ಕಳೆದ ವರ್ಷ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ 260 ಜನರನ್ನು ಬಲಿತೆಗೆದುಕೊಂಡಿತ್ತು. ಇದೀಗ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನದಲ್ಲಿ ಮತ್ತೆ ಇಂಧನದ ಸ್ವಿಚ್ ಸಮಸ್ಯೆಯಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಲಂಡನ್ನಿಂದ ಬೆಂಗಳೂರಿಗೆ ಬಂದು ತಲುಪಿದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಫ್ಯೂಯಲ್ ಸ್ವಿಚ್ ದೋಷ ಪತ್ತೆಯಾದ ನಂತರ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ವಿಮಾನ ಲಂಡನ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತ್ತು.
ಈ ವೇಳೆ ಪೈಲಟ್ ವಿಮಾನದ ಕಾರ್ಯವಿಧಾನವನ್ನು ಪರಿಶೀಲಿಸುವಾಗ ಫ್ಯೂಯೆಲ್ ಕಂಟ್ರೋಲ್ ಸ್ವಿಚ್ನಲ್ಲಿ ಸಮಸ್ಯೆ ಕಂಡುಬಂದಿತ್ತು. ತಕ್ಷಣ ಅವರು ಏರ್ ಇಂಡಿಯಾ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡು ಅಧಿಕಾರಿಗಳು ಆ ವಿಮಾನದ ಹಾರಾಟವನ್ನು ರದ್ದುಗೊಳಿಸಿದ್ದಾರೆ. ವಿಮಾನದಲ್ಲಿ 200 ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರಸ್ತುತ ವಿಮಾನವನ್ನು ಸೇವಿಯಿಂದ ಹೊರಗಿಡಲಾಗಿದ್ದು, ತನಿಖೆ ನಡೆಸಲಾಗಿದೆ.
2025ರಲ್ಲಿ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನದ ದುರಂತದಲ್ಲಿ 260 ಜನರು ಮೃತಪಟ್ಟಿದ್ದರು. ಆ ವಿಮಾನದಲ್ಲಿ ಕೂಡ ಫ್ಯೂಯೆಲ್ ಸ್ವಿಚ್ ಸಮಸ್ಯೆಯಿಂದಲೇ ಅಪಘಾತ ಸಂಭವಿಸಿತ್ತು ಎಂಬುದು ವರದಿಯಲ್ಲಿ ಬಹಿರಂಗವಾಗಿತ್ತು.
ಈ ಬಗ್ಗೆ ಏರ್ ಇಂಡಿಯಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಪೈಲಟ್ಗಳಲ್ಲಿ ಒಬ್ಬರು ಫ್ಯೂಯೆಲ್ ಕಂಟ್ರೋಲ್ ಸ್ವಿಚ್ನಲ್ಲಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ನೀಡಿದ ಕೂಡಲೆ ಆ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹೀಗಾಗಿ, ಈ ಬಗ್ಗೆ ಡಿಜಿಸಿಎಗೂ ಮಾಹಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಪೂರ್ಣ ಪರಿಶೀಲನೆಯ ನಂತರ ಆ ವಿಮಾನದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಕ್ಕೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“DGCA ನಿರ್ದೇಶನದ ನಂತರ ಏರ್ ಇಂಡಿಯಾ ತನ್ನ ಫ್ಲೀಟ್‌ನಲ್ಲಿರುವ ಎಲ್ಲಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಪರಿಶೀಲಿಸಿದೆ ಎಂದು ಏರ್ ಇಂಡಿಯಾ ಹೇಳಿದೆ.





