ಕೆಲವು ದಿನಗಳ ಹಿಂದೆ ಸನಾತನ ಧರ್ಮದ ಆಚಾರ ಮತ್ತು ವಿಚಾರಗಳ ಕುರಿತಾಗಿ ಬೌದ್ಧಿಕ್ ನೀಡಲು ಹೋಗಿದ್ದಾಗ, ಪ್ರಶ್ನೋತ್ತರದ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಋತುಸಾವ್ರವಾದಾಗ ಮೂಲೆಯಲ್ಲಿ ಏಕೆ ಕೂರಿಸುವುದು ಮಹಿಳೆಯರ ಮೇಲೆ ಮಾಡುವ ದೌರ್ಜನ್ಯವಲ್ಲವೇ? ಇತ್ತಿಚೆಗಂತೂ ಎಲ್ಲೆಡೆಯಲ್ಲೂ ಮಹಿಳೆಯರು ಅಬಲೆಯರಲ್ಲಾ! ಸಬಲೆಯರು ಅವರಿಗೂ ಪುರುಷರ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಹೋರಾಡುತ್ತಿರುವ ಸಮಯದಲ್ಲಿ ಇನ್ನೂ ಮಹಿಳೆಯರಿಗೆ ದೇವಾಲಯದೊಳಕ್ಕೆ ಬಿಟ್ಟುಕೊಳ್ಳುವುದಿಲ್ಲಾ ಇವೆಲ್ಲವ ಕಾರಣಗಿಳಿಂದಾಗಿ ಜನರು ಹಿಂದೂ ಧರ್ಮದಿಂದ ಇತರೇ ಧರ್ಮದ ಬಗ್ಗೆ ಆಕರ್ಶಿತರಾಗುತ್ತಿದ್ದಾರೆ ಎಂದೆನಿಸುತ್ತಿದೆ ಇದಕ್ಕೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದರು.
ನಿಜ ಹೇಳಬೇಕೆಂದರೆ, ಅವರು ಕೇಳಿದ ಪ್ರಶ್ನೆ ವಸ್ತುನಿಷ್ಟ ಮತ್ತು ಸೂಕ್ತ ಎನಿಸಿದರೂ, ಸಾರ್ವಜನಿಕವಾಗಿ ಅದರ ಕುರಿತು ಮಾತಾನಾಡುವುದು ಹೇಗೆ ಎಂಬ ಜಿಜ್ಞಾಸೆ ಮೂಡಿತಾದರೂ, ಸಿಕ್ಕ ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳದೇ ಹೋದಲ್ಲಿ ಈ ರೀತಿಯ ಸತ್ ಸಂಪ್ರದಾಯದ ಹಿಂದಿರುವ ಮಹತ್ವದ ಅರಿವನ್ನು ಮೂಡಿಸಲು ಸಾಧ್ಯವಾಗದೇ ಹೋದಾಗ ಮತ್ತಷ್ಟು ಮುಜುಗರವನ್ನು ಅನುಭವಿಸಬೇಕಾಗುತ್ತದೆ ಎಂದು ಭಾವಿಸಿ, ನಮ್ಮ ತಾಯಿ, ಅಕ್ಕ, ತಂಗಿಯರು, ಮಡದಿ ಮತ್ತು ಮಗಳ ಜೊತೆ ಐದು ದಶಕಗಳನ್ನು ಕಳೆದಿರುವ ಅನುಭವದಿಂದ ಈ ಲೇಖನವನ್ನು ಹಂಚಿಕೊಳ್ಳುತ್ತಿದ್ದೇನೆ.
ಮುಟ್ಟು
ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ತಾಯಿ ತಿಂಗಳಲ್ಲಿ ಮೂರು ದಿನಗಳ ಕಾಲ ಮುಟ್ಟು ಎಂದು ಮನೆಯ ಮೂಲೆಯೊಂದರಲ್ಲಿ ಕುಳಿತು ಕೊಂಡಾಗ, ಅವರನ್ನು ಯಾರು ಮುಟ್ಟಬಾರದು ಎನ್ನುತ್ತಿದ್ದರು. ಆಂತಹ ದಿನಗಳಲ್ಲಿ ನಮ್ಮ ತಂದೆಯವರೇ ತಿಂಡಿ ಅಡುಗೆ ಮಾಡಿ ಕೆಲಸಕ್ಕೆ ಹೋಗುತ್ತಿದ್ದರೆ, ಇನ್ನೂ ಕೆಲವು ಸಮಯಗಳಲ್ಲಿ ಊರಿನಿಂದ ಬಂದಿರುತ್ತಿದ್ದ ಚಿಕ್ಕಂಮ್ಮದಿರೋ ಇಲ್ಲವೇ ನಮ್ಮ ಚಿಕ್ಕಂಮ್ಮಂದಿರ ವಯಸ್ಸಿನ ನಮ್ಮ ಅಕ್ಕ ಪಕ್ಕದ ಮನೆಯ ಹೆಣ್ಣು ಮಕ್ಕಳು ಬಂದು ಅಡುಗೆ ಮಾಡುವುದೋ ಇಲ್ಲವೇ ಮಾಡಿಟ್ಟ ಅಡುಗೆಯನ್ನು ನಮಗೆ ಬಡಿಸಿ ಹೋಗುತ್ತಿದ್ದರು. ನಾವು ಸ್ವಲ್ಪ ದೊಡ್ಡವರಾಗಿ ಪಾತ್ರೆಗಳನ್ನು ಎತ್ತುವಷ್ಟರ ಮಟ್ಟಿಗೆ ಸಧೃಢರಾದಾಗ, ಅಮ್ಮ ದೂರದಿಂದಲೇ ಅಕ್ಕಿ ಇಷ್ಟು ಹಾಕು, ಬೇಳೇ ಇಷ್ಟು ಹಾಕು ಎಂದು ಹೇಳುತ್ತಿದ್ದಕ್ಕೆ ಅನುಗುಣವಾಗಿ ನಾವುಗಳು ಮಾಡುತ್ತಲೇ ಹೋದ ಕಾರಣ, ನಮಗೇ ಅರಿವಿಲ್ಲದಂತೆ ಸಹಜವಾಗಿಯೇ ನಮಗೆಲ್ಲರಿಗೂ ಅಡುಗೆ ಮಾಡುವುದರಲ್ಲಿ ಅಸಕ್ತಿ ಮೂಡುವಂತಾಗಿ ಇನ್ನೂ ಸ್ವಲ್ಪ ದೊಡ್ಡವರಾದ ನಂತರ ಅಮ್ಮನ ನೆರವಿಲ್ಲದೆಯೇ ಹೊಸ ಹೊಸ ಅಡುಗೆಯ ಪ್ರಯೋಗ ಮಾಡಿ ಪಾತ್ರೆಯನ್ನು ಸೀದಿಸಿಯೋ ಇಲ್ಲವೇ ಮತ್ತಾವುದೋ ಅವಘಡವನ್ನು ಮಾಡಿ ಅಬ್ಬಬ್ಬಾ ಈ ಮೂರು ದಿನಗಳಲ್ಲಿ ನಿಮ್ಮೊಂದಿಗೆ ಏಗುವುದು ಸಾಕು ಮತ್ತು ಆದಾದ ನಂತರ ನೀವು ಮಾಡಿಟ್ಟ ಗಲೀಜನ್ನು ಶುದ್ದೀಕರಣ ಮಾಡುವುದೂ ಸಾಕು ಎಂದು ನಮ್ಮಮ್ಮ ಹೇಳುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.
ಮೈನೆರದಳು/ದೊಡ್ಡವಳಾದಳು

ನಾವು ಹೈಸ್ಕೂಲ್ ಓದುತ್ತಿರುವ ಸಮಯದಲ್ಲಿ ತರಗತಿಯಲ್ಲಿ ಹೆಣ್ಣು ಮಕ್ಕಳು ಇದ್ದಕ್ಕಿದ್ದಂತೆಯೇ ಮಿಸ್ ಎಂದು ನಿಂತು ಕೊಳ್ಳುತ್ತಿದ್ದಂತೆಯೇ ಟೀಚರ್ ಆವಳ ಬಳಿ ಹೋಗಿ ಗುಟ್ಟಾಗಿ ಮಾತನಾಡಿ ಅವಳ ಮನೆ ತಿಳಿದ್ದವರ ಅಕ್ಕ ಪಕ್ಕದ ಹುಡುಗಿಯರೊಂದಿಗೆ ಅವಳನ್ನು ಮನೆಗೆ ಕಳುಹಿಸಿಕೊಟ್ಟರೆ, ಇನ್ನು ಎರಡು ಮೂರು ವಾರ ಆ ಹುಡುಗಿ ಶಾಲೆಗೆ ಚಕ್ಕರ್. ಅನೇಕ ಬಾರಿ ಅವಳಿಗೆ ಏನಾಯ್ತು ಎಂದು ಕೇಳಿದಾಗ, ಅವಳು ಮೈನೆರೆದಿದ್ದಾಳೆ ಅಂತಲೋ ಇಲ್ಲವೇ ದೊಡ್ಡವಳಾಗಿದ್ದಾಳೆ ಎಂದು ಹೇಳುತ್ತಿದ್ದಾಗ, ಅದರ ಅರ್ಥ ಗೊತ್ತಿಲ್ಲದೇ, ಕುತೂಹಲದಿಂದ ಹಾಗೆಂದರೇನೂ ಎಂದು ಕೇಳಿದರೆ ಸಾಕು, ಥೂ! ಗಂಡು ಮಕ್ಕಳು ಅದನ್ನೆಲ್ಲಾ ಕೇಳಬಾರದು ಎಂದು ಬೈಯ್ಯುತ್ತಿದ್ದ ಕಾರಣ, ನಾವುಗಳು ಸಹಾ ಅದರ ಬಗ್ಗೆ ಹೆಚ್ಚಿನ ವಿಚಾರಿಸುತ್ತಿರಲಿಲ್ಲ. ನಂತರ ನಮ್ಮ ಮನೆಯ ಅಕ್ಕ ತಂಗಿಯರು ಮೈ ನೆರೆದಾಗ, ಎರಡು ವಾರಗಳ ಕಾಲ ಅವರನ್ನು ಒಂದು ಕಡೆ ಕೂರಿಸಿ, ಪ್ರತೀ ದಿನವೂ ಸ್ನಾನ ಮಾಡಿಸಿ ಅವರಿಗೆ ಇಷ್ಟವಾದ ಒಳ್ಳೊಳ್ಳೆ ಅಡುಗೆಯನ್ನು ಮಾಡಿ ಅದರ ಜೊತೆ ಬಾದಾಮಿ, ಉತ್ತುತ್ತೇ, ಗೊಡಂಬಿ, ಕೊಬ್ಬರಿ, ಬೆಲ್ಲ ಹಾಕಿದ ಅಂಟುಂಡೆ ಮಾಡಿ ಕೊಡುತ್ತಿರುವಾಗ, ನಾವುಗಳೂ ನಾಚಿಕೆ ಬಿಟ್ಟು ಅಮ್ಮಾ ಮಾಡಿಟ್ಟಿರುತ್ತಿದ್ದ ಅಂಟುಂಡೆಯನ್ನು ಕದ್ದು ತಿಂದದ್ದೂ ಉಂಟು. ಆದಾದ ನಂತರ ನೆಂಟರಿಷ್ಟರು ಮತ್ತು ಅಕ್ಕ ಪಕ್ಕದವರನ್ನು ಕರೆದು ಅದೊಂದು ದಿನ ದೊಡ್ಡದಾದ ಸಮಾರಂಭವನ್ನು ಮಾಡಿದ ನಂತರ ಮುಂದಿನ ತಿಂಗಳಿನಿಂದ ಆಕೆಯೂ ಅಮ್ಮನಂತೆ ತಿಂಗಳಲ್ಲಿ ಮೂರು ದಿನಗಳ ಕಾಲ ಮುಟ್ಟು ಎಂದು ಮೂಲೆ ಸೇರುತ್ತಿದ್ದಳು. ಆ ಮೂರು ದಿನಗಳಲ್ಲಿ ಅಕೆಯನ್ನು ಯಾರೂ ಸಹಾ ಮುಟ್ಟುವುದಿರಲಿ, ಬೈಯ್ಯುವಂತೆಯೂ ಇರಲಿಲ್ಲ. ಒಂದು ರೀತಿ ಮಹಾರಾಣಿಯಂತೆ ನೋಡಿಕೊಳ್ಳುತ್ತಿದ್ದದ್ದನ್ನು ಕಂಡು ನಮಗೆ ಅಸೂಯೆಯಾಗಿದ್ದಂತೂ ಸುಳ್ಳಲ್ಲ.





