– ರಾಘವೇಂದ್ರ ಅಡಿಗ ಎಚ್ಚೆನ್.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಅವರ ಸಹ-ಆರೋಪಿಗಳು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ಜೈಲಿನ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ತೀವ್ರ ಬೆನ್ನು ನೋವಿನ ಸಮಸ್ಯೆ ಇರುವುದಾಗಿ ತಿಳಿಸಿದ್ದ ದರ್ಶನ್, ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.
ವಿಚಾರ ತಿಳಿದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ದರ್ಶನ್ ಅವರನ್ನು ಕರೆಸಿ ಮಾತನಾಡಿ, ಬೆನ್ನು ನೋವಿನಂತಹ ಸಮಸ್ಯೆಗಳಿಗೆ ಯೋಗ ಸಹಕಾರಿ ಆಗುತ್ತದೆ ಹಾಗೂ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಅದರ ಬಳಿಕ ಯೋಗ ಮಾಡಲು ಒಪ್ಪಿದ ದರ್ಶನ್, ಜೈಲಿನ ಮುಖ್ಯ ಮೈದಾನದಲ್ಲಿ ನಡೆದ ಸಾಮೂಹಿಕ ಕಾರ್ಯಕ್ರಮಕ್ಕೆ ತೆರಳದೆ ತಮ್ಮ ಬ್ಯಾರಕ್‌ನ ಕಾರಿಡಾರ್‌ನಲ್ಲೇ ಸಹ-ಆರೋಪಿಗಳೊಂದಿಗೆ ಯೋಗಾಭ್ಯಾಸ ನಡೆಸಿದರು. ಸುಮಾರು ಒಂದು ಗಂಟೆ ನಡೆದ ಅಭ್ಯಾಸದಲ್ಲಿ ಪ್ರಾಣಾಯಾಮ, ದೀರ್ಘದಂಡ ನಮಸ್ಕಾರ ಮತ್ತು ಶವಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಿದರು.
ಯೋಗಾಭ್ಯಾಸ ಪೂರ್ಣಗೊಂಡ ಬಳಿಕ ದರ್ಶನ್ ಹಾಗೂ ಇತರ ಆರೋಪಿಗಳು ತಮ್ಮ ಬ್ಯಾರಕ್‌ಗಳಿಗೆ ಮರಳಿದರು. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರಾ ಗೌಡ ಮಹಿಳಾ ಕೈದಿಗಳ ವಿಭಾಗದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇತರ ಮಹಿಳಾ ಕೈದಿಗಳೊಂದಿಗೆ ಯೋಗ ಮತ್ತು ಧ್ಯಾನಾಭ್ಯಾಸ ನಡೆಸಿದರು.





