ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬ ಮತ್ತು ನಟ ಧನ್ವೀರ್ ಗೌಡ ನಡುವಿನ ಸಂಬಂಧದಲ್ಲಿ ತೀವ್ರ ಸ್ವರೂಪದ ಬಿರುಕು ಮೂಡಿದ್ದು, ಪ್ರಕರಣ ಈಗ ಅಧಿಕೃತವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಪರಸ್ಪರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ರಾಜರಾಜೇಶ್ವರಿ ನಗರ ಮತ್ತು ರಾಜಾಜಿನಗರ ಪೊಲೀಸ್ ಠಾಣೆಗಳಲ್ಲಿ ಪರಸ್ಪರ ದೂರು ದಾಖಲಾಗಿವೆ.
ನಟ ದರ್ಶನ್ ಅವರ ಕಾನೂನು ಹಾಗೂ ವೈಯಕ್ತಿಕ ವಿಚಾರಗಳಲ್ಲಿ ನೆರಳಿನಂತೆ ಗುರುತಿಸಿಕೊಂಡಿದ್ದ ಧನ್ವೀರ್, ಇತ್ತೀಚಿನ ದಿನಗಳಲ್ಲಿ ದರ್ಶನ್ ಕುಟುಂಬದೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಹಾಗೂ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳೇ ಪ್ರಮುಖ ಕಾರಣ ಎನ್ನಲಾಗಿದೆ. ದರ್ಶನ್ ಅವರ ಕೆಲವು ಆಪ್ತ ವಲಯದ ಬೆಳವಣಿಗೆಗಳು ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡಿದ ಪೋಸ್ಟ್ಗಳು ಅಭಿಮಾನಿಗಳಲ್ಲಿ ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದವು. ಈ ಬೆಳವಣಿಗೆಯ ಬೆನ್ನಲ್ಲೇ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಆಪ್ತ ಸಹಾಯಕ ನಾಗರಾಜ್ ಅವರು ನಟ ಧನ್ವೀರ್ ವಿರುದ್ಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಧನ್ವೀರ್ ಅವರು ತಮಗೆ ದೂರವಾಣಿ ಕರೆ ಮಾಡಿ ಏಕವಚನದಲ್ಲಿ ನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ನಾಗರಾಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಧನ್ವೀರ್ ಜತೆಗಿನ ಮೊಬೈಲ್ ಸಂಭಾಷಣೆಯ ಆಡಿಯೋ ದಾಖಲೆಯನ್ನು ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ಸಾಕ್ಷ್ಯವಾಗಿ ಒದಗಿಸಿದ್ದಾರೆ.
ಮ್ಯಾನೇಜರ್ ದೂರಿನ ಬೆನ್ನಲ್ಲೇ ಎಚ್ಚೆತ್ತ ನಟ ಧನ್ವೀರ್ ಕಡೆಯವರು ಪ್ರತಿಯಾಗಿ ಕಾನೂನು ಸಮರ ಸಾರಿದ್ದಾರೆ. ಧನ್ವೀರ್ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಹಾಗೂ ಅವರ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್ ಹಾಗೂ ಇತರೆ ಕೆಲವರು ತಮ್ಮ ಮನೆಗೆ ಬಂದು ಗಲಾಟೆ ನಡೆಸಿ, ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಮ್ಮೇಗೌಡರು ಗಂಭೀರ ಆರೋಪ ಮಾಡಿದ್ದಾರೆ. ರಾತ್ರಿ ವೇಳೆ ಮನೆಗೆ ಬಂದ ವಿಜಯಲಕ್ಷ್ಮಿ ಹಾಗೂ ಅವರ ತಂಡದವರು ಧನ್ವೀರ್ ಎಲ್ಲಿದ್ದಾನೆ ಎಂದು ಜೋರಾಗಿ ಕೂಗಾಡಿ, ಮನೆಯವರಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಒಮ್ಮೆ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು, ಅವರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಿದ್ದ ಧನ್ವೀರ್ ಹಾಗೂ ದರ್ಶನ್ ಕುಟುಂಬದ ನಡುವೆ ಈ ಮಟ್ಟಿಗೆ ಮನಸ್ತಾಪ ಮೂಡಿರುವುದು ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸದ್ಯ ಎರಡೂ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಪೊಲೀಸರು ಆಡಿಯೋ ಸಾಕ್ಷ್ಯಗಳು ಹಾಗೂ ದೂರುಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರೆಸಿದ್ದಾರೆ.





