ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಐದನೇ ಸೀಸನ್‌ಗೆ ಸಜ್ಜಾಗಿದೆ. ಕಳೆದ ನಾಲ್ಕು ಸೀಸನ್‌ಗಳಲ್ಲಿ ವಿಶ್ವದ ಪ್ರಮುಖ ಟೆನಿಸ್ ಆಟಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಭಾರತದ ಪ್ರಮುಖ ಟೆನಿಸ್ ಲೀಗ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಈ ಟೂರ್ನಿಯನ್ನು ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಸಂಸ್ಥೆ ಆಯೋಜಿಸುತ್ತಿದೆ.

ಡಿಸೆಂಬರ್ 17ರಿಂದ 20, 2026ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ KSLTA ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಟೂರ್ನಿ ನಡೆಯಲಿದೆ. ಈ ಬಾರಿ ವಿಶ್ವದ ಖ್ಯಾತ ಟೆನಿಸ್ ಆಟಗಾರರ ಜೊತೆಗೆ ಭಾರತದ ಪ್ರಮುಖ ಆಟಗಾರರೂ ಕಣಕ್ಕಿಳಿಯಲಿದ್ದಾರೆ.

ಕಳೆದ ನಾಲ್ಕು ಸೀಸನ್‌ಗಳಲ್ಲಿ ವರ್ಲ್ಡ್ ಟೆನಿಸ್ ಲೀಗ್‌ನಲ್ಲಿ ಭಾಗವಹಿಸಿರುವ ಆಟಗಾರರ ಗುಣಮಟ್ಟ ಮತ್ತು ಅವರ ಪ್ರದರ್ಶನ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದೆ. ಹಿಂದಿನ ಸೀಸನ್‌ಗಳ ಯಶಸ್ಸಿನ ಮುಂದುವರಿಕೆಯಾಗಿ, ಐದನೇ ಸೀಸನ್‌ನಲ್ಲೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಆಟಗಾರರು ಹಾಗೂ ಉದಯೋನ್ಮುಖ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸೆಣಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ಭಾಗವಹಿಸಿದ್ದ ಪೌಲಾ ಬಡೋಸಾ, ಯೂಕಿ ಭಾಂಬ್ರಿ, ಸುಮಿತ್ ನಾಗಲ್, ದಕ್ಷಿಣೇಶ್ವರ್ ಸುರೇಶ್, ಮಾಯಾ ರಾಜೇಶ್ವರನ್ ರೇವತಿ ಮತ್ತು ಶ್ರೀವಲ್ಲಿ ಭಾಮಿದಿಪಾಟಿ ಸೇರಿದಂತೆ ಹಲವು ಆಟಗಾರರು ಈ ಬಾರಿಯೂ WTL ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವರ್ಲ್ಡ್ ಟೆನಿಸ್ ಲೀಗ್‌ನ ಸಹ-ಸಂಸ್ಥಾಪಕ ಮಹೇಶ್ ಭೂಪತಿ ಮಾತನಾಡಿ, “ಕಳೆದ ಸೀಸನ್‌ನಲ್ಲಿ ಅಂತರರಾಷ್ಟ್ರೀಯ ಆಟಗಾರರು ಮತ್ತು ಭಾರತದ ಪ್ರತಿಭಾವಂತ ಆಟಗಾರರು ಒಂದೇ ವೇದಿಕೆಯಲ್ಲಿ ಆಡಿದ್ದು, ಅಭಿಮಾನಿಗಳಿಗೆ ಉನ್ನತ ಮಟ್ಟದ ಟೆನಿಸ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಿತ್ತು. ಅಭಿಮಾನಿಗಳಿಂದ ದೊರೆತ ಪ್ರತಿಕ್ರಿಯೆ ಮತ್ತು ಟೂರ್ನಿಯ ಸುತ್ತಲಿನ ಉತ್ಸಾಹ ನಮ್ಮ ಉದ್ದೇಶಕ್ಕೆ ಮತ್ತಷ್ಟು ಪ್ರೇರಣೆ ನೀಡಿದೆ. ಐದನೇ ಸೀಸನ್‌ಗೆ ಕಾಲಿಡುತ್ತಿರುವ ನಾವು, ಈ ಯಶಸ್ಸನ್ನು ಮುಂದುವರಿಸುವುದರ ಜೊತೆಗೆ ಇನ್ನಷ್ಟು ಹೊಸ ಅಭಿಮಾನಿಗಳನ್ನು ತಲುಪಲು ಮತ್ತು ಪ್ರತಿ ಸೀಸನ್‌ನಲ್ಲೂ ಟೂರ್ನಿಯನ್ನು ಮತ್ತಷ್ಟು ಉತ್ತಮಗೊಳಿಸಲು ಬದ್ಧರಾಗಿದ್ದೇವೆ,” ಎಂದರು.

ವರ್ಲ್ಡ್ ಟೆನಿಸ್ ಲೀಗ್‌ನ ಸಹ-ಸಂಸ್ಥಾಪಕಿ ಹೇಮಾಲಿ ಶರ್ಮಾ ಮಾತನಾಡಿ, “ವರ್ಲ್ಡ್ ಟೆನಿಸ್ ಲೀಗ್ ಅನ್ನು ಮತ್ತೊಮ್ಮೆ ಬೆಂಗಳೂರಿಗೆ ಕರೆತರುತ್ತಿರುವುದು ನಮಗೆ ಸಂತೋಷ ತಂದಿದೆ. ಬೆಂಗಳೂರಿನಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹವಿದೆ. ಅದರಲ್ಲೂ ಟೆನಿಸ್ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವುದರಿಂದ ಐದನೇ ಸೀಸನ್ ಆಯೋಜಿಸಲು ಇದು ಸೂಕ್ತ ತಾಣವಾಗಿದೆ. ಈ ಬಾರಿಯೂ ವಿಶ್ವದ ಕೆಲವು ಅತ್ಯುತ್ತಮ ಆಟಗಾರರ ಜೊತೆಗೆ ಭಾರತದ ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಅಭಿಮಾನಿಗಳಿಗೆ ಮರೆಯಲಾಗದ ಟೆನಿಸ್ ಅನುಭವ ನೀಡುವುದರ ಜೊತೆಗೆ, ಭಾರತದ ಟೆನಿಸ್ ಪ್ರತಿಭೆಗಳಿಗೆ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದರು.

ವಿಶ್ವದಾದ್ಯಂತ ಟೆನಿಸ್‌ಗೆ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಭಾರತದಲ್ಲಿ ಬೆಳೆಯುತ್ತಿರುವ ಟೆನಿಸ್ ಕ್ಷೇತ್ರದ ನಡುವೆ, ಅಂತರರಾಷ್ಟ್ರೀಯ ಟೆನಿಸ್ ಅನ್ನು ಭಾರತೀಯ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿಸುವಲ್ಲಿ WTL ಪ್ರಮುಖ ಪಾತ್ರ ವಹಿಸುತ್ತಿದೆ. ಇದರೊಂದಿಗೆ, ಭಾರತದ ಯುವ ಟೆನಿಸ್ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಉತ್ತಮ ಅವಕಾಶವನ್ನೂ ಒದಗಿಸುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ