ಶೈಕ್ಷಣಿಕವಾಗಿ ಯಶಸ್ವಿ ಮುನ್ನಡೆ, ಕಲೆಯ ಹಲವು ವಿಭಾಗಗಳಲ್ಲಿ ಎತ್ತಿದ ಕೈ, ಸಮಾಜಮುಖಿ ಸೇವೆಯಲ್ಲಿ ಹೆಸರು ಗಳಿಸಿರುವ ಬಹುಮುಖ ಪ್ರತಿಭೆಯ ಗಣಿ ಲತಾರ ಅಪಾರ ವೈವಿಧ್ಯಮಯ ಸಾಧನೆಗಳ ಬಗ್ಗೆ ತಿಳಿಯೋಣವೇ……?
ಮಹಿಳೆಯರು ಧೈರ್ಯದಿಂದ ತಮ್ಮ ಹಕ್ಕು ಚಲಾಯಿಸಬೇಕು ಎನ್ನುತ್ತಾ, ಮಹಿಳಾ ಸಬಲೀಕರಣದತ್ತ ಗಟ್ಟಿಯಾಗಿ ದನಿಯೆತ್ತಿ ಮಹಿಳೆಯರನ್ನು ಪರಾವಲಂಬನದಿಂದ ಹೊರಬರುವಂತೆ ಉತ್ತೇಜಿಸಿ, ಪ್ರೋತ್ಸಾಹಿಸುವ ಲತಾ ಎಸ್. ಹಲವು ಕಾರಣಗಳಿಗೆ ಶ್ಲಾಘನೀಯರಾಗುತ್ತಾರೆ.
ಲತಾ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನ ಹೃದಯ ಭಾಗವೇ ಆಗಿರುವ ಬಸನವಗುಡಿಯಲ್ಲಿ. ಅಜ್ಜಿ ತಾತಾ ಮೊದಲಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ವಂಶಾವಳಿ. ಹೀಗಾಗಿ ಲತಾರಿಗೂ ಓದಿಗೂ ಅವಿನಾಭಾವ ಸಂಬಂಧ. ಜೊತೆ ಜೊತೆಗೇ ಸಾಹಿತ್ಯ, ಸಂಗೀತ, ನೃತ್ಯಗಳ ನಂಟು. ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗರಿಮೆ!
ಶಾಸ್ತ್ರೀಯ ನೃತ್ಯ ರಂಗಪ್ರವೇಶ
ಶಾಸ್ತ್ರೀಯ ನೃತ್ಯದಲ್ಲಿ ರಂಗಪ್ರವೇಶದೊಂದಿಗೆ ಹತ್ತಾರು ಪ್ರದರ್ಶನಗಳನ್ನು ನೀಡಿರುವ ವಿದುಷಿ. `ಬುಕ್ಸ್ ಆರ್ ಮೈ ಬೆಸ್ಟ್ ಫ್ರೆಂಡ್ಸ್’ ಎನ್ನುವ ಲತಾ ಎಂ.ಎ, ಬಿ.ಎಡ್, ಎಂ.ಫಿಲ್ ಪದವಿಗಳನ್ನು ಗಳಿಸಿ, ವೃತ್ತಿಯಲ್ಲಿ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಲೇ ಪಿ.ಎಚ್.ಡಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ. `ಕಲಿಕೆಗೆ ಎಂಥ ವಯಸ್ಸು?’ ಎಂಬ ಇವರ ಜ್ಞಾನದಾಹ ಇಂದಿನ ಎಲ್ಲಾ ಆಧುನಿಕ ತರುಣಿಯರಿಗೂ ಮಾದರಿ.
ಶಾಲಾ ಅವಧಿಯ ನಂತರ ಮನೆಯಲ್ಲಿ ಮಕ್ಕಳಿಗೆ ಉಚಿತವಾಗಿ ಸಂಸ್ಕೃತ ಪಾಠ ಹೇಳಿ ಕೊಡುವುದರ ಜೊತೆಗೆ, ಶೃಂಗೇರಿ ಶಾರದಾ ವಿದ್ಯಾಪೀಠದವರು ನಡೆಸುವ ಸಂಸ್ಕೃತ ಪರೀಕ್ಷೆಗಳಿಗೆ ನೋಂದಾಯಿಸಿ ವಿವಿಧ ಸ್ತರದ ಪರೀಕ್ಷೆಗಳಿಗೆ ತಯಾರು ಮಾಡುತ್ತಿದ್ದಾರೆ. ಸಂಗೀತಾಸಕ್ತರಿಗೆ ಭಾವಗೀತೆಗಳನ್ನು ಹೇಳಿಕೊಡುವುದು ಇವರ ಹಿರಿಮೆ ತೋರಿಸುತ್ತದೆ.
ಮಕ್ಕಳಿಗೊಬ್ಬ ಮಾರ್ಗದರ್ಶಿ
ಹೈಸ್ಕೂಲ್ ಮಕ್ಕಳಿಗೆ ಮನೆ ಪಾಠ ಹೇಳಿಕೊಡುವಲ್ಲಿ ಪಡೆಯುವ ಶುಲ್ಕವನ್ನು `ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬಂತೆ ತಿಂಗಳಿಗೊಮ್ಮೆ ಅಬಲಾಶ್ರಮ, ವೃದ್ಧಾಶ್ರಮ, ಅನಾಥಾಶ್ರಮ ಇತ್ಯಾದಿ ಅರ್ಹ ಸಂಘ ಸಂಸ್ಥೆಗಳಿಗೆ ವಿನಿಯೋಗಿಸುವುದು ಇವರ ನಿಯಮಿತ ಕಾರ್ಯಕ್ರಮ ಪಟ್ಟಿಯಲ್ಲಿದೆ.
ಇದಲ್ಲದೆ ಕಿವುಡು ಮೂಗ, ವಿಶಿಷ್ಟಚೇತನರ ಆಶ್ರಮಗಳಿಗೆ ವೈಯಕ್ತಿಕವಾಗಿ ನೆರವಿಗೆ ನಿಂತು ಅಲ್ಲೊಂದು ಬೆಳಕಿನ ಜ್ಯೋತಿ ಬೆಳಗಿಸುವಲ್ಲಿ ತೃಪ್ತಿ ಕಾಣುವುದು ಇವರ ವಿಶೇಷ ಗುಣ ಎನ್ನಬಹುದು.
ಸಮಾಜಮುಖಿ ಸೇವೆಗಳು
ವೃತ್ತಿಯಿಂದ ಹೊರಗೆ ಈಕೆ ಒಳ್ಳೆಯ ಕಾರ್ಯಕ್ರಮ ನಿರ್ವಾಹಕಿ ಕೂಡ. ಪ್ರತಿಭೆಯಿದ್ದರೆ ಸಾಲದು, ಅದಕ್ಕೊಂದು ವೇದಿಕೆ ಮುಖ್ಯ ಎಂಬ ಅಂಶ ಮನಗಂಡರು ಇವರು. ಐದು ಬೆರಳು ಒಂದೇ ಸಮ ಇರುವುದಿಲ್ಲ ಆದರೆ ಪ್ರತಿಯೊಂದು ಬೆರಳಿಗೂ ಅವುಗಳದೇ ಆದ ಪ್ರಾಮುಖ್ಯತೆ, ವೈಶಿಷ್ಟ್ಯತೆ ಇರುತ್ತದೆ ಎಂದು ಸಾಬೀತು ಪಡಿಸಿದ್ದಾರೆ. ಇದನ್ನು ತಾಳ್ಮೆಯಿಂದ ಅರಿಯಬೇಕು ಎನ್ನುತ್ತಲೇ, ಹತ್ತಾರು ಚಿಣ್ಣರಲ್ಲಿ ಹುದುಗಿದ ಪ್ರತಿಭೆಗಳಿಗೆ ದಾರಿ ತೋರುವ ಹೆಗ್ಗಳಿಕೆ ಇವರದು. ಸ್ವತಃ ಶಿಕ್ಷಣ ಸಂಸ್ಥೆಯಲ್ಲಿ ಇರುವುದರಿಂದ ಫಕ್ಕನೆ ಗುರುತಿಸುವ ಕಲೆಗಾರಿಕೆಯೂ ಇವರಿಗಿದೆ.
ಇಷ್ಟೇ ಅಲ್ಲದೆ, ತೀರಾ ತಳಮಟ್ಟದ ಅಥವಾ ದುರ್ಬಲ ಮಹಿಳೆಯರಿಗೆ ಸ್ವಾವಲಂಬಿಗಳಾಗಲು ಅನುವಾಗುವಂತೆ ಆರ್ಥಿಕ ಸಹಾಯ, ಸಲಹೆ, ಸೂಚನೆ, ಬೆಂಬಲ ನೀಡಿ ಅಲ್ಲೊಂದು ಕೃತಕೃತ್ಯ ಭಾವ ಹೊಂದುತ್ತಾರೆ.
ಪ್ರಶಸ್ತಿ ಪಾರಿತೋಷಕಗಳು
ಇಸ್ಕಾನ್ ನಲ್ಲಿ ಸಮಯ ಸಿಕ್ಕಾಗೆಲ್ಲ ಸೇವೆ ಸಲ್ಲಿಸುವ ಇವರು, ಪ್ರತಿಷ್ಠಿತ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಸದಸ್ಯೆ. ತಮ್ಮ ವೃತ್ತಿ ಕ್ಷೇತ್ರದಲ್ಲಿ ಈವರೆಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಸಂಸ್ಥೆಗಳಿಂದ ಐದು ಬಾರಿ ಉತ್ತಮ ಶಿಕ್ಷಕಿ ಪ್ರಶಸ್ತಿ ಮತ್ತು ಎಂಟು ಬಾರಿ ಉತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಲಾ ದರ್ಪಣ ಆರ್ಟ್ಸ್ ವತಿಯಿಂದ ಮಹಿಳಾ ಸಾಧಕಿ ಪ್ರಶಸ್ತಿ, ನೃಪತುಂಗ ಸಂಸ್ಥೆಯಿಂದ ರಾಜ್ಯೋತ್ಸವ ಪ್ರಶಸ್ತಿ, ಚಿಂತನಪಲ್ಲಿ ಚಾರಿಟಬಲ್ ಟ್ರಸ್ಟ್, ಜೆ.ಪಿ ಪಾರ್ಕ್ ಸಂಸ್ಥೆ, ಶಂಕರ್ ನಾಗ್ ಅಸೋಸಿಯೇಷನ್, ಹೀಗೆ ಹತ್ತು ಹಲವು ನೋಂದಾಯಿತ ಸಮಿತಿಗಳಿಂದ ಸೇವಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಹೆಣ್ಣುಮಕ್ಕಳತ್ತ ಕಾಳಜಿ
ಹೆಣ್ಣುಮಕ್ಕಳೆಂದರೆ ಅಪಾರ ಕಾಳಜಿ, ಗೌರವ ತೋರುವ ಇವರ ಮಾತಿನಲ್ಲಿ ಹೇಳುವುದಾದರೆ, ‘ನನ್ನ ತಾಯಿ ತಂದೆ ನನ್ನನ್ನು ಯಾವುದಕ್ಕೂ ಕುಂದು ಮಾಡದೇ, ಗಂಡು ಮಗನಂತೆ ಧೈರ್ಯವಾಗಿ ಬೆಳೆಯುವ ಸಂಸ್ಕಾರ ಕಲಿಸಿದ್ದಾರೆ. ಮನೆಯಲ್ಲೇ ಪ್ರಭಾವೀ ವ್ಯಕ್ತಿಗಳಿದ್ದರೂ ನೇರ ದಾರಿಯಲ್ಲಿ ನಮ್ಮ ಗುರಿಯನ್ನು ಸಾಧಿಸಲು ಬಾಲ್ಯದಿಂದಲೂ ಹುರಿದುಂಬಿಸಿದ ಫಲ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ,’ ಎಂದು ಹೆತ್ತವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
`ವಿದ್ಯೆ ಎಲ್ಲಕ್ಕಿಂತ ದೊಡ್ಡ ಆಸ್ತಿ. ಧೈರ್ಯಂ ಸರ್ವತ್ರ ಸಾಧನಂ! ಯಾವುದಕ್ಕೂ ಹೆದರಿ ಮೂಲೆ ಸೇರಬಾರದು. ನಮ್ಮ ಹಕ್ಕನ್ನು ಚಲಾಯಿಸಲು ಹಿಂಜರಿಯಬಾರದು,’ ಎನ್ನುವ ಧ್ಯೇಯ ವಾಕ್ಯದಿಂದ ಎಲ್ಲರಿಗೂ ಅನುಕರಣೀಯ ಮಹಿಳೆಯಾಗಿ ಲತಾ ಎಲ್ಲರಿಗೂ ಸ್ಛೂರ್ತಿಯಾಗುತ್ತಾರೆ.
– ಕೆ.ವಿ. ರಾಜಲಕ್ಷ್ಮಿ





