ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವಾಗ ಕೆಲವು ವಿಷಯಗಳನ್ನು ನಿರ್ಲಕ್ಷಿಸುವುದು ಕ್ಲೇಮ್ ಸಮಯದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಕೆಳಗಿನ ಸಲಹೆಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ…..!

ಕೊರೋನಾ ಅವಧಿಯ ನಂತರ, ಆರೋಗ್ಯ ವಿಮೆಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಹೆಚ್ಚಾಗುತ್ತಿರುವ ಜಾಗೃತಿಯೊಂದಿಗೆ, ಜನರು ಈಗ ತಮ್ಮ ಆರೋಗ್ಯ ವಿಮೆಯಿಂದ ಯಾವ ಸೌಲಭ್ಯಗಳು ದೊರೆಯುತ್ತವೆ ಮತ್ತು ಯಾವುದನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಬನ್ನಿ, ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವಾಗ ಯಾವ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.

ವಿಮಾ ಸಲಹೆಗಾರರು ಹೇಳುವಂತೆ, “ಮೆಡಿಕ್ಲೇಮ್ ಪಾಲಿಸಿಯ ಬಗ್ಗೆ ಹೆಚ್ಚಿನ ಜನರು, ನಾನು ಆರೋಗ್ಯವಾಗಿದ್ದೇನೆ, ನನಗೆ ಅದು ಏಕೆ ಬೇಕು? ಅದರ ಅಗತ್ಯ ನನಗೆ ಇಲ್ಲ,” ಎಂದೇ ಹೇಳುತ್ತಾರೆ. ಆದರೆ ಅನಾರೋಗ್ಯ ಮತ್ತು ಅಪಘಾತ ಯಾರಿಗೂ ತಿಳಿಸಿಯೇ ಎಂದಿಗೂ ಬರುವುದಿಲ್ಲ ಎಂಬುದನ್ನು ಅವರು ಮರೆತುಬಿಡುತ್ತಾರೆ.

ಪ್ರತಿಯೊಬ್ಬರೂ ಅದನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಉತ್ತಮ ಚಿಕಿತ್ಸೆ ಅಥವಾ ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ದೊಡ್ಡ ಮೊತ್ತವನ್ನು ವ್ಯವಸ್ಥೆಗೊಳಿಸಲು, ಆರೋಗ್ಯ ನೀತಿಯು ಬಹಳ ಸಹಾಯಕವಾಗಿದೆ.

ಪರಿಹಾರ ತತ್ವದ ಮೇಲೆ ಮೆಡಿಕ್ಲೇಮ್ ನೀತಿ ಆಧಾರವಾಗಿದೆ. ಆರೋಗ್ಯ ವಿಮೆಯ ಅಡಿಯಲ್ಲಿ ಪಾಲಿಸಿಯನ್ನು ತೆಗೆದುಕೊಂಡ ನಂತರ ಒಂದು ನಿರ್ದಿಷ್ಟ ಅವಧಿಯ ನಂತರ ಪಾಲಿಸಿದಾರರು ಯಾವುದೇ ಗಂಭೀರ ಅನಾರೋಗ್ಯ ಅಥವಾ ಅಪಘಾತದಿಂದ ಬಳಲುತ್ತಿದ್ದರೆ, ವಿಮಾ ಕಂಪನಿಯು ಅವರಿಗೆ ಆಸ್ಪತ್ರೆಯ ಪ್ರಯೋಜನ ಅಥವಾ ಶಸ್ತ್ರಚಿಕಿತ್ಸಾ ಪ್ರಯೋಜನವನ್ನು ನೀಡುತ್ತದೆ.

ವಿಮಾದಾರನು 24 ಗಂಟೆಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರೆ, ವಿಮಾ ಕಂಪನಿಯು ಅವನ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತದೆ. ಮೆಡಿಕ್ಲೇಮ್ ಪಾಲಿಸಿಯ ನಿಯಮ ಮತ್ತು ಷರತ್ತುಗಳ ಪ್ರಕಾರ, ವಿಮಾದಾರನು ತೆಗೆದುಕೊಂಡ ಪಾಲಿಸಿಯ ಪ್ರಕಾರ ಪ್ರೀಮಿಯಂನ್ನು ಪಾವತಿಸಬೇಕಾಗುತ್ತದೆ.

ಅನೇಕ ಮೆಡಿಕ್ಲೇಮ್ ಪಾಲಿಸಿಗಳು ಮಹಿಳೆಯರಿಗೆ ಅನುಕೂಲಕರವಾದ ಯೋಜನೆಗಳನ್ನು ಹೊಂದಿವೆ. ಉದಾಹರಣೆಗೆ ಮಾತೃತ್ವ ವೆಚ್ಚಗಳನ್ನು ಭರಿಸುವ ಸೌಲಭ್ಯ, ಗರ್ಭಾವಸ್ಥೆಯಲ್ಲಿ ಉಂಟಾಗುವ ಎಲ್ಲಾ ತಪಾಸಣೆ ಮತ್ತು ವಿತರಣಾ ವೆಚ್ಚಗಳು ಈ ಪಾಲಿಸಿಯ ಅಡಿಯಲ್ಲಿ ಒಳಗೊಳ್ಳುತ್ತವೆ.

ಆದರೆ ಈ ಸೌಲಭ್ಯ ಪ್ರತಿ ಪಾಲಿಸಿಯಲ್ಲೂ ಲಭ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಇದಲ್ಲದೆ, ಅನೇಕ ಆರೋಗ್ಯ ನೀತಿಗಳು ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಗಳಿಗೊಮ್ಮೆ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಸಹ ಒದಗಿಸುತ್ತವೆ. ಆರೋಗ್ಯ ತಸಾಪಸಣೆಯ ಸೌಲಭ್ಯ ಪಾಲಿಸಿದಾರರಿಗೆ ಮಾತ್ರ ಲಭ್ಯವಿರುತ್ತದೆ. ಕೆಲವು ಫ್ಯಾಮಿಲಿ ಪ್ಲೇಟರ್‌ ಪಾಲಿಸಿಗಳಲ್ಲಿ, ಈ ಸೌಲಭ್ಯ ಇಡೀ ಕುಟುಂಬಕ್ಕೆ ಇರುತ್ತದೆ.

ಫ್ಯಾಮಿಲಿ ಪ್ಲೇಟರ್ಪಾಲಿಸಿ

ಪಾಲಿಸಿ ಏಜೆಂಟರು ವಿವರಿಸುವಂತೆ, ಅಗತ್ಯಕ್ಕೆ ತಕ್ಕಂತೆ ಬಜೆಟ್‌ ನ್ನು ಪರಿಗಣಿಸಿ ಮೆಡಿಕ್ಲೇಮ್ ಪಾಲಿಸಿಯನ್ನು ಆಯ್ಕೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಎರಡು ರೀತಿಯ ಮೆಡಿಕ್ಲೇಮ್ ಪಾಲಿಸಿಗಳಿವೆ. ಅವೆಂದರೆ, ವೈಯಕ್ತಿಕ ಪಾಲಿಸಿ ಮತ್ತು ಫ್ಯಾಮಿಲಿ ಪ್ಲೇಟರ್‌ ಪಾಲಿಸಿ. ಇವೆರಡೂ ವಿಭಿನ್ನ ಪ್ರೀಮಿಯಂ ಮತ್ತು ಸೌಲಭ್ಯಗಳನ್ನು ಹೊಂದಿರುತ್ತವೆ. ವೈಯಕ್ತಿಕ ಪಾಲಿಸಿಯು ಒಬ್ಬ ವ್ಯಕ್ತಿಯ ಹೆಸರಿನಲ್ಲಿರುತ್ತದೆ ಮತ್ತು ಅವನು ಮಾತ್ರ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.

ಆದರೆ ಫ್ಯಾಮಿಲಿ ಪ್ಲೇಟರ್‌ ಪಾಲಿಸಿ ಅಡಿಯಲ್ಲಿ ಎಲ್ಲಾ ಕುಟುಂಬ ಸದಸ್ಯರೂ ಒಂದೇ ಪಾಲಿಸಿ ಮತ್ತು ಪ್ರೀಮಿಯಂನಲ್ಲಿ ಒಳಗೊಳ್ಳುತ್ತಾರೆ. ಅನೇಕ ಜನರು ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರಿನಲ್ಲಿ ಪ್ರತ್ಯೇಕ ಪಾಲಿಸಿಗಳನ್ನು ಪಡೆಯುತ್ತಾರೆ. ಇದರಿಂದಾಗಿ ಪ್ರತಿಯೊಬ್ಬರೂ ವಿಭಿನ್ನ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಅನಾರೋಗ್ಯಕ್ಕೆ ಒಳಗಾಗುವುದು ಅನಿವಾರ್ಯವಲ್ಲ ಮತ್ತು ಪಾಲಿಸಿಯ ಪ್ರಯೋಜನವನ್ನು ಪಡೆಯಬಹುದು.

ಆದ್ದರಿಂದ, ಫ್ಯಾಮಿಲಿ ಪ್ಲೇಟರ್‌ಪಾಲಿಸಿಯು ಉಳಿತಾಯದ ದೃಷ್ಟಿಯಿಂದಲೂ ಪ್ರೂೕಜನಕಾರಿಯಾಗಿದೆ. ಇದರಲ್ಲಿ ಎಲ್ಲಾ ಸದಸ್ಯರೂ ಒಂದೇ ಪ್ರೀಮಿಯಂನಲ್ಲಿ ಕವರ್‌ ಆಗುತ್ತಾರೆ. ಜೊತೆಗೆ ಅಗತ್ಯವಿದ್ದರೆ, ಕುಟುಂಬದ ಯಾವುದೇ ಒಬ್ಬ ಸದಸ್ಯರು ಸಂಪೂರ್ಣ ಮೊತ್ತವನ್ನು ಪಡೆಯಬಹುದು.

48 ವರ್ಷದ ನಂತರ ವೈದ್ಯಕೀಯ ಪರೀಕ್ಷೆ

45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಮೆಡಿಕ್ಲೇಮ್ ಪಾಲಿಸಿಯಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಏಕೆಂದರೆ, ಅವರು ಕಡಿಮೆ ಪ್ರೀಮಿಯಂ ಪಾವತಿಸಬೇಕಾಗಿರುವುದು ಮಾತ್ರವಲ್ಲದೆ, ವೈದ್ಯಕೀಯ ಪರೀಕ್ಷೆಗಳ ವೆಚ್ಚವನ್ನು ಉಳಿಸಲಾಗುತ್ತದೆ. ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಯುವ ಜನತೆ ತಮ್ಮ ವೈದ್ಯಕೀಯ ಪರೀಕ್ಷೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿಲ್ಲ.

45 ವರ್ಷ ಮೇಲ್ಪಟ್ಟವರು ಪಾಲಿಸಿ ತೆಗೆದುಕೊಳ್ಳುವ ಮೊದಲು ತಮ್ಮ ಸ್ವಂತ ಖರ್ಚಿನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರೀಮಿಯಂ ಹೆಚ್ಚಿರುವುದಷ್ಟೇ ಅಲ್ಲ, ವೈದ್ಯಕೀಯ ವರದಿಯಲ್ಲಿ ಯಾವುದಾದರೂ ಕಾಯಿಲೆ ಕಂಡುಬಂದರೆ, ಅದಕ್ಕೆ ತಕ್ಕಂತೆ ಕೆಲವು ಕಂಪನಿಗಳು ಪಾಲಿಸಿ ಮತ್ತು ಪ್ರೀಮಿಯಂ ಕೂಡ ನಿಗದಿಪಡಿಸುತ್ತವೆ.

ತೆರಿಗೆ ಉಳಿತಾಯ ಮೆಡಿಕ್ಲೇಮ್ ನಂತಹ ನೀತಿಗಳು ನಿಮ್ಮ ಮತ್ತು ಕುಟುಂಬದ ಸದಸ್ಯರ ಭವಿಷ್ಯವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ, ನಿಮ್ಮ ಆದಾಯದಿಂದ ಕಡಿತಗೊಳಿಸಲಾದ ಬೃಹತ್‌ ತೆರಿಗೆಯನ್ನು ಸಹ ಉಳಿಸುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ ಅಡಿಯಲ್ಲಿ, ಒಬ್ಬ ವ್ಯಕ್ತಿ ತನ್ನ, ಮತ್ತು ಪತ್ನಿಯ ಅಥವಾ ಮಕ್ಕಳ ಹೆಸರಿನಲ್ಲಿ ಪಾಲಿಸಿಯನ್ನು ತೆಗೆದುಕೊಂಡು ವರ್ಷಕ್ಕೆ ರೂ. 15,000ವರೆಗೆ ಮತ್ತು ಹಿರಿಯ ನಾಗರಿಕರಿಗೆ ರೂ.20,000ವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು.

ಆಯ್ಕೆ ಮಾಡುವುದು ಹೇಗೆ?

ಪಾಲಿಸಿಯು ಎಷ್ಟು ದುಬಾರಿಯಾಗಿದೆ ಅಥವಾ ಎಷ್ಟು ಅಗ್ಗವಾಗಿದೆ ಎಂಬುದನ್ನು ಪರಿಗಣಿಸಿ ಆಯ್ಕೆ ಮಾಡಬಾರದು. ಅದು ನಿಮಗೆ ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಉದಾಹರಣೆಗೆ, ನೀವು ತೆಗೆದುಕೊಳ್ಳುತ್ತಿರುವ ಯೋಜನೆಯಲ್ಲಿ ಒಳಗೊಂಡಿರುವ ಆಸ್ಪತ್ರೆಗಳ ಪಟ್ಟಿಯಲ್ಲಿ ನಿಮ್ಮ ಮನೆಯ ಸಮೀಪ ಯಾವುದಾದರೂ ಆಸ್ಪತ್ರೆ ಇದೆಯೇ ಅಥವಾ ಇಲ್ಲವೇ? ಆ ಯೋಜನೆಯಡಿ ಯಾವ ರೋಗಗಳು ಒಳಗೊಳ್ಳುತ್ತವೆ? ಐಸಿಯು ಬಾಡಿಗೆ, ಆಸ್ಪತ್ರೆಯ ಕೊಠಡಿ ಬಾಡಿಗೆ ಮತ್ತು ನಿರ್ಣಾಯಕ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಆ ಯೋಜನೆಯಲ್ಲಿ ಸೇರಿಸಲಾಗಿದೆಯೇ ಅಥವಾ ಇಲ್ಲವೇ? ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡ ನಂತರವೇ ಪಾಲಿಸಿ ತೆಗೆದುಕೊಳ್ಳಬೇಕು.

ಪ್ರೀಮಿಯಂ, ಕ್ಲೇಮ್ ಸೆಟ್‌ ಮೆಂಟ್‌ ಪ್ರಕ್ರಿಯೆ, ಪಾಲಿಸಿಯನ್ನು ತೆಗೆದುಕೊಳ್ಳಲು ಕನಿಷ್ಠ ಮತ್ತು ಗರಿಷ್ಠ ವಯಸ್ಸು, ನವೀಕರಣಕ್ಕಾಗಿ ಗರಿಷ್ಠ ವಯಸ್ಸು, ಕ್ಲೇಮ್, ಬೋನಸ್‌ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದನ್ನು ಮರೆಯದಿರಿ.

ಯಾವುದು ಒಳಗೊಂಡಿರುವುದಿಲ್ಲ?

ಮೆಡಿಕ್ಲೇಮ್ ಪಾಲಿಸಿಯ ಅಡಿಯಲ್ಲಿ 24 ಗಂಟೆಗಳಿಗಿಂತ ಕಡಿಮೆ ಸಮಯ ಆಸ್ಪತ್ರೆಗೆ ದಾಖಲಾಗುವಂತಿಲ್ಲ. ಮೆಡಿಕ್ಲೇಮ್ ಪಾಲಿಸಿಗೆ ಒಳಪಡಬೇಕೆಂದರೆ, ಆಸ್ಪತ್ರೆಗೆ ದಾಖಲಾಗಿ 24 ಗಂಟೆ ಪೂರೈಸಿರಬೇಕು. ಆದ್ದರಿಂದ ಆಸ್ಪತ್ರೆಯ ಹಕ್ಕುಗಳನ್ನು 24 ಗಂಟೆಗಳ ಒಳಗೆ ಪಾತಿಸಲಾಗುವುದಿಲ್ಲ. ಇದರ ಹೊರತಾಗಿ ಹೋಮಿಯೋಪತಿ ಮತ್ತು ಆಯುರ್ವೇದ ಚಿಕಿತ್ಸೆ, ನೇತ್ರ ತಪಾಸಣೆ ಅಥವಾ ನಡೆಯುತ್ತಿರುವ ದಂತ ಚಿಕಿತ್ಸೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ವಿಷಯಗಳನ್ನು ಒಳಗೊಂಡಿರುವ ಮಾರುಕಟ್ಟೆಯಲ್ಲಿ ಕೇವಲ 12 ಕಂಪನಿಗಳಿವೆ.

ಕಾಳಜಿ ವಹಿಸಿ

ಅನೇಕ ಪಾಲಿಸಿ ಯೋಜನೆಗಳು ಗಂಭೀರ ಕಾಯಿಲೆಗಳನ್ನು ಕವರ್‌ ಮಾಡುತ್ತವೆ. ಆದರೆ, ಅದರೊಂದಿಗೆ `ಸಹ ಪಾವತಿ’ ಕೂಡ ಇದೆ. ಇದು ವಿಮೆದಾರರಿಗೆ ನಂತರ ತಿಳಿಯುತ್ತದೆ. ಸಹ ಪಾವತಿಯಲ್ಲಿ, ಕಂಪನಿಯು ಆಸ್ಪತ್ರೆಯ ವೆಚ್ಚದ ಶೇ.50-70ರಷ್ಟನ್ನು ಪಾವತಿಸುತ್ತದೆ ಮತ್ತು ಉಳಿದ ಮೊತ್ತವನ್ನು ವಿಮಾದಾರರೇ ಪಾವತಿಸಬೇಕಾಗುತ್ತದೆ.

ಕೆಲವು ಪಾಲಿಸಿಗಳು ರೋಗಗಳ ಚಿಕಿತ್ಸೆಗಾಗಿ ಸಹ ಪಾವತಿಯನ್ನು ಒಳಗೊಂಡಿರುವುದಿಲ್ಲ. ಕೆಲವೊಮ್ಮೆ ಕೊಠಡಿ ಬಾಡಿಗೆ ಮತ್ತು ಐಸಿಯು ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. ಆದ್ದರಿಂದ ಪಾಲಿಸಿಯನ್ನು ತೆಗೆದುಕೊಳ್ಳುವಾಗ, ಇದನ್ನು ಸಹ ಗಮನಿಸಬೇಕು.

ಕ್ಲೇಮ್ ಮಾಡಿದ ನಂತರ ಮತ್ತು ಪಾವತಿಸಿದ ನಂತರ ಅನೇಕ ಕಂಪನಿಗಳು ಪ್ರೀಮಿಯಂನ್ನು ಹೆಚ್ಚಿಸುತ್ತವೆ. ಆದ್ದರಿಂದ ಎಲ್ಲಾ ಮಾಹಿತಿಯನ್ನು ಮುಂಚಿತವಾಗಿಯೇ ಸಂಗ್ರಹಿಸಿ.

ಪಾಲಿಸಿಯನ್ನು ತೆಗೆದುಕೊಳ್ಳುವಾಗ, ನೀಡಿರುವ ನಮೂನೆಯಲ್ಲಿ ಸರಿಯಾದ ಎಲ್ಲಾ ಮಾಹಿತಿಯನ್ನು ನೀವು ಕೊಡಬೇಕು. ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಮರೆಮಾಚಬೇಡಿ.

ವಿಮಾ ಕಂಪನಿಗಳು ಕ್ಲೇಮ್ ನ್ನು ಪಾವತಿಸದಿದ್ದರೆ, ನೀವು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ)ಕ್ಕೆ ಲಿಖಿತವಾಗಿ ದೂರು ಸಲ್ಲಿಸಬಹುದು.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ