ಪ್ರಪಂಚಾದ್ಯಂತ ಇರುವ ಎಲ್ಲಾ ದೇಶಗಳ ಸೈನ್ಯಗಳಿಗೆ ಹೋಲಿಸಿದಲ್ಲಿ ಭಾರತದ ಮಿಲಿಟರಿ ಶಕ್ತಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂದೇ ಹೆಸರುವಾಸಿಯಾಗಿದೆ. ಇತ್ತೀಚಿನ ಸರ್ಜಿಕಲ್ ಸ್ಟ್ರೈಕ್ ಏರ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ್ ಮಾಡಿದ ಮೇಲಂತೂ ಆ ನಂಬಿಕೆ ಇನ್ನೂ ಹೆಚ್ಚಾಗಿದೆ. ಆದರೆ ಇಂದಿಗೆ 350 ವರ್ಷಗಳ ಹಿಂದೆ ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೇ ಕೇವಲ ಕಾಡು ಜನರನ್ನು ಕಟ್ಟಿಕೊಂಡು ಅತೀ ಕಡಿದಾದ ಪ್ರದೇಶದ ಎತ್ತರದಲ್ಲಿದ್ದ ಒಂದು ದೊಡ್ಡ ಕೋಟೆಯಾದ ಸಿಂಹಗಡವನ್ನು ವಶಪಡಿಸಿಕೊಂಡ ಇತಿಹಾಸದ ಮುಂದೇ ಈ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳೂ ನಗಣ್ಯವಾಗುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಮೊಘಲರ ರಾಜ ಔರಂಗಜೇಬನಿಗೆ ಸಿಂಹಸ್ವಪ್ನವಾಗಿ ಕಾಡಿದ ಹಿಂದೂ ಸಂಸ್ಥಾನದ ಸಂಸ್ಥಾಪಕ ವೀರ ಶಿವಾಜಿಯ ನಂಬಿಕಸ್ಥ ಬಂಟ ತಾನಾಜಿ ತನ್ನ ಧೈರ್ಯ, ಶೌರ್ಯ ಮತ್ತು ಸಾಹಸಗಳಿಂದ 350 ವರ್ಷಗಳ ಹಿಂದೆ ಸಿಂಹಗಡವನ್ನು ವಶಪಡಿಸಿಕೊಂಡ ಈ ಕಥೆಯನ್ನು ಎಲ್ಲರಿಗೂ ಅದರಲ್ಲಿಯೂ ಇಂದಿನ ಮಕ್ಕಳಿಗೆ ತಿಳಿಸಲೇಬೇಕಾಗಿದೆ.

ಪುಣೆಯಿಂದ ಸುಮರು 12 ಮೈಲಿ ದೂರದಲ್ಲಿರುವ ಸಿಂಹಗಡ ಕೋಟೆಯನ್ನು ಮೂಲತಃ ಕೊಂಡಾನಾ ಎಂದು ಕರೆಯಲಾಗುತ್ತಿತ್ತು. ದೊಡ್ಡ ಸಹಾಯಾದ್ರಿ ಶ್ರೇಣಿಯ ಪೂರ್ವ ಭಾಗದಲ್ಲಿರುವ ಇದು ಪೂರ್ವ ಮತ್ತು ಪಶ್ಚಿಮದಲ್ಲಿ ಪುರಾಂದರ್‌ಗೆ ಅತ್ಯಂತ ಎತ್ತರದ ರೇಖೆಗಳಿಂದ ಸಂಪರ್ಕ ಹೊಂದಿದೆ. ಉತ್ತರ ಮತ್ತು ದಕ್ಷಿಣದಲ್ಲಿ, ಒರಟಾದ ಬೃಹತ್ಪರ್ವತವು ಸಂಪೂರ್ಣ ಕಡಿದಾದ ಪ್ರದೇಶವಾಗಿದೆ. ಇಂತಹ ದುರ್ಗಮ ಪರ್ವತದ ಮೇಲಿರುವ ಈ ಕೋಟೆಗೆ ಬಲವಾದ ಗೋಡೆಯಿಂದ ಸುತ್ತುವರೆದಿದ್ದು ಸುತ್ತಲೂ ಗೋಪುರಗಳಿಂದ ಕೂಡಿದೆ ಮತ್ತು ಇದನ್ನು ಪ್ರವೇಶಿಸಲು ಕೇವಲ ಏಕೈಕ ಪ್ರವೇಶ ದ್ವಾರವಿದೆ.
ಪುರಂದರ್ ಒಪ್ಪಂದದ ಮೂಲಕ ಶಿವಾಜಿಯ ಈ ಕೋಟೆ ಮೊಘಲರ ವಶವಾಗಿ ಅವರು ಇದನ್ನು ರಾಜ ಜೈ ಸಿಂಗ್‌ಗೆ ಒಪ್ಪಿಸಿದರು. ರಾಜಾ ಜೈ ಸಿಂಗ್ ಕೂಡಾ ಈ ಕೋಟೆಯನ್ನು ನೋಡಿಕೊಳ್ಳಲು ಉದಯ ಬಾನು ಅವರನ್ನು ನೇಮಿಸಿದರು, ಈ ಕೋಟೆಯಲ್ಲಿ ಮೊಘಲ್, ರಜಪೂತ್ ಮತ್ತು ಪಠಾಣ್ ಸೈನಿಕರ ಬೃಹತ್ ಸೈನ್ಯದ ತುಕಡಿಗಳು ಬೀಡುಬಿಟ್ಟವು. ಈ ಕೊಟೆಯನ್ನು ಬಹಳವಾಗಿ ಇಚ್ಚಿಸುತ್ತಿದ್ದ ಶಿವಾಜಿಯ ತಾಯಿ ಜೀಜಾಬಾಯಿಗೆ ಈ ಕೋಟೆಯ ನಷ್ಟವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗಾಗಿ ಮರಾಠಿಗರ ಹೆಮ್ಮೆಯ ಈ ಕೊಟೆಯನ್ನು ಪುನಃ ವಶಪಡಿಸಿಕೊಂಡು ಆಕೆಗೆ ಉಡುಗೊರೆಯಾಗಿ ನೀಡುವಂತೆ ಒತ್ತಾಯಿಸುತ್ತಿದ್ದರು. ಅತ್ಯಂತ ದುರ್ಗಮ ಮತ್ತು ಕಠಿಣವಾಗಿದ್ದ ಈ ಕೋಟೆ ಮತ್ತು ಅತ್ಯಂತ ಬಲಶಾಲಿಯಾಗಿದ್ದ ಉದಯ್ ಭಾನುವಿನ ಹಿಡಿತದಲ್ಲಿದ್ದ ಕಾರಣ ಶಿವಾಜಿಯೂ ಸಹಾ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಅಷ್ಟೇನೂ ಹೆಚ್ಚು ಉತ್ಸಾಹಭರಿತರಾಗಿರಲಿಲ್ಲ.
ಆದರೆ ಮೇಲಿಂದ ಮೇಲೆ ತಾಯಿಯ ಒತ್ತಾಯವನ್ನು ತಡೆಯಲಾರದೇ ಕಡೆಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಆಸಕ್ತಿ ತೋರಿ ಅದಕ್ಕೆ ಒಂದು ಸಮರ್ಥ ತಂಡವನ್ನು ಕಟ್ಟಲಾರಂಭಿಸಿದನು. ಆ ತಂಡಕ್ಕೆ ಆತ್ಯಂತ ಸಮರ್ಥನಾದ, ಸ್ವಾಮಿಭಕ್ತ ಮತ್ತು ತನಗೆ ಅತ್ಯಂತ ನಿಷ್ಠನಾದ ಮತ್ತು ತನ್ನ ಬಾಲ್ಯದ ಗೆಳೆಯನಾದ ತಾನಾಜಿ ಮಾಲುಸರೆಯನ್ನು ನಾಯಕನನ್ನಾಗಿ ನೇಮಿಸಲು ನಿರ್ಧರಿಸಿದನು. ಶಿವಾಜಿಗೆ ಆ ದೈತ್ಯ ತಾನಾಜಿಯ ಶೌರ್ಯ, ಸಾಹಸ ಮತ್ತು ಶಕ್ತಿಗಳ ಮೇಲೆ ಅತ್ಯಂತ ನಂಬಿಕೆ ಇತ್ತಾದರೂ ಈ ಸಾಹಸ ಅತ್ಯಂತ ಅಪಾಯಕಾರಿಯಾಗಿತ್ತು. ತನ್ನ ನಂಬುಗೆಯ ಬಂಟ ತಾನಾಜಿಯನ್ನು ಕರೆತರಲು ತನ್ನ ಸೈನಿಕರಿಗೆ ಹೇಳಿ ಕಳುಹಿಸಿದ. ಶಿವಾಜಿ ಮಹಾರಾಜರ ಸೈನಿಕರು ತಾನಾಜಿಯ ಮನೆಗೆ ಬಂದು ವಿಷಯ ತಿಳಿಸುವಷ್ಟರಲ್ಲಿ ತಾನಾಜಿಯ ಮನೆಯಲ್ಲಿ ಆತನ ಮಗನ ಮದುವೆ ನಿಶ್ಚಯವಾಗಿ ಮನೆಯನ್ನೆಲ್ಲಾ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು ಮತ್ತು ಮಾರನೆಯ ದಿನ ಆತನ ಮಗನ ಮದುವೆ ನಡೆಯಲಿತ್ತು ಆದರೆ ಸಿಂಹಗಢವನ್ನು ವೈರಿ ಪಡೆಗಳಿಂದ ಗೆದ್ದುಕೊಡಬೇಕಾದ ಹೊಣೆಗಾರಿಕೆಯನ್ನು ಶಿವಾಜಿ ಮಹಾರಾಜ ತನ್ನ ಹೆಗಲ ಮೇಲೆ ಹಾಕಿರುವುದನ್ನು ಸಂತೋಷದಿಂದ ಒಪ್ಪಿಕೊಂಡು ಮನೆಯ ಒಳಗೆ ಹೋಗಿ ಮದುವೆ ಉಡುಪು ಕಳಚಿ, ಸೈನಿಕನ ಉಡುಪನ್ನು ಧರಿಸಿ ಯುದ್ದಕ್ಕೆ ಹೊರಡಲು ಅನುವಾಗುತ್ತಾನೆ. ಹೀಗೆ ಸಿಂಹಗಢವನ್ನು ಗೆಲ್ಲಲು ಹೊರಟು ನಿಂತ ತಾನಾಜಿಗೆ ಮನೆಯವರು ನಾಳೆ ಮಗನ ಮದುವೆಯನ್ನು ಮುಗಿಸಿಕೊಂಡ ನಂತರ ಹೋಗಬಹುದಲ್ಲವೇ? ಎಂದಾಗ ತಾನಾಜಿ, ಮೊದಲು ಕೊಂಡಾಣದ ಮದುವೆ! ಆಮೇಲೆ ನನ್ನ ಮಗನ ಮದುವೆ ಎಂದು ಹೇಳಿ ಸೈನಿಕರ ಜೊತೆ ಸಿಂಹಗಡದತ್ತ ಹೊರಟೇ ಬಿಟ್ಟ.






