ಗಿಟಾರ್ ನಾದದ ಮೂಲಕ ಕೋಟ್ಯಾಂತರ ಜನರ ಮನಸ್ಸು ಗೆದ್ದಿದ್ದ ಗಿಟಾರ್ ಖ್ಯಾತ ಸಂಗೀತ ಕಲಾವಿದ  ಡಿ ಶ್ರೀನಿವಾಸ್ ಆಚಾರ್​ ನಿಧನರಾಗಿದ್ದಾರೆ.

ಸರಿಗಮಪ ರಿಯಾಲಿಟಿ ಶೋನಲ್ಲಿ ಬೆರಳ ತುದಿಗಳಲ್ಲಿ ಗಿಟಾರ್ ನಾದ ಮೂಲಕ ಕೇಳುಗರಿಗೆ ಇಂಪು ನೀಡುತ್ತಿದ್ದ ಗಿಟಾರ್ ಶ್ರಿನಿವಾಸ್ ನಿಧನಕ್ಕೆ ಕನ್ನಡಿಗರು ಕಂಬನಿ ಮಿಡಿದಿದ್ದಾರೆ.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದ ಹಿನ್ನೆಲೆ ಸಂಗೀತಕ್ಕೆ ತಮ್ಮ ಅದ್ಭುತ ಗಿಟಾರ್ ವಾದನದ ಮೂಲಕ ಜೀವ ತುಂಬುತ್ತಿದ್ದವರು ಡಿ ಶ್ರೀನಿವಾಸ್ ಆಚಾರ್​.

ಕಳೆದ ಹಲವು ವರ್ಷಗಳಿಂದ ‘ಸರಿಗಮಪ’ ಸೇರಿದಂತೆ ದಕ್ಷಿಣ ಭಾರತದ ಹಲವಾರು ಪ್ರಮುಖ ಸಂಗೀತ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಸುಗಮ ಸಂಗೀತ ಕಚೇರಿಗಳಲ್ಲಿ ಗಿಟಾರ್ ವಾದಕರಾಗಿ ಶ್ರೀನಿವಾಸ್ ಆಚಾರ್ ಕಾರ್ಯನಿರ್ವಹಿಸುತ್ತಿದ್ದರು. ವೇದಿಕೆಯ ಮೇಲೆ ಗಾಯಕರು ಹಾಡಲು ಆರಂಭಿಸಿದರೆ, ತಮ್ಮ ಗಿಟಾರ್‌ನ ನಾದದಿಂದಲೇ ಗಾಯನಕ್ಕೆ ಅಪಾರ ಮೆರುಗು ನೀಡುತ್ತಿದ್ದರು. ಅವರ ಬೆರಳ ತುದಿಯ ಮಾಂತ್ರಿಕತೆ ಅಪಾರ ಸಂಖ್ಯೆಯ ಸಂಗೀತ ಪ್ರೇಮಿಗಳ ಮನ ಗೆದ್ದಿತ್ತು.

ಶ್ರೀನಿವಾಸ್ ಆಚಾರ್ ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಸಂಗೀತ ಕ್ಷೆತ್ರದ ದಿಗ್ಗಜರು ಹಾಗೂ ಸಹಕಲಾವಿದರು ಕಂಬನಿ ಮಿಡಿದಿದ್ದಾರೆ. ಖ್ಯಾತ ಕಂಜೀರಾ ವಾದಕ ಅಮೃತ್ ಸೇರಿದಂತೆ ಹಿರಿಯ ವಾದ್ಯಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಶೋಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

“ನಮ್ಮ ಪ್ರೀತಿಯ ಮತ್ತು ಕನ್ನಡಿಗರ ನೆಚ್ಚಿನ ಗಿಟಾರ್ ಮಾಂತ್ರಿಕ ಶ್ರೀನಿವಾಸ್ ಆಚಾರ್ ಅವರ ಹಠಾತ್ ಅಗಲಿಕೆಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನೋವನ್ನು ತಡೆಯುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಸಂಗೀತ ಸಹೋದ್ಯೋಗಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಶ್ರೀನಿವಾಸ್​ ಆಚಾರ್​ ಅವರು ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನೂರಾರು ಬಾಲ ಗಾಯಕರು ಹಾಗೂ ಯುವ ಸ್ಪರ್ಧಿಗಳ ಹಾಡಿಗೆ ಹಿನ್ನೆಲೆ ಧ್ವನಿಯಾಗಿ, ಅವರಿಗೆ ಮಾರ್ಗದರ್ಶನ ನೀಡುತ್ತಾ ಪ್ರೋತ್ಸಾಹಿಸುತ್ತಿದ್ದರು. ಕನ್ನಡ ಸುಗಮ ಸಂಗೀತ ಹಾಗೂ ಸಾಂಸ್ಕೃತಿಕ ಕಚೇರಿಗಳ ರಂಗದಲ್ಲಿ ಶ್ರೀನಿವಾಸ್ ಅವರ ಕೊಡುಗೆ ಅಪಾರ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ