮಿ ಮಹಲೆ, ರಕ್ಷಿತಾ ಆರ್, ಸೂರಜ್, ಮಾನಸ, ಮಲ್ಲಣ್ಣ ಮತ್ತು ಹೇಮರಾಜ್ ಕುಮಾರ್. ಕುಮಟಾಕ್ಕೆ ಹೊರಟಿದ್ದವರು (2 ಮಂದಿ) ಮೇಘರಾಜ್, ವಿಜಯ್ ಭಂಡಾರಿ ಹಾಗೂ ಶಿವಮೊಗ್ಗಕ್ಕೆ ಹೊರಟಿದ್ದವರು (ಇಬ್ಬರು) ಮಸ್ರತುನ್ನಿಸಾ ಎಸ್ ಎನ್, ಸೈಯದ್ ಜಮೀರ್ ಗೌಸ್.





