ಫಿಗರ್ ನ್ನು ಸಮರ್ಪಕ ಶೇಪ್ ನಲ್ಲಿ ಇಟ್ಟುಕೊಳ್ಳಲು ಕೊಬ್ಬಿನ ನಿಯಂತ್ರಣ ಅತಿ ಮುಖ್ಯವಾದುದು. ಇದನ್ನು ನಮ್ಮ ಹತೋಟಿಯಲ್ಲಿ ಹೇಗಿಟ್ಟುಕೊಳ್ಳಬೇಕೆಂದು ವಿವರವಾಗಿ ತಿಳಿಯೋಣವೇ?
ದಪ್ಪ ಸೊಂಟ ಗಂಭೀರ ರೋಗಗಳ ತವರು. ಇದರಿಂದ ನೀವು ಟೈಪ್ 2 ಡಯಾಬಿಟಿಸ್, ಹೈ ಬಿಪಿ ಅಥವಾ ಹೃದ್ರೋಗಗಳಿಗೆ ಸುಲಭವಾಗಿ ತುತ್ತಾಗಬಹುದು. ಸಾಮಾನ್ಯವಾಗಿ ಸ್ಥೂಲ ಮಹಿಳೆಯರ ಸೊಂಟ ಹಾಗೂ ಹೊಟ್ಟೆಯ ಸುತ್ತಲೂ ಹೆಚ್ಚಿನಂಶ ಕೊಬ್ಬು ತುಂಬುಕೊಂಡಿರುತ್ತದೆ. ಇಂಥವರ ಹೊಟ್ಟೆ ಉಬ್ಬಿಕೊಂಡ ಸೇಬಿನಂತಿರುತ್ತದೆ. ಹೀಗೆ ಹೊಟ್ಟೆ, ಸೊಂಟಗಳ ಬಳಿ ಕೊಬ್ಬನ್ನು ಶೇಖರಿಸಿಕೊಂಡವರು ಅದನ್ನು ತೊಲಗಿಸಲು ತಮ್ಮ ಊಟ ತಿಂಡಿ, ದೈನಂದಿನ ಆಗುಹೋಗುಗಳನ್ನು ಗಮನಿಸಿಕೊಂಡು ಬದಲಾವಣೆ ತಂದುಕೊಳ್ಳಬೇಕು.
ಇಂದಿವ ವಿಜ್ಞಾನಿಗಳು ಕಾರ್ಬನ್ ಡೈಆಕ್ಸೈಡ್ ನ ಇಂಜೆಕ್ಷನ್ ನೀಡಿ, ಸೊಂಟದ ಕೊಬ್ಬನ್ನು ಕರಗಿಸುವ ವಿಧಾನ ಕಂಡುಹಿಡಿದಿದ್ದಾರೆ. ಇದು ಒಂದು ನೈಸರ್ಗಿಕ ಅನಿಲವಾಗಿದ್ದು, ನಮ್ಮ ಉಸಿರಾಟದ ಪ್ರಕ್ರಿಯೆಯಲ್ಲಿ ಪ್ರತಿ ಸಲ ದೇಹದಿಂದ ಹೊರಹೋಗುತ್ತಿರುತ್ತದೆ. ಈ ಅನಿಲ ಬೇಗ ನಮ್ಮ ರಕ್ತದಲ್ಲಿ ವಿಲೀನ ಆಗಬಲ್ಲದು. ಉಸಿರನ್ನು ಹೊರಬಿಡುವಾಗ (ನಿಃಶ್ವಾಸ) ಅಥವಾ ಮೂತ್ರಪಿಂಡ (ಕಿಡ್ನಿ)ಗಳ ನೆರವಿನಿಂದ ದೇಹದಿಂದ ಹೊರಹಾಕಲ್ಪಡುತ್ತದೆ.
ಜೀವಕೋಶಗಳ ನಿಷ್ಕ್ರಿಯತೆ
ಕಾರ್ಬಾಕ್ಸಿ ಥೆರಪಿಯಿಂದ, ನಿಶ್ಚಿತ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಗ್ಯಾಸ್ ನ್ನು ಒಂದು ಸೂಕ್ಷ್ಮ ಸೂಜಿಯಿಂದ ಚರ್ಮದ ಒಳಭಾಗದ ಮೊದಲ ಪದರಕ್ಕೆ ತಲುಪಿಸಬಹುದು. ಇದು ಅಲ್ಲಿ ತಲುಪಿದ ನಂತರ, ಅಕ್ಕಪಕ್ಕದ ಊತಗಳನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ರಕ್ತನಾಳಗಳು ತುಸು ಅಗಲಗೊಳ್ಳುತ್ತವೆ. ಹೀಗೆ ಹಿಗ್ಗಿದ ರಕ್ತನಾಳಗಳು, ರಕ್ತ ಪರಿಚಲನೆಗೆ ಹೆಚ್ಚಿನ ಸಹಾಯ ಮಾಡುತ್ತವೆ ಹಾಗೂ ಆ ಭಾಗದಲ್ಲಿ ಆಮ್ಲಜನಕ ಮತ್ತು ಪೋಷಕಾಂಶಗಳ ಹರಿವು ಸಹ ಹೆಚ್ಚುತ್ತದೆ. ಕಾರ್ಬನ್ ಡೈಆಕ್ಸೈಡ್ ಗ್ಯಾಸ್ ಸ್ಥೂಲತೆ ಹೆಚ್ಚಿಸುವ ಜೀವಕೋಶಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸುತ್ತದೆ.
ಈ ಚಿಕಿತ್ಸೆಯಿಂದ ಮುಖ್ಯವಾಗಿ ಮಹಿಳೆಯರ ಸೊಂಟ, ನಿತಂಬಗಳ ಬಳಿ ಅಡಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದಾಗಿದೆ. ಇಟಲಿಯ ಸುಮಾರು 48 ಮಹಿಳೆಯರಿಗೆ ಪ್ರಯೋಗಾರ್ಥವಾಗಿ ಈ ಇಂಜೆಕ್ಷನ್ ನೀಡಲಾಯಿತು. ಇದರ ಫಲಿತಾಂಶ ಆಶಾದಾಯಕವಾಗಿದೆ. ನಂತರ ಅಮೆರಿಕಾದ ನಾರ್ಥ್ ವೆಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ಥೂಲ ಮಹಿಳೆಯರ ಮೇಲೆ ಪರೀಕ್ಷಾರ್ಥವಾಗಿ ಈ ಚಿಕಿತ್ಸೆ ನಡೆಸಲಾಯಿತು. ಸೊಂಟದ ಸುತ್ತಳತೆ 35 ಅಂಗುಲಕ್ಕಿಂತಲೂ ಹೆಚ್ಚಿದ್ದ ಮಹಿಳೆಯರನ್ನೇ ಇದಕ್ಕಾಗಿ ಆರಿಸಲಾಯಿತು. ಅಲ್ಲೂ ಫಲಿತಾಂಶ ನಿರಾಶಾದಾಯಕ ಆಗಿರಲಿಲ್ಲ.
ಅತ್ತ ಬ್ರಿಟನ್ನಿನ ವಿಜ್ಞಾನಿಗಳು ಹೇಳುವುದೆಂದರೆ, ಭಾರಿ ಸೊಂಟ ನಿತಂಬಗಳಿರುವ ಮಹಿಳೆಯರು ಅತ್ಯಧಿಕ ಗಾಬರಿಗೊಳ್ಳಬೇಕಿಲ್ಲ. ಏಕೆಂದರೆ ಒಂದು ವಿಧದಲ್ಲಿ ಇದು ಅವರ ಆರೋಗ್ಯಕ್ಕೆ ಒಳ್ಳೆಯ ಗುರುತಾಗಿದೆ. ಏಕೆಂದರೆ ಇದು ಅವರನ್ನು ಹೃದ್ರೋಗಗಳಿಂದ ಸಂಪೂರ್ಣ ದೂರವಿಡುತ್ತದೆ. ಅಷ್ಟೇ ಅಲ್ಲ, ಭಾರಿ ಸೊಂಟ ನಿತಂಬಗಳು ಪಚನ ಕ್ರಿಯೆ ಹಾಗೂ ದೇಹವನ್ನು ಚುರುಕಾಗಿಸಿ ಸುಸ್ಥಿಯಲ್ಲಿಡುವುದಕ್ಕೂ ಪೂರಕ ಎನ್ನುತ್ತಾರೆ.
ಎಚ್ಚರಿಕೆ
ಆಕ್ಸ್ ಫರ್ಡ್ ಯೂನಿವರ್ಸಿಟಿಯ ವಿಜ್ಞಾನಿಗಳ ಒಂದು ತಂಡ ತಮ್ಮ ಪ್ರಯೋಗದ ನಂತರ ಹೇಳುವುದೆಂದರೆ, ಭಾರಿ ನಿತಂಬಗಳ ಮೇಲೆ ಜಮೆಗೊಂಡಿರುವ ಕೊಬ್ಬನ್ನು ಕರಗಿಸುವುದು ಸುಲಭ ಸಾಧ್ಯವಲ್ಲ. ಆದರೆ ಸೊಂಟದ ವಿಷಯದಲ್ಲಿ ಹಾಗಲ್ಲ, ಅಲ್ಲಿನ ಕೊಬ್ಬನ್ನು ಕರಗಿಸಬಹುದು. ವಿಜ್ಞಾನಿಗಳ ಮತ್ತೊಂದು ಮಾತೆಂದರೆ, ಈ ಭಾಗಗಳ ಕೊಬ್ಬನ್ನು ಬಲವಂತವಾಗಿ ಹೀಗೆ ವೇಗವಾಗಿ ಕರಗಿಸುವುದರಿಂದ, ಅಲ್ಲಿ ಒಂದು ಬಗೆಯ ರಾಸಾಯನಿಕ ಅಂಶಗಳು ಸ್ರವಿಸಲ್ಪಡುತ್ತವೆ. ಇದು ಆರೋಗ್ಯಕರ ದೇಹದ ಮೇಲೆ ಸೈಡ್ ಎಫೆಕ್ಟ್ ಬೀರಬಹುದು. ಈ ಅಂಶಗಳು ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ಡಯಾಬಿಟಿಸ್, ಇನ್ಸುಲಿನ್ ಇತ್ಯಾದಿ ಎಲ್ಲದರ ಮೇಲೂ ನೇರ ಪರಿಣಾಮ ಬೀರಬಹುದು.
ಈ ತಂಡದ ಪ್ರಮುಖ ವಿಜ್ಞಾನಿ ಹೇಳುತ್ತಾರೆ, ಹೊಟ್ಟೆ ಹಾಗೂ ಸೊಂಟದ ಗಾತ್ರದ ಬಗ್ಗೆ ಮಹಿಳೆಯರು ಖಂಡಿತಾ ಹೆಚ್ಚಿನ ಗಮನ ಕೊಡಬೇಕು. ಆ ಭಾಗದಲ್ಲಿ ಹೆಚ್ಚಿನಂಶ ಕೊಬ್ಬು ಶೇಖರಣೆಗೊಳ್ಳಲು ಬಿಡಬಾರದು. ನಿತಂಬಗಳ ಬಳಿಯ ಕೊಬ್ಬಿನಿಂದ ಅಂಥ ಭಯಂಕರ ದುಷ್ಪರಿಣಾಮಗಳಿಲ್ಲದಿದ್ದರೂ, ಸೊಂಟದ ಹೊಟ್ಟೆಯ ಬಳಿ ಸಂಗ್ರಹಗೊಂಡ ಕೊಬ್ಬು ಖಂಡಿತಾ ಅಪಾಯಕ್ಕೆ ಆಹ್ವಾನ ಕೊಡುತ್ತದೆ.
ಹೀಗಾಗಿ ಸದಾ ನಿಮ್ಮ ಫಿಗರ್ ಮೇಂಟೆನೆನ್ಸ್ ಕುರಿತು ಎಚ್ಚರದಿಂದಿರಿ. ಇದಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ. ಹುರಿದ ಕರಿದ, ಹೆಚ್ಚು ಮಸಾಲೆ ಪದಾರ್ಥಗಳಿಂದ ದೂರವಿರಬೇಕು. ಜಿಡ್ಡು ಪದಾರ್ಥ ಬೇಡವೇ ಬೇಡ. ತಾಜಾ ಹಸಿ ತರಕಾರಿಗಳನ್ನೇ ಹೆಚ್ಚು ಸೇವಿಸಿ. ವ್ಯಾಯಾಮ, ಬ್ರಿಸ್ಕ್ ವಾಕಿಂಗ್, ಜಾಗಿಂಗ್ ಕಡೆ ಗಮನ ಕೊಡಬೇಕು.
– ಡಾ. ವಿನೋದಿನಿ.





