ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಡೆಸಿದ ಪೂರ್ವ ಸಿದ್ಧತಾ ಪರೀಕ್ಷೆ (ಪ್ರಿಪರೇಟರಿ) ಸರಕಾರಿ ಪಿಯು ಕಾಲೇಜುಗಳ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರೆ, ಉಳಿದವರು ಒಂದು ವಿಷಯದಲ್ಲಿ ಫೇಲ್ ಆಗಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಾರಿ ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಜನವರಿಯಲ್ಲಿ ನಡೆಸಿತ್ತು. ಪರೀಕ್ಷೆಗೂ ಮುನ್ನ ಇಲಾಖೆ ಮಾದರಿ ಪ್ರಶ್ನೆಪತ್ರಿಕೆಗಳ ನೀಲನಕ್ಷೆ ನೀಡಿತ್ತು. ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗಿಲಿ ಎಂಬ ಉದ್ದೇಶದಿಂದ ಪ್ರಶ್ನೆಪತ್ರಿಕೆಯನ್ನು ಸರಳಗೊಳಿಸುವ ಪ್ರಯತ್ನ ಮಾಡಿತ್ತು. ಆದರೆ ಮೊದಲ ಹಂತದ ಪ್ರಿಪರೇಟರಿ ಪರೀಕ್ಷೆಯಲ್ಲಿ ಸರಕಾರಿ ಕಾಲೇಜುಗಳ ಫಲಿತಾಂಶ ಇಲಾಖೆಯ ಪ್ರಯತ್ನವನ್ನು ವಿಫಲಗೊಳಿಸಿದೆ.
ಪ್ರಿಪರೇಟರಿ ಪರೀಕ್ಷೆಯಲ್ಲಿ ರಾಜ್ಯಾದ್ಯಂತ 1,38,780 ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಾಗಿದ್ದು, 75,266 ವಿದ್ಯಾರ್ಥಿಗಳು ಉತ್ತೀರ್ಣರಾದರೆ, 63,514 ಮಕ್ಕಳು ಅನುತ್ತೀರ್ಣರಾಗಿದ್ದಾರೆ.
25,499 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ 14,89 ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ, 23,123 ವಿದ್ಯಾರ್ಥಿಗಳು ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ನಿರ್ಧರಿಸಲು ಮತ್ತು ಮಾರ್ಚ್ನಲ್ಲಿ ನಡೆಯುವ ಅಂತಿಮ ಪರೀಕ್ಷೆಗ ತಯಾರಿ ನಡೆಸಲು ಈ ಬಾರಿ ಇಲಾಖೆ ಸರಕಾರಿ ಮಾತ್ರವಲ್ಲದೆ ಖಾಸಗಿ, ಅನುದಾನಿತ ಪಿಯು ಕಾಲೇಜುಗಳನ್ನು ಪರಿಗಣಿಸಿ ಎರಡು ಪೂರ್ವಸಿದ್ಧತಾ ಪರೀಕ್ಷೆ ನಡೆಸಿತ್ತು. ಇಲಾಖೆಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಿತ್ತು.
ಎಲ್ಲೆಲ್ಲೆ ಎಷ್ಟು? : ಮೈಸೂರು ಜಿಲ್ಲೆಯಲ್ಲಿ 5,804, ಶಿವಮೊಗ್ಗದಲ್ಲಿ 3,910, ತುಮಕೂರಿನಲ್ಲಿ 2,940, ಬಳ್ಳಾರಿಯಲ್ಲಿ 3,798, ಬೆಂಗಳೂರು ಉತ್ತರ ಜಿಲ್ಲೆ 2,561 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ 510, ಚಿಕ್ಕಬಳ್ಳಾಪುರ 737, ಬೀದರ್ 744 ಮಕ್ಕಳು ಫೇಲ್ ಆಗಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲಗಳಲ್ಲಿ ಪಾಸ್ ಹಾಗೂ ಫೇಲ್ ಆದವರ ಸಂಖ್ಯೆ ಸಮಾನವಾಗಿದೆ.
ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣರಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾಋಎ. ಅಂತಹ ವಿದ್ಯಾರ್ಥಿಗಳಿವೆ ವಿಶೇಷ ತರಬೇತಿ, ಮರುಪಠಣ ತರಗತಿ ಹಾಗೂ ಮಾರ್ಗದರ್ಶನದ ಅಗತ್ಯವಿದ್ದು, ಅದನ್ನು ತಕ್ಷಣದಿಂದ ಮಾಡಲು ಸೂಚಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಭರತ್ ಸೆಲ್ವನ್ ಹೇಳಿದ್ದಾರೆ.





