ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಗೋಡೆಗಳು ಮತ್ತು ಕಟ್ಟಡಗಳನ್ನು ತಕ್ಷಣವೇ ಗುರುತಿಸಿ ಕೆಡವುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ, ಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಉಂಟಾದ ಹಾನಿ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಸೂಚನೆಗಳನ್ನು ನೀಡಲಾಗಿದೆ.
ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಯು ನಗರದಲ್ಲಿ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡಿತಾದರೂ, ಹಲವೆಡೆ ವ್ಯಾಪಕ ಹಾನಿಯುಂಟು ಮಾಡಿತು. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಕಾಂಪೌಂಡ್ ಗೋಡೆ ಕುಸಿದು ಒಂದು ಮಗು ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದಾರೆ.
ಮಳೆಯ ತೀವ್ರತೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವಿಗೀಡಾಗಿದ್ದು, ಇದು ಅತ್ಯಂತ ದುರದೃಷ್ಟಕರ ಘಟನ. ಮಳೆಯಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೆ, ಹಲವಾರು ಪ್ರದೇಶಗಳಲ್ಲಿ ಮರಗಳು ಮತ್ತು ಕೊಂಬೆಗಳು ಬೀಳುವ ಅಪಾಯ ಎದುರಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪ್ರಕಟಣೆಯಲ್ಲಿ ತಿಳಿಸಿದೆ.
‘ಅಪಾಯಕಾರಿ ಮರಗಳು, ದುರ್ಬಲ ಕೊಂಬೆಗಳು, ಅಪಾಯಕಾರಿ ಗೋಡೆಗಳು ಮತ್ತು ಅಸುರಕ್ಷಿತ ಕಟ್ಟಡಗಳನ್ನು ತಕ್ಷಣ ಗುರುತಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ಮತ್ತು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಉಪ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದು ಅದು ಹೇಳಿದೆ.
ಅದರಂತೆ, ಐದು ನಗರ ಪಾಲಿಗೆಗಳ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ನಗರ ನಿಗಮದ ಅಧಿಕಾರಿಗಳು ಮತ್ತು ನೌಕರರನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಲು ಸೂಚಿಸಲಾಗಿದೆ.
ಮತ್ತಷ್ಟು ಮಳೆಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ಈ ತಂಡಗಳಿಗೆ ನಿರ್ದೇಶನ ನೀಡಲಾಗಿದೆ.





