ರಾಘವೇಂದ್ರ ಅಡಿಗ ಎಚ್ಚೆನ್.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಸಿನಿಮಾ ಬಿಡುಗಡೆ ಮುಂದಿನ ತಿಂಗಳು ನಡೆಯಲಿದ್ದು, ಬಿಡುಗಡೆಯಿಗೂ ಮುನ್ನವೇ ಪ್ಯಾನ್-ಇಂಡಿಯಾ ಮಟ್ಟದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ.

ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕುಗಳ ಮಾರಾಟ ಪ್ರಕ್ರಿಯೆ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಣಾ ಹಕ್ಕುಗಳು ಅತಿದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು ಅವರ ಒಡೆತನದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ (SVC) ಸಂಸ್ಥೆ, ‘ಟಾಕ್ಸಿಕ್’ ಚಿತ್ರದ ಆಂಧ್ರ-ತೆಲಂಗಾಣ ವಿತರಣಾ ಹಕ್ಕುಗಳನ್ನು ಬರೋಬ್ಬರಿ ₹120 ಕೋಟಿ ಮುಂಗಡ (Advance on commission basis) ನೀಡಿ ಖರೀದಿ ಮಾಡಿದೆ.

ಈ ಒಪ್ಪಂದ ತೆಲುಗು ಹೊರಗಿನ ಸಿನಿಮಾವೊಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಪಡೆದ ಅತಿ ದೊಡ್ಡ ವಿತರಣೆ ಮೊತ್ತವಾಗಿದ್ದು, ಇದುವರೆಗೆ ತಮಿಳು ಸಿನಿಮಾಗಳೂ ಸಹ ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿರಲಿಲ್ಲ ಎಂಬುದು ಗಮನಾರ್ಹ.

‘ಟಾಕ್ಸಿಕ್’ ವಿತರಣೆ ಹಕ್ಕು ಪಡೆಯಲು ತೆಲುಗಿನ ಹಲವು ದೊಡ್ಡ ವಿತರಣಾ ಸಂಸ್ಥೆಗಳ ನಡುವೆ ಭಾರೀ ಪೈಪೋಟಿ ನಡೆದಿದ್ದು, ಅಂತಿಮವಾಗಿ ದಿಲ್ ರಾಜು ಅವರ ಸಂಸ್ಥೆ ಈ ಡೀಲ್ ತನ್ನದಾಗಿಸಿಕೊಂಡಿದೆ. ಈ ಕುರಿತು ಮಾತನಾಡಿದ ದಿಲ್ ರಾಜು, “‘ಕೆಜಿಎಫ್ 2’ ನಂತರ ಯಶ್ ಅವರ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ವಿಸ್ತಾರಗೊಂಡಿದೆ. ನಾಲ್ಕು ವರ್ಷಗಳಿಂದ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಮೇಲಿರುವ ನಿರೀಕ್ಷೆಗಳು ಅಪಾರವಾಗಿವೆ” ಎಂದು ಹೇಳಿದ್ದಾರೆ.

ಗೀತು ಮೋಹನ್ ದಾಸ್ ಮತ್ತು ಯಶ್ ಜಂಟಿಯಾಗಿ ಕಥೆ-ಚಿತ್ರಕಥೆ ರೂಪಿಸಿರುವ ಈ ಸಿನಿಮಾಗೆ ಗೀತು ಮೋಹನ್ ದಾಸ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದ್ದು, ಛಾಯಾಗ್ರಹಣವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶನವನ್ನು ರವಿ ಬಸ್ರೂರು, ಸಂಕಲನವನ್ನು ಉಜ್ವಲ್ ಕುಲಕರ್ಣಿ ಮಾಡಿದ್ದಾರೆ.

ಸಾಹಸ ದೃಶ್ಯಗಳಿಗೆ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಜೊತೆಗೆ ಅನ್ಬರಿವ್ ಹಾಗೂ ಕೆಚಾ ಖಂಪಾಕ್ಡಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಸೇರಿದಂತೆ ಹಲವು ಟಾಪ್ ನಾಯಕಿಯರು ಒಟ್ಟಿಗೆ ನಟಿಸಿದ್ದಾರೆ. ಜೊತೆಗೆ ಕೆಲವು ಜನಪ್ರಿಯ ವಿದೇಶಿ ನಟ-ನಟಿಯರೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಸಿನಿಮಾ ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ