– ರಾಘವೇಂದ್ರ ಅಡಿಗ ಎಚ್ಚೆನ್.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಮಾರ್ಚ್ 19ರಂದು ಬಿಡುಗಡೆಯಾಗಬೇಕಾಗಿತ್ತು. ಟೀಸರ್, ಪೋಸ್ಟರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಭಾರೀ ಹೈಪ್ ಸೃಷ್ಟಿಸಿದ್ದ ಚಿತ್ರಕ್ಕೆ ವಿತರಣೆ ಹಕ್ಕುಗಳ ಮಾರಾಟವೂ ಪೂರ್ಣಗೊಂಡಿತ್ತು. ಆದರೆ ಹಠಾತ್ತನೆ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಚಿತ್ರತಂಡ ನೀಡಿದ ಮಾಹಿತಿಯ ಪ್ರಕಾರ, ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ಸಿನಿಮಾಗಳಿಗೆ ಪ್ರಮುಖ ಮಾರುಕಟ್ಟೆಯಾಗಿರುವ ಯುಎಇ ಹಾಗೂ ಇತರ ಅರಬ್ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದುಬೈ, ಅಬುದಾಭಿ, ಶಾರ್ಜಾ, ಅಲ್ ಐನ್ ಸೇರಿದಂತೆ ಹಲವು ನಗರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳಿವೆ.
ಯುಎಇ ಮಾತ್ರವಲ್ಲದೆ ಕುವೈತ್, ಒಮಾನ್, ಕತಾರ್ ಮುಂತಾದ ದೇಶಗಳಲ್ಲೂ ಅನಿಶ್ಚಿತತೆ ಇದೆ. ಅಮೆರಿಕದಲ್ಲಿಯೂ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳ್ಳಬೇಕಿದ್ದ ಸಿನಿಮಾವನ್ನು ಈ ಸಮಯದಲ್ಲಿ ತೆರೆಗೆ ತರುವುದು ಕಲೆಕ್ಷನ್ ದೃಷ್ಟಿಯಿಂದ ಹಾನಿಕಾರಕವಾಗಬಹುದು ಎಂದು ಚಿತ್ರತಂಡ ಅಂದಾಜಿಸಿದೆ.
‘ಟಾಕ್ಸಿಕ್’ ಚಿತ್ರವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಕನಸು ಯಶ್ ಅವರದ್ದಾಗಿತ್ತು. ಆದರೆ ವಿಶ್ವದ ಹಲವೆಡೆ ಯುದ್ಧದ ಆತಂಕ ಇರುವಾಗ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ತಂಡ ಬಂದಿದೆ.
ಪ್ರಚಾರ ಕಾರ್ಯಕ್ರಮಗಳಿಗಾಗಿ ಅಮೆರಿಕ, ದುಬೈ, ಮಲೇಷ್ಯಾ, ಜಪಾನ್ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡುವ ಯೋಜನೆಯೂ ಇತ್ತು. ಆದರೆ ವೈಮಾನಿಕ ಸಂಚಾರ ವ್ಯವಸ್ಥೆಯ ಅಸ್ಥಿರತೆ ಹಾಗೂ ಭದ್ರತಾ ಆತಂಕಗಳನ್ನು ಗಮನಿಸಿ ಚಿತ್ರತಂಡ ಬಿಡುಗಡೆ ಮುಂದೂಡಿದೆ.





