ಭಾರತದ ಪ್ರಮುಖ ಕ್ರೀಡಾ ಸಂಸ್ಥೆಯಾದ JSW ಸ್ಪೋರ್ಟ್ಸ್, ಕ್ರಿಕೆಟ್ ಹಾಂಗ್ ಕಾಂಗ್ ಜೊತೆ ಮಹತ್ವದ ಜಾಗತಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಜಗತ್ ಪ್ರಸಿದ್ಧ 'ಹಾಂಗ್ ಕಾಂಗ್ ಸಿಕ್ಸ್' ಕ್ರಿಕೆಟ್ ಟೂರ್ನಿಯ ಎಕ್ಸ್‌ಕ್ಲೂಸಿವ್ ವಾಣಿಜ್ಯ ಮತ್ತು ಮಾರ್ಕೆಟಿಂಗ್ ಪಾಲುದಾರರಾಗಿ JSW ಸ್ಪೋರ್ಟ್ಸ್ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಸಂಸ್ಥೆಯು ಅಂತರರಾಷ್ಟ್ರೀಯ ಕ್ರೀಡಾ ಹಕ್ಕುಗಳ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ.
1992ರಲ್ಲಿ ಆರಂಭಗೊಂಡು 34 ವರ್ಷಗಳ ವೈಭವಯುತ ಇತಿಹಾಸ ಹೊಂದಿರುವ ಹಾಂಗ್ ಕಾಂಗ್ ಸಿಕ್ಸ್, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಾನ್ಯತೆ ಪಡೆದ ಅತ್ಯಂತ ಆಕರ್ಷಕ ಕ್ರಿಕೆಟ್ ಕೂಟಗಳಲ್ಲಿ ಒಂದಾಗಿದೆ. ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ಶೇನ್ ವಾರ್ನ್, ಸರ್ ವಿವ್ ರಿಚರ್ಡ್ಸ್ ಮತ್ತು ಡೇವಿಡ್ ವಾರ್ನರ್ ಅವರಂತಹ ಜಾಗತಿಕ ಕ್ರಿಕೆಟ್ ದಂತಕಥೆಗಳು ಭಾಗವಹಿಸಿದ ಹೆಗ್ಗಳಿಕೆ ಈ ಟೂರ್ನಿಗಿದೆ. 2025ರ ಆವೃತ್ತಿಯು ವಿಶ್ವದಾದ್ಯಂತ 40 ಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪಿ ಭಾರಿ ಯಶಸ್ಸು ಕಂಡಿತ್ತು.
ಈ ಒಪ್ಪಂದದ ಮೂಲಕ JSW ಸ್ಪೋರ್ಟ್ಸ್ ಮತ್ತು ಕ್ರಿಕೆಟ್ ಹಾಂಗ್ ಕಾಂಗ್ ಸಂಸ್ಥೆಗಳು ಟೂರ್ನಿಯ ಜಾಗತಿಕ ಪ್ರಸಾರ, ಪ್ರಾಯೋಜಕತ್ವ ಹಾಗೂ ಬ್ರಾಂಡ್ ಮೌಲ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಜಂಟಿಯಾಗಿ ಶ್ರಮಿಸಲಿವೆ. ಮುಂಬರುವ 22ನೇ ಆವೃತ್ತಿಯ ಹಾಂಗ್ ಕಾಂಗ್ ಸಿಕ್ಸ್ ಪಂದ್ಯಾವಳಿಯು 2026ರ ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ಹಾಂಗ್ ಕಾಂಗ್‌ನ ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಈ ಸಹಭಾಗಿತ್ವದ ಕುರಿತು ಮಾತನಾಡಿದ JSW ಸ್ಪೋರ್ಟ್ಸ್ ಸಿಇಒ ದಿವ್ಯಾಂಶು ಸಿಂಗ್, "ಇದು JSW ಸ್ಪೋರ್ಟ್ಸ್ ಪಯಣದಲ್ಲಿ ಅತ್ಯಂತ ಮಹತ್ವದ ಕ್ಷಣ. ಭಾರತೀಯ ಕ್ರೀಡಾರಂಗದಲ್ಲಿ ನಾವು ಗಳಿಸಿದ ಅಪಾರ ಅನುಭವವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಮತ್ತು ಹಾಂಗ್ ಕಾಂಗ್ ಸಿಕ್ಸ್ ಟೂರ್ನಿಯನ್ನು ಜಾಗತಿಕ ಮಟ್ಟದ ಪ್ರಮುಖ ಕ್ರೀಡಾ ಸರಣಿಯಾಗಿ ಬೆಳೆಸಲು ನಾವು ಉತ್ಸುಕರಾಗಿದ್ದೇವೆ" ಎಂದಿದ್ದಾರೆ.
ಕ್ರಿಕೆಟ್ ಹಾಂಗ್ ಕಾಂಗ್, ಚೀನಾ ಸಂಸ್ಥೆಯ ಅಧ್ಯಕ್ಷ ಬುರ್ಜಿ ಶ್ರಾಫ್ ಮಾತನಾಡಿ, "JSW ಸ್ಪೋರ್ಟ್ಸ್‌ನಂತಹ ಅನುಭವಿ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ನಮಗೆ ಹೆಮ್ಮೆಯ ವಿಷಯ. ಫ್ರಾಂಚೈಸಿ ಲೀಗ್‌ಗಳು ಮತ್ತು ಕ್ರೀಡಾ ನಿರ್ವಹಣೆಯಲ್ಲಿ ಅವರ ಅನುಭವವು ಹಾಂಗ್ ಕಾಂಗ್ ಸಿಕ್ಸ್ ಟೂರ್ನಿಯನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಲು ನೆರವಾಗಲಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.





