ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾನವ ನಿರ್ಮಿತ ದ್ವೀಪವಾದ ಹವ್ಯಕರ ಮೂಲ ಸ್ಥಾನ ಹೈಗುಂದದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣವೇ…..?

ಹಿಡನ್‌ ಜೆಮ್ ಕದಂಬರ ಕಾಲದ ಹವ್ಯಕ ಬ್ರಾಹ್ಮಣರ ಮೂಲ ನೆಲೆ ಹೈಗುಂದ, ಸುತ್ತಲೂ ಹಚ್ಚ ಹಸಿರು ಬಾಳೆ, ತೆಂಗು ಹಾಗೂ ಅಡಿಕೆ ತೋಟದಿಂದ ನಿತ್ಯ ಕಂಗೊಳಿಸುವ ಈ ತೇಲುವ ದ್ವೀಪದ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣವೇ?

ಹೌದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಿಂದ 20 ಕಿ.ಮೀ. ದೂರ ಕ್ರಮಿಸಿದರೆ ಸಿಗುವುದೇ ಹವ್ಯಕರ ಮೂಲ ಸ್ಥಾನವಾದ ಹೈಗುಂದ. ಇದೊಂದು ಮಾನವ ನಿರ್ಮಿತ ದ್ವೀಪವಾಗಿದ್ದು, ಶರಾವತಿ ನದಿಯ ಒಡಲಿನಲ್ಲಿ ಹುದುಗಿರುವ ಹಸಿರು ಭೂಮಿಯಾಗಿದೆ. ಹಿಂದಿನ ದಿನಗಳಲ್ಲಿ ಜನರು ಈ ದ್ವೀಪವನ್ನು ತಲುಪಲು ದೋಣಿ ಮತ್ತು ತೆಪ್ಪಗಳನ್ನು ಬಳಸುತ್ತಿದ್ದರು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಈ ದ್ವೀಪವನ್ನು ತಲುಪಲು ಉದ್ದನೆಯ ಸೇತುವೆಯನ್ನು ನಿರ್ಮಿಸಿದ್ದರಿಂದ ಈ ದ್ವೀಪವನ್ನು ತಲುಪುವುದು ಹೂವಿನ ಮೇಲೆ ನಡೆದಷ್ಟೇ ಸುಲಭವಾಗಿದೆ. ಇಲ್ಲಿನ ದ್ವೀಪ ಹಸಿರು ಭತ್ತದ ಗದ್ದೆ, ತೆಂಗು, ಬಾಳೆ ಹಾಗೂ ಅಡಿಕೆ ತೋಟದಿಂದ ಕೂಡಿದ್ದು ಸುತ್ತಲೂ ಪ್ರಶಾಂತವಾಗಿ ಹರಿಯು ಶರಾವತಿ ನದಿ ಇದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ಇಲ್ಲಿನ ಸೇತುವೆಯ ಮೇಲೆ ನಿಂತು ನೋಡಿದರೆ, ಕಣ್ಣು ಹಾಯಿಸಿದಷ್ಟು ಸುತ್ತಲೂ ಶರಾವತಿ ನದಿಯ ನೀರು ಹಾಗೂ ಅದರ ತಟದಿಂದ ಬೀಸುವ ತಣ್ಣನೆಯ ಗಾಳಿ ನಮ್ಮ ಮನಸ್ಸನ್ನು ತಂಗಾಳಿಯಂತೆ ತೇಲಿಸಿಬಿಡುತ್ತದೆ. ಇದರ ಅನುಭವನ್ನು ಬರೀ ಮಾತಿನಲ್ಲಿ ವರ್ಣಿಸಲು ಅಸಾಧ್ಯ, ಅದನ್ನು ಅನುಭವಿಸೇ ತೀರಬೇಕು.

ಹವ್ಯಕರ ಕಿರುಪರಿಚಯ

ಹವ್ಯಕ ಎಂಬುದು ಹವೀಗ ಎಂಬ ಪದದಿಂದ ಬಂದಿರಬಹುದು ಎನ್ನಲಾಗಿದೆ. ಇದರ ಅರ್ಥ ಹವ್ಯಕ ಅಂದರೆ ದೇವಾನುದೇವತೆಗಳಿಗೆ ಹಾಗೂ ಪಿತೃ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವವರು ಎಂದರ್ಥ. ಇವರ ಜನಸಂಖ್ಯೆ ಸುಮಾರು 6 ಲಕ್ಷ ಎಂದು ಅಂದಾಜಿಸಲಾಗಿದೆ. ಇವರು ಆಡುವ ಭಾಷೆ ಹವಿಗನ್ನಡ, ಇದು ಕನ್ನಡ ಭಾಷೆಯ ಉಪಭಾಷೆಯಾಗಿದೆ. ಕಲೆ ಹಾಗೂ ಸಾಹಿತ್ಯ ರಂಗದಲ್ಲಿ ಹವ್ಯಕ ಪಂಗಡ ಶ್ರೀಮಂತವಾಗಿದ್ದು ನೃತ್ಯ, ಸಂಗೀತ, ಯಕ್ಷಗಾನ, ಕವನ, ಅಭಿನಯ ಹಾಗೂ ಬರವಣಿಗೆಯಲ್ಲಿ ಎತ್ತಿದ ಕೈ ಎಂದರೆ ತಪ್ಪಾಗಲಾರದು.

IMG_20231125_143531

ಆಹಾರ ಪದ್ಧತಿ

ಇವರ ಆಹಾರ ಪದ್ಧತಿ ಶುದ್ಧ ಸಸ್ಯಾಹಾರ ಹಾಗೂ ಸರಳವಾಗಿದೆ. ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆ ಮೂಲವಾಗಿರುವುದರಿಂದ ಇವರ ದಿನನಿತ್ಯದ ಆಹಾರದಲ್ಲಿ ಯಥೇಚ್ಛವಾಗಿ ಹಾಲು, ಮೊಸರು, ತುಪ್ಪ ಹಾಗೂ ತೆಂಗನ್ನು ಹೆಚ್ಚಾಗಿ ಬಳಸುವರು. ವಿವಿಧ ಬಗೆಯ ತಂಬುಳಿ, ಗೊಜ್ಜು, ಅಪ್ಪೇಹುಳಿ, ಮಾವಿನಕಾಯಿ ಭೂತ ಗೊಜ್ಜು, ಮಜ್ಜಿಗೆ ಹುಳಿ, ಅವಿಲು, ಪಳಿದ್ಯ, ಪತ್ರೊಡೆ, ಹಲಸಿನಕಾಯಿ ಹಪ್ಪಳ, ಅಪ್ಪೆಮಿಡಿ ಉಪ್ಪಿನಕಾಯಿ ಇವೆಲ್ಲ ಅಡುಗೆ ಪದಾರ್ಥಗಳಾದರೆ, ಕೇಸರಿ ಅನ್ನ, ಮಣೆ ಬೆಲ್ಲಾ, ತೊಡೆದೆ, ಹಲಸಿನ ಹಣ್ಣಿನ ಕಡುಬು, ಸುಟ್ಟ, ಸಾಟ್ಯ ಇವೆಲ್ಲ ಸಿಹಿ ತಿನಿಸುಗಳು.

ಹಿಂದಿನ ದಿನಗಳಲ್ಲಿ ರಾಜಮನೆತನದ ಅರಸರುಗಳು ಯಜ್ಞ, ಯಾಗಾದಿಗಳನ್ನು ಹವ್ಯಕ ಬ್ರಾಹ್ಮಣ ಪಂಡಿತರ ಮೂಲಕವೇ ಮಾಡಿಸಿಕೊಳ್ಳುತ್ತಿದ್ದರು. ಹವ್ಯಕರ ಮೂಲ ಕಸುಬು ಹೈನುಗಾರಿಕೆ ಹಾಗೂ ಕೃಷಿ. ಬಾಳೆ, ತೆಂಗು, ಅಡಿಕೆ, ಭತ್ತ, ಕಾಳುಮೆಣಸು, ವೀಳ್ಯದೆಲೆ, ಏಲಕ್ಕಿ ಇತ್ಯಾದಿಗಳನ್ನು ಬೆಳೆಯುತ್ತಿದ್ದರು. ಇಂದಿಗೂ ಕೂಡ ಅನೇಕ ಹವ್ಯಕ ಕುಟುಂಬಗಳು ಪೌರೋಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಇವರ ಮೂಲ ಕಸುಬು ಹೈನುಗಾರಿಕೆ ಹಾಗೂ ಕೃಷಿ.

ಆಧುನಿಕ ಹವ್ಯಕರು

ಆದರೆ ಈಗಿನ ಆಧುನಿಕ ಜಗತ್ತಿನಲ್ಲಿ ಹವ್ಯಕರು ವೈದ್ಯಕೀಯ, ಶಿಕ್ಷಣ, ಎಂಜಿನಿಯರಿಂಗ್‌ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹವ್ಯಕರು ಮೂಲವಾಗಿ ನೆಲೆಸಿರುವುದು ಕರ್ನಾಟಕ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೇರಳ ರಾಜ್ಯದ ಕಾಸರಗೋಡು ಹಾಗೂ ಪಾಲಕ್ಕಾಡ್‌ ನಲ್ಲಿ. ಆದರೆ ಈಗಿನ ತಲೆಮಾರಿನ ಹೆಚ್ಚಿನ ಜನರು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಹಾಗೆಯೇ ಅಮೆರಿಕಾ, ಲಂಡನ್‌, ಆಸ್ಟ್ರೇಲಿಯಾ, ಸಿಂಗಾಪುರ್‌ ಹಾಗೂ ಅರಬ್‌ ರಾಷ್ಟ್ರಗಳಲ್ಲೂ ಇವರು ನೆಲೆಗೊಂಡಿದ್ದಾರೆ.

IMG_20231125_143836

ಹೈಗುಂದದ ಇತಿಹಾಸ

ಸುಮಾರು 1500 ವರ್ಷಗಳ ಹಿಂದೆ ಕದಂಬರ ರಾಜ ಮಯೂರ ವರ್ಮ ಸುಮಾರು 32 ಹವ್ಯಕ ಬ್ರಾಹ್ಮಣರ ಕುಟುಂಬವನ್ನು ಯಜ್ಞಯಾಗಾದಿಗಳನ್ನು ನಡೆಸಲು ಉತ್ತರ ಭಾರತದ ಅಹಿಚತ್ರದಿಂದ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಗ್ರಾಮಕ್ಕೆ ಕರೆಸಿದನು. ಆದರೆ ಪಲ್ಲವರು ಸೇರಿದಂತೆ ಅನೇಕ ರಾಜಮನೆತನದ ಅರಸರುಗಳು ಕದಂಬರ ಮೇಲೆ ಧಾಳಿ ನಡೆಸಿ ಬಂದಾಗ, ಮಯೂರ ವರ್ಮ ಹವ್ಯಕರ ಬ್ರಾಹ್ಮಣರನ್ನು ಕಾಪಾಡಲು ಶರಾವತಿ ನದಿಯ ದಡದಲ್ಲಿದ್ದ ಈ ಭಾಗವನ್ನು ನಾಲ್ಕೂ ಕಡೆ ಕೊರೆಯಿಸಿ ದ್ವೀಪವನ್ನಾಗಿಸಿದನಂತೆ, ಈ ದ್ವೀಪವೇ ಹೈನಗುಂದ!

ಹೈಗುಂದದ ಮೂಲ

ಹೈ ಎಂದರೆ ಹೈನುಗಾರಿಕೆ ಹಾಗೂ ಗುಂದ ಎಂದರೆ ಗುಡ್ಡ. ಈ ಗುಡ್ಡದ ತಪ್ಪಲಿನಲ್ಲಿ ವಾಸಿಸುವುದರಿಂದ ಇದಕ್ಕೆ ಹೈಗುಂದ ಎಂಬ ಹೆಸರು ಬಂದಿದೆ. ಇಲ್ಲಿ ಮಯೂರ ವರ್ಮನು ದುರ್ಗಾ ಪರಮೇಶ್ವರಿ ದೇವಿಯ ಶಕ್ತಿ ಪೀಠವನ್ನು ಪ್ರತಿಷ್ಠಾಪಿಸಿ ನಿತ್ಯ ದೇವಿಗೆ ಹಾಲಿನ ಅಭಿಷೇಕ ಪೂಜೆ ಪುನಸ್ಕಾರವನ್ನು ಬ್ರಾಹ್ಮಣರ ಮೂಲಕ ಸಲ್ಲಿಸುತ್ತಿದ್ದರು. ನಾವು ಹೈಗುಂದದಲ್ಲಿ ಶಕ್ತಿಪೀಠ ದುರ್ಗಾ ದೇವಿಯ ದೇವಾಲಯ ಹಾಗೂ ಎದುರು ಬದಿಯಲ್ಲಿ ಕಲ್ಯಾಣಿಯನ್ನು ಇವತ್ತಿಗೂ ನೋಡಬಹುದು. ರಾಜ ಮಯೂರ ವರ್ಮನು ದಿನನಿತ್ಯ ಯಜ್ಞಯಾಗಾದಿ, ಹೋಮ ಹವನಗಳನ್ನು ಮಾಡಿಸುತ್ತಿದ್ದರಿಂದ ಇಂದಿಗೂ ಹೈಗುಂದದಲ್ಲಿ ಪ್ರತಿ ದಾರಿಯಲ್ಲಿಯೂ ಕದಂಬರ ಕಾಲದ ಸಾವಿರಾರು ಇಟ್ಟಿಗೆ ಹಾಗೂ ಯಜ್ಞಕುಂಡಗಳ ರಚನೆಯನ್ನು ನೋಡಬಹುದು. ಇಲ್ಲಿ ನಾವು ಅನೇಕ ಬುದ್ಧ, ಯಕ್ಷ ಹಾಗೂ ಯಕ್ಷಿಣಿ ಪ್ರತಿಮೆಯ ವಿಗ್ರಹಗಳನ್ನು ನೋಡಬಹುದು. ಇಲ್ಲಿ ಜೈನರ ಆಗಮನ ಆಗಿತ್ತು ಎಂಬ ಪ್ರತೀತಿ ಇದೆ. ಇಲ್ಲಿ ವಿಶೇಷವಾಗಿ ತುಳುನಾಡ ಯಕ್ಷ ದೇವ ಬೊಬ್ಬರ್ಯನ ವಿಗ್ರಹವನ್ನು ನೋಡಬಹುದು. ಈ ಯಕ್ಷ, ಯಕ್ಷಿಣಿ ದೈವ ಇಲ್ಲಿನ ತಾಣದ ಶಕ್ತಿಯಾಗಿದ್ದು ಇಲ್ಲಿನ ಭೂಮಿ ಹಾಗೂ ಜನರನ್ನು ಕಾಯುತ್ತದೆ ಎಂಬ ಪ್ರತೀತಿ ಇದೆ.

IMG_20231125_143955

ಈಗಿನ ಹೈಗುಂದ

ವಿಶೇಷವೆಂದರೆ ಈಗ ಬರೀ ಹವ್ಯಕರಷ್ಟೆ ಅಲ್ಲದೇ, ಬೇರೆ ಜನರು ಕೂಡಾ ಇಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಹವ್ಯಕರ ಜನಸಂಖ್ಯೆ ತೀರಾ ಕಡಿಮೆ ಆಗಿದೆ. ಹವ್ಯಕರ ಮಕ್ಕಳು ಉದ್ಯೋಗದ ಸಲುವಾಗಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ಚದುರಿ ಹೋಗಿದ್ದಾರೆ. ಈಗ ಹುಡುಕಿದರೆ ಹೈಗುಂದದಲ್ಲಿ ಕೇವಲ ಎರಡು ಮೂರು ಹವ್ಯಕರ ಮನೆಗಳಿದ್ದು, ಅಲ್ಲಿ ವಯಸ್ಸಾದ ದಂಪತಿಗಳು ಮಾತ್ರ ವಾಸವಿರುವುದನ್ನು ನೋಡಿ ಮನಸ್ಸಿಗೆ ಸ್ವಲ್ಪ ಬೇಸರವೆನಿಸಿತು.

ಆದರೆ ನೀವು ಏನೇ ಹೇಳಿ, ಶರಾವತಿ ನದಿಯ ಮಡಿಲಿನಲ್ಲಿ ಹುದುಗಿರುವ ಈ ಸುಂದರವಾದ ದ್ವೀಪದ ನಡುವಿನಲ್ಲಿ ಇರುವ ಶಕ್ತಿಪೀಠ ದುರ್ಗಾ ದೇವಿಯ ದರ್ಶನ ಪಡೆದಾಗ ಮನಸ್ಸಿಗೆ ಸಮಾಧಾನ ಹಾಗೂ ಶಾಂತಿ ಸಿಗುವುದಂತೂ ಸತ್ಯ.

– ಸಂಜ್ಞಾ ಭಟ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ