ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಏ.18ರವರೆಗೆ ಕರಾವಳಿ ಕರ್ನಾಟಕದಾದ್ಯಂತ ಬಿಸಿ ಹಾಗೂ ತೇವಾಂಶದ ವಾತಾವರಣ ಇರುವ ಸಾಧ್ಯತೆಯಿದ್ದು, ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ ಎಂದು ತಿಳಿಸಿದೆ.

ಏ.15ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿಸಿ ಮತ್ತು ತೇವಾಂಶದೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಹವೆಯೊಂದಿಗೆ ಬಿಸಿ ವಾತಾವರಣ ಮುಂದುವರಿಯಲಿದೆ.

ಬೆಳಗಾವಿ, ಧಾರವಾಡ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಹಗುರ ಮಳೆಯಾಗಲಿದೆ. ಬೀದರ್​, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಉಷ್ಣ ಮಾರುತದ ವಾತಾವರಣ ಇರುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಹಗುವಾದ ಮಳೆಯಾಗಲಿದೆ.

ಏ.16ರಂದು ಕರಾವಳಿ ಕರ್ನಾಟಕ ಭಾಗದ ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಬಿಸಿಗಾಳಿ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ರಾಯಚೂರು, ಹಾವೇರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬಿಸಿಗಾಳಿ ಹಾಗೂ ಉಷ್ಣಾಂಶದ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.

ಏ.17ರಂದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಬಿಸಿಗಾಳಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ದಕ್ಷಿಣ ಒಳನಾಡಿದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಕಡೆ ಒಣಹವೆ ಮುಂದುವರಿಯಲಿದೆ.

ಏ.18ರಂದು ಕಲಬುರಗಿ, ಬೀದರ್​, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಉಷ್ಣ ವಾತಾವರಣ ಹೆಚ್ಚಾಗಲಿದೆ.

ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್​ನಿಂದ 3 ಡಿಗ್ರಿ ಸೆಲ್ಸಿಯಸ್​ವರೆಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ