ಸರಸ್ವತಿ*

ನಾಡಿನ ಪ್ರಸಿದ್ದ ಹರಿದಾಸರ ಜೀವನ ಚರಿತ್ರೆಯನ್ನು ಮಧುಸೂದನ್ ಹವಾಲ್ದಾರ್ ಅವರು ಸಿನಿಮಾ ಮೂಲಕ ಜನರಿಗೆ ಪರಿಚಯಿಸಿಸುತ್ತಿದ್ದಾರೆ. ದಾಸಶ್ರೇಷ್ಠರಾದ “ಶ್ರೀಜಗನ್ನಾಥದಾಸರು”, ” ಶ್ರೀವಿಜಯದಾಸರು”, “ಶ್ರೀಮಹಿಪತಿದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಮುಂತಾದ ದಾಸಶ್ರೇಷ್ಠರ ಚಿತ್ರಗಳನ್ನು ನಿರ್ದೇಶಿಸಿರುವ ಮಧುಸೂದನ್ ಹವಾಲ್ದಾರ್ ಪ್ರಸ್ತುತ ನಿರ್ದೇಶಿಸಿರುವ “ಶ್ರೀಜಗನ್ನಾಥದಾಸರು ಭಾಗ ೨” ಚಿತ್ರ ಜನವರಿ 30 ರಂದು ತೆರೆಗೆ ಬರಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಸಹೃದಯಿ ಸ್ನೇಹಿತರ ಸಹಕಾರದಿಂದ ಐದು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ “ಶ್ರೀಜಗನ್ನಾಥದಾಸರು” ಚಿತ್ರ ಕರ್ನಾಟಕ ಮಾತ್ರ ಅಲ್ಲ. ಇಡೀ ವಿಶ್ವದಾದ್ಯಂತ ಜನಪ್ರಿಯತೆ ಪಡೆಯಿತು. ಆ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಈಗ ಆ ಚಿತ್ರದ ಮುಂದುವರಿದ ಭಾಗ “ಶ್ರೀಜಗನ್ನಾಥದಾಸರು ಭಾಗ ೨” ಚಿತ್ರ ಸಹ ಇದೇ ಜನವರಿ 30ರಂದು ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ತಾವೆಲ್ಲಾ ತೋರಿದ ಪ್ರೋತ್ಸಾಹ ಎರಡನೇ ಭಾಗಕ್ಕೂ ಮುಂದುವರೆಯಲಿ. ಜನವರಿ 30ರಂದು ಕರ್ನಾಟಕದಾದ್ಯಂತ ಈ ಚಿತ್ರ ಬಿಡುಗಡೆಯಾದರೆ, ಮುಂದಿನ ವಾರಗಳಲ್ಲಿ ವಿದೇಶದಲ್ಲೂ ತೆರೆ ಕಾಣಲಿದೆ. ಐದು ಭಾಗಗಳಲ್ಲಿ ಜಗನ್ನಾಥದಾಸರ ಚಿತ್ರವನ್ನು ಮಾಡುವ ಯೋಚನೆ ಇದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

Jagannath 1

ಜಗನ್ನಾಥದಾಸರು ಮೊದಲ‌ಭಾಗ ನೋಡಿದ ಜನರು ತೋರಿದ ಒಲವಿಗೆ ನಾನು ಚಿರ ಋಣಿ. ಈ ಚಿತ್ರಕ್ಕೂ ಅದೇ ರೀತಿ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಶರತ್ ಜೋಶಿ.

ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದು ನನಗೆ ಹೊಸತು. ಮಧುಸೂದನ್ ಹವಾಲ್ದಾರ್ ಅವರು ಜೊತೆಗಿದಿದ್ದರಿಂದ ಇದು ಸುಲಭವಾಯಿತು . ನಾನು, ಅನಂತರಾಜ ಮಿಸ್ತ್ರಿ, ಮಧುಸೂದನ್ ಹವಾಲ್ದಾರ್ ಮುಂತಾದವರು ಈ ಚಿತ್ರದ ಹಾಡುಗಳನ್ನು ಹಾಡಿದ್ದೇವೆ ಎಂದು ಸಂಗೀತ ನಿರ್ದೇಶಕ ಹಾಗೂ ಗಾಯಕ ರಾಯಚೂರು ಶೇಷಗಿರಿದಾಸ್ ಹೇಳಿದರು.

ಎರಡನೇ ಭಾಗ ಆರಂಭವಾದ ಕುರಿತು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್ ಮಾಹಿತಿ ನೀಡಿದರು.

ಚಿತ್ರದಲ್ಲಿ ನಟಿಸಿರುವ ವಿಷ್ಣುತೀರ್ಥ ಜೋಶಿ, ನಿಶ್ಚಿತ ಶೆಟ್ಟಿ, ಪುಷ್ಕರ್ ದೇಶಪಾಂಡೆ, ಸಚಿನ್ ಪುರೋಹಿತ್, ವಸಂತ್, ಗುರುರಾಜ್, ನಾರಾಯಣ್ ಕುಲಕರ್ಣಿ, ವಿಜಯ ಭಾಸ್ಕರ್, ಶ್ರೀಲತ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ