ನವಿ ಮುಂಬೈನಿಂದ ಜಮ್ಮು-ಕಾಶ್ಮೀರದ ಶ್ರೀನಗರಕ್ಕೆ ಬಂದಿಳಿದ ಇಂಡಿಗೋ ವಿಮಾನವೊಂದು ರನ್‌ವೇ ಪಾರ್ಕಿಂಗ್ ಪ್ರದೇಶದಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂಡಿಗೋ ವಿಮಾನ ಸಂಖ್ಯೆ 6E 225 (VT-NOG) ಬೆಳಗ್ಗೆ ಸುಮಾರು 9:02 ರ ಸುಮಾರಿಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ವಿಮಾನವನ್ನು ನಿಲ್ದಾಣದ ‘ಬೇ ನಂಬರ್ 06’ ರ ಪಾರ್ಕಿಂಗ್ ಜಾಗಕ್ಕೆ ಕೊಂಡೊಯ್ಯುತ್ತಿದ್ದಾಗ, ವಿಮಾನದ ಮುಂಭಾಗದ ಭಾಗವು ಅಲ್ಲಿಯೇ ಇದ್ದ ‘ವಿಷುಯಲ್ ಡಾಕಿಂಗ್ ಗೈಡೆನ್ಸ್ ಸಿಸ್ಟಮ್’ (VDGS) ಲೋಹದ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಮಾನದ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ ಮಾಹಿತಿ ತಿಳಿಸಿದೆ.
ಅಪಘಾತದ ಬೆನ್ನಲ್ಲೇ ವಿಮಾನ ನಿಲ್ದಾಣದ ರಕ್ಷಣಾ ಸಿಬ್ಬಂದಿ ಅಲರ್ಟ್ ಆಗಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಹಸ್ತಚಾಲಿತ ಮೆಟ್ಟಿಲುಗಳ (Manual Stairs) ಮೂಲಕ ರನ್‌ವೇ ಮೇಲೆ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಸದ್ಯ ಹಾನಿಗೊಳಗಾದ ವಿಮಾನವನ್ನು ತಾಂತ್ರಿಕ ತಪಾಸಣೆಗಾಗಿ ಗ್ರೌಂಡ್ ಮಾಡಲಾಗಿದೆ.
ಘಟನೆಗೆ ಕಾರಣವಾದ ಪರಿಸ್ಥಿತಿಗಳ ಕುರಿತು ನಿಗದಿತ ನಿಯಮಾನುಸಾರ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಘಟನೆಯ ನಿಖರ ಕಾರಣ ತಿಳಿದುಬರಲಿದೆ.
ಘಟನೆಯ ನಡುವೆಯೂ ಶ್ರೀನಗರ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸಾಮಾನ್ಯವಾಗಿದ್ದು, ವಿಮಾನಗಳ ಆಗಮನ ಮತ್ತು ನಿರ್ಗಮನ ನಿಗದಿಯಂತೆ ಮುಂದುವರಿದಿದೆ ಎಂದು ಪ್ರಾಧಿಕಾರ ತಿಳಿಸಿದೆ.





