ರಾಘವೇಂದ್ರ ಅಡಿಗ ಎಚ್ಚೆನ್.

ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ, ಕೆ. ಸೂರಜ್ ಶೆಟ್ಟಿ ನಿರ್ದೇಶನದ ‘ನಾನ್‌ವೆಜ್’ ಸಿನಿಮಾ ಫೆಬ್ರವರಿ 6ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ‘ನಾನ್‌ವೆಜ್’ ಸಿನಿಮಾ ‘ಸು ಫ್ರಂ ಸೋ’ ರೀತಿಯಲ್ಲಿ ಸಂಚಲನ ಮೂಡಿಸಿ ಹೊಸ ದಾಖಲೆ ಬರೆಯುವ ನೀರೀಕ್ಷೆಯ ಚಿತ್ರ. ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ, ಮಂಗಳೂರಿನ ಭಾಷೆಯ ಸಂಭಾಷಣೆಯನ್ನು ಹೊಂದಿರುವ ‘ನಾನ್‌ವೆಜ್’ ಒಂದು ಅತ್ಯುತ್ತಮ ಭಿನ್ನ ಕಥಾವಸ್ತುವನ್ನು ಹೊಂದಿದೆ. ಯಾವುದನ್ನು ಮಡಿಮೈಲಿಗೆ, ಅಸಹ್ಯ ಎಂದು ಪರಿಗಣಿಸಿದ್ದೇವೆಯೋ ಅದು ಎಷ್ಟು ಅನಿವಾರ್ಯ ಮತ್ತು ಸಹಜ ಎಂಬುದು ಈ ಚಿತ್ರದ ಒಂದು ಸಂದೇಶವೂ ಆಗಿದೆ.
‘ಸು ಫ್ರಂ ಸೋ’ ಸಿನಿಮಾದಲ್ಲಿ ನಟಿಸಿರುವ ಕೆಲವು ಪ್ರಮುಖ ಕಲಾವಿದರು ‘ನಾನ್‌ವೆಜ್’ ಸಿನಿಮಾದಲ್ಲೂ ಇದ್ದಾರೆ. ಪ್ರಕಾಶ್ ತೂಮಿನಾಡು, ಬಂದರೊ ಬಂದರು ಬಾವಾ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ಮುಂತಾದವರು ನಟಿಸಿದ್ದಾರೆ. ನಾಯಕಿಯಾಗಿ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ. ಜತೆಗೆ ಕುಸೇಲ್ದರಸೆ ನವೀನ್ ಡಿ. ಪಡೀಲ್ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎಂದೇ ಗುರುತಿಸಿಕೊಂಡಿರುವ ಅಥರ್ವ ಪ್ರಕಾಶ್ ಕೂಡ ನಾನ್‌ವೆಜ್‌ನ ಪ್ರಮುಖ ಪಾತ್ರದಲ್ಲಿದ್ದು, ಈ ಸಿನಿಮಾ ಭರ್ಜರಿ ಹಿಟ್ ಆಗುವ ನೀರೀಕ್ಷೆ ಇದೆ. ಹಾಸ್ಯಕ್ಕೂ ಕೊರತೆಯಿಲ್ಲ, ಮನೋರಂಜನೆಯೂ ಕಡಿಮೆ ಇಲ್ಲ, ಸಂದೇಶ – ಕಥೆಯೂ ಅದ್ಭುತ ಎಂಬುದು ಚಿತ್ರತಂಡದ ಮಾತು.

ನಾನ್‌ವೆಜ್‌ನ ವಿಷಯವೇ ಎಲ್ಲರಿಗೂ ಖುಷಿ ಕೊಡಲಿದೆ. ಪ್ರೀತಿಯನ್ನು ಹುಡುಕುತ್ತಾ ಹೋಗುತ್ತಿರುವ ಮುಗ್ಧ ಯುವಕನೊಬ್ಬನ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಆದ ಕಾರಣ ಇದು ಯುವ ಸಮುದಾಯವನ್ನು ಸೆಳೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಕ್ಕಳೊಂದಿಗೆ ಹೆತ್ತವರು ಜತೆಯಾಗಿ ಕುಳಿತು ನೋಡಬೇಕಾದ ಸಿನಿಮಾವಾಗಿದ್ದು, ಇದು ಮಕ್ಕಳು ದಾರಿ ತಪ್ಪುವುದನ್ನು ತಡೆಯಲಿದೆ. ಇಡೀ ಸಿನಿಮಾದ ಕಥೆ ಹಾಗೂ ಸಂದೇಶವನ್ನು ಹಾಸ್ಯದಲ್ಲೇ ತೆಗೆದುಕೊಂಡಿರುವ ಹೋಗಿರುವುದು ಒಂದು ದೊಡ್ಡ ಪ್ಲಸ್ ಪಾಯಿಂಟ್‌. ಯುವಜನತೆಯ ತಳಮಳ, ಗೊಂದಲ, ಕುತೂಹಲ ಗಳನ್ನು ಮನಸ್ಪರ್ಶಿಯಾಗಿ ಚಿತ್ರಿಸಲಾಗಿದೆ. ಅದಕ್ಕೊಂದು ಸುಂದರ ಕಥೆಯ ರೂಪ, ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ. ಲವ್ ಎಂದರೆ ಪ್ರೀತಿ. ಆದರೆ ಆ ಪ್ರೀತಿಯನ್ನು ನಾವು ಹೇಗೆಲ್ಲ ಅರ್ಥ ಮಾಡಿಕೊಳ್ಳುತ್ತೇವೆ ಹಾಗೂ ಅದಕ್ಕೆ ತಕ್ಕಂತೆ ನಾವು ಏನೇನು ಅನುಭವಿಸಬೇ ಕಾಗುತ್ತದೆ ಎಂಬುದನ್ನು ನಾನ್‌ವೆಜ್ ಸಿನಿಮಾದಲ್ಲಿ ನಾವು ನೋಡಬಹುದು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ