ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ  7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್ ​ಯುವಿ ಕಾರಿನ (XUV Car) ನಡುವೆ ಸರಣಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆ ಸ್ಥಳದಲ್ಲೇ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಮೃತಪಟ್ಟಿದ್ದಾರೆ. ರಸ್ತೆಯಲ್ಲೇ ರಕ್ತದ ಮಡುವೇ ಹರಿದಿದೆ.ಅಪಘಾತ ಹೇಗಾಯಿತು?: ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕ್ಯಾಂಟರ್ ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್​ನ ಚಾಸಿ (Chassis) ಕಟ್ ಆಗಿದೆ. ಚಾಸಿ ತುಂಡಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್, ನೇರವಾಗಿ ಎದುರಿಗೆ ಬರುತ್ತಿದ್ದ ಕಾರಿಗೆ ಗುದ್ದಿದೆ. ಡಿಕ್ಕಿಯ ಹೊಡೆತ ಎಷ್ಟು ಭಯಂಕರವಾಗಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ 6 ಜನರು ಮತ್ತು ಬೈಕ್ ಸವಾರ ಸೇರಿದಂತೆ ಒಟ್ಟು 7 ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಮನಕಲಕುವಂತಿತ್ತು.

ಅಪಘಾತದಲ್ಲಿ ಮೃತಪಟ್ಟವರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ತಿಳಿದುಬಂದಿದೆ. ಇವರು ಕೋಲಾರದಿಂದ ದೇವನಹಳ್ಳಿ ಕಡೆಗೆ ಪ್ರಯಾಣ ಬೆಳೆಸಿದ್ದರು.

ಅಪಘಾತಕ್ಕೀಡಾದ XUV 700 ಕಾರು ( ಸಂಖ್ಯೆ KA-03 NW-0138) ಹೊಸಕೋಟೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುತ್ತಿತ್ತು. ಸದ್ಯ ಕಾರಿನಲ್ಲಿದ್ದ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸದ್ಯ ಮೃತದೇಹಗಳನ್ನ ಹೊಸಕೋಟೆಯ ಸರ್ಕಾರಿ ಆಸ್ವತ್ರೆಗೆ ರವಾನಿಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ