ಕನ್ನಡ ಪ್ರಸಿದ್ಧ ಲೇಖಕಿ, ಕಾದಂಬರಿಕಾರ್ತಿ, ಪ್ರಕಾಶಕಿ ಹಾಗೂ ಕಲಾವಿದೆ ಆಶಾ ರಘು (47) ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಶಾ ಅವರ ಪತಿ, ಖ್ಯಾತ ಆಹಾರ ತಜ್ಞ ಹಾಗೂ ಲೇಖಕ ಕೆಸಿ ರಘು ಎರಡು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್​ನಿಂದ ನಿಧನರಾಗಿದ್ದರು. ಆಶಾ ಅವರಿಗೆ ಪುತ್ರಿ ಇದ್ದಾರೆ. ಪತಿ ನಿಧನ ನಂತರ ಖಿನ್ನತೆಗೆ ಒಳಗಾಗಿದ್ದಆಶಾ ರಘು, ನಿನ್ನೆ ರಾತ್ರಿ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯವರು ಬಾಗಿಲು ಒಡೆದು ರಕ್ಷಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಆಶಾ ರಘು, ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದು, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಪಾಸನಾ  ಪ್ರಕಾಶನವನ್ನೂ ಆರಂಭಿಸಿ ಯುವ ಲೇಖಕ/ಲೇಖಕಿಯರ ಪುಸ್ತಕಗಳನ್ನು ಪ್ರಕಟಿಸಿದ್ದರು.

ಕೃತಿಗಳು: ಆವರ್ತ, ಗತ, ‘ಮಾಯೆ’, ‘ಚಿತ್ತರಂಗ’, ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, ‘ಆರನೇ ಬೆರಳು’, ‘ಬೊಗಸೆಯಲ್ಲಿ ಕಥೆಗಳು’, ‘ಅಪರೂಪದ ಪುರಾಣ ಕಥೆಗಳು’ ಮೊದಲಾದ ಕಥಾಸಂಕಲನಗಳನ್ನೂ, ‘ಚೂಡಾಮಣಿ’, ‘ಕ್ಷಮಾದಾನ’, ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು ‘ಪೂತನಿ ಮತ್ತಿತರ ನಾಟಕಗಳು’, ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ ‘ಆವರ್ತ’ ಕಾದಂಬರಿಯ ಕುರಿತ ಕೃತಿ ‘ಆವರ್ತ-ಮಂಥನ’ ಕೂಡಾ ಪ್ರಕಟಗೊಂಡಿದೆ.ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ ‘ಸಾಹಿತ್ಯಾಮೃತ ಸರಸ್ವತಿ’ ಎಂಬ ಬಿರುದು ನೀಡಿ ಗೌರವಿಸಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ