- ರಾಘವೇಂದ್ರ ಅಡಿಗ ಎಚ್ಚೆನ್.
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ವಿವಾದ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಧನ್ವೀರ್ ಆಪ್ತನದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ವಿಜಯಲಕ್ಷ್ಮಿ ಅವರು ದರ್ಶನ್ರನ್ನು ಜೈಲಿನಿಂದ ಹೊರಗೆ ಕರೆತರಲು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹೇಳಿಕೆಗೆ ದರ್ಶನ್ ಪರ ವಕೀಲರ ತಂಡದ ಸದಸ್ಯ ಮುಬಾರಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿಜಯಲಕ್ಷ್ಮಿ ಅವರ ಪ್ರಯತ್ನಗಳನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರ ತಂಡದಲ್ಲಿರುವ ಮುಬಾರಕ್ ಮಾತನಾಡಿ, ವಿಜಯಲಕ್ಷ್ಮಿ ಅವರು ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳು ಕೇವಲ ಬಾಯಿ ಚಪಲಕ್ಕಾಗಿ ಮಾಡಿರುವ ಮಾತುಗಳು ಎಂದು ಟೀಕಿಸಿದ್ದಾರೆ.
ಇದೇ ವೇಳೆ ಧನ್ವೀರ್ ಬಗ್ಗೆಯೂ ಮಾತನಾಡಿರುವ ಮುಬಾರಕ್, ದರ್ಶನ್ ಪ್ರಕರಣವನ್ನು ತಮ್ಮ ತಂಡಕ್ಕೆ ವಹಿಸಿದ ಬಳಿಕ ಧನ್ವೀರ್ ಒಮ್ಮೆಯೂ ವಕೀಲರ ಕಚೇರಿಗೆ ಬಂದು ಭೇಟಿಯಾಗಿಲ್ಲ ಅಥವಾ ಪ್ರಕರಣದ ಕುರಿತು ಚರ್ಚಿಸಿಲ್ಲ ಎಂದು ಹೇಳಿದ್ದಾರೆ.
ದರ್ಶನ್ ಜೈಲಿನಲ್ಲಿರುವುದರಿಂದ ಅವರ ಪತ್ನಿ ವಿಜಯಲಕ್ಷ್ಮಿ, ಮಗ, ಸಹೋದರ ದಿನಕರ್ ಮತ್ತು ತಾಯಿ ಮೀನಾ ಅವರು ಅನುಭವಿಸುತ್ತಿರುವ ನೋವು ತಮಗೆ ತಿಳಿದಿದೆ ಎಂದು ಮುಬಾರಕ್ ಹೇಳಿದ್ದಾರೆ. ಪ್ರಕರಣದ ವಿಚಾರವಾಗಿ ವಿಜಯಲಕ್ಷ್ಮಿ ತಮ್ಮ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಲವು ಬಾರಿ ನಾಲ್ಕೈದು ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಪ್ರಕರಣದ ವಿವರಗಳನ್ನು ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹಿರಿಯ ವಕೀಲ ಹಷ್ಮತ್ ಪಾಷಾ ಅವರನ್ನು ಪ್ರಕರಣದಲ್ಲಿ ನೇಮಿಸುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಎದುರಿಸಿದ ಸವಾಲುಗಳನ್ನು ತಾವು ಕಣ್ಣಾರೆ ಕಂಡಿದ್ದಾಗಿ ಮುಬಾರಕ್ ಹೇಳಿದ್ದಾರೆ. ದರ್ಶನ್ ಬಗ್ಗೆ ಕಾಳಜಿ ಇಲ್ಲದಿದ್ದರೆ ಅವರು ಇಷ್ಟೊಂದು ಸಮಯ ಮೀಸಲಿಟ್ಟು ವಕೀಲರ ತಂಡದೊಂದಿಗೆ ಕೆಲಸ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ವಿಜಯಲಕ್ಷ್ಮಿ ಅವರ ಬಗ್ಗೆ ವೈಯಕ್ತಿಕ ಲಾಭ ಅಥವಾ ಸ್ವಹಿತಾಸಕ್ತಿಗಾಗಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದಿರುವ ಮುಬಾರಕ್, ಪ್ರಕರಣದ ವಾಸ್ತವ ತಿಳಿಯದೆ ಮಾತನಾಡುವವರ ಹೇಳಿಕೆಗಳಿಗೆ ಮಹತ್ವ ನೀಡಬಾರದು ಎಂದು ಹೇಳಿದ್ದಾರೆ.
ಇನ್ನು ಈ ವಿವಾದದ ನಡುವೆ ಧನ್ವೀರ್ ಅವರ ತಂದೆಯೂ ವಿಜಯಲಕ್ಷ್ಮಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಅವರ ಆಪ್ತರು ದೂರು ದಾಖಲಿಸಿರುವುದಾಗಿ ವರದಿಯಾಗಿದೆ.
ಒಟ್ಟಾರೆ, ವೈರಲ್ ಆಡಿಯೋ ಮತ್ತು ಪರಸ್ಪರ ದೂರುಗಳ ಹಿನ್ನೆಲೆಯಲ್ಲಿ ದರ್ಶನ್ ಅವರ ಕುಟುಂಬ ಹಾಗೂ ಧನ್ವೀರ್ ನಡುವಿನ ಭಿನ್ನಾಭಿಪ್ರಾಯ ಸಾರ್ವಜನಿಕ ಚರ್ಚೆಗೆ ಬಂದಿದೆ. ಈ ಆರೋಪ-ಪ್ರತ್ಯಾರೋಪಗಳ ಕುರಿತು ಸಂಬಂಧಪಟ್ಟವರಿಂದ ಅಧಿಕೃತ ಸ್ಪಷ್ಟನೆ ಹೊರಬಂದ ಬಳಿಕವಷ್ಟೇ ವಿವಾದದ ಸಂಪೂರ್ಣ ಚಿತ್ರಣ ತಿಳಿಯಲಿದೆ.





