ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್ ಬಾಸ್ ಕನ್ನಡ ಸೀಸನ್ 12’  ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಗಿಲ್ಲಿ ನಟ ಇದೀಗ ಸಿನಿಮಾ ಪ್ರಚಾರ ವಿಚಾರವಾಗಿ ವಿವಾದಕ್ಕೆ ಸಿಲುಕಿದ್ದಾರೆ. ಗಿಲ್ಲಿ ನಟ ಅಭಿನಯದ ‘ಸರ್ಕಾರಿ ಶಾಲೆ H8’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರದ ಪ್ರಚಾರಕ್ಕೆ ಗಿಲ್ಲಿ ನಟ ಹಾಜರಾಗಿಲ್ಲ ಎಂಬ ಆರೋಪದೊಂದಿಗೆ ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಿದೆ.

ಈ ವಿಚಾರ ಚರ್ಚೆಯಲ್ಲಿರುವ ನಡುವೆಯೇ, ಗಿಲ್ಲಿ ನಟ ಪ್ರಮುಖ ಪಾತ್ರದಲ್ಲಿರುವ ‘ಸೂಪರ್ ಹಿಟ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಇದೇ ವಿಷಯದ ಬಗ್ಗೆ ಗಿಲ್ಲಿ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.

‘ಸರ್ಕಾರಿ ಶಾಲೆ H8’ ಸಿನಿಮಾ ನಾನು ನಟಿಸಿ ಸುಮಾರು 2 ರಿಂದ 2.5 ವರ್ಷಗಳಾಗಿರಬಹುದು. ಆ ಚಿತ್ರದಲ್ಲಿ ನಾನು ಅಭಿನಯ ಮಾಡಿದ್ದೇನೆ. ಚಿತ್ರದ ಪ್ರಚಾರಕ್ಕೆ ನನ್ನ ಬೈಟ್ಸ್ ಅನ್ನು ಕಳಿಸಿದ್ದೇನೆ. ಹಾಗಿದ್ದರೂ ಅವರು ಯಾಕೆ ದೂರು ನೀಡಿದರೋ ನನಗೂ ಗೊತ್ತಿಲ್ಲ’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಪ್ರಚಾರ ಕಾರ್ಯಕ್ರಮಗಳಿಗೆ ಹಾಜರಾಗದ ವಿಚಾರಕ್ಕೆ ಸಂಬಂಧಿಸಿದಂತೆ, ‘ನನಗೆ ಇತರ ಸಿನಿಮಾ ಕೆಲಸಗಳ ಒತ್ತಡ ಇತ್ತು. ಕೆಲ ಸಂದರ್ಭಗಳಲ್ಲಿ ನಾನು ಫೋನ್ ಎತ್ತಲು ಆಗದೇ ಹೋಗಿರಬಹುದು. ಅದರಿಂದ ಅವರಿಗೆ ಬೇಸರ ಆಗಿರಬಹುದು. ಅವರ ತಪ್ಪು ಅಂತ ನಾನು ಹೇಳಲ್ಲ’ ಎಂದು ಗಿಲ್ಲಿ ಹೇಳಿದ್ದಾರೆ.

ಚಿತ್ರತಂಡದಿಂದ ಫಿಲ್ಮ್ ಚೇಂಬರ್‌ಗೆ ದೂರು ಹೋಗಿದ್ದರೂ, ತಾವು ನೇರವಾಗಿ ತಂಡವನ್ನು ಸಂಪರ್ಕಿಸಿಲ್ಲ ಎಂಬ ಆರೋಪಕ್ಕೂ ಗಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದೆ. ಆದರೆ ವಾಣಿಜ್ಯ ಮಂಡಳಿಗೆ ನನ್ನ ಉತ್ತರವನ್ನು ನೀಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ