– ರಾಘವೇಂದ್ರ ಅಡಿಗ ಎಚ್ಚೆನ್

ಡಬ್ಬಿಂಗ್ ಸಿನಿಮಾಗಳು ಕನ್ನಡದಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡುವುದು ಕಷ್ಟ ಎಂಬ ಲೆಕ್ಕಾಚಾರಕ್ಕೆ ‘ರಾಮಾಯಣ’ ಸಿನಿಮಾ ತಿರುಗೇಟು ನೀಡಿದೆ. ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ಕನ್ನಡ ಆವೃತ್ತಿಯೊಂದರಲ್ಲೇ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಸಿನಿಮಾ ಕನ್ನಡ ಪ್ರೇಕ್ಷಕರಿಂದಲೂ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಯಶಸ್ಸಿನ ಹಿಂದೆ ಚಿತ್ರದ ಡಬ್ಬಿಂಗ್ ಗುಣಮಟ್ಟ ಪ್ರಮುಖ ಪಾತ್ರ ವಹಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕನ್ನಡ ಸಂಭಾಷಣೆಗೆ ಹೊಂದುವ ಧ್ವನಿಗಳು, ಪಾತ್ರಗಳಿಗೆ ಸೂಕ್ತವಾದ ಧ್ವನಿ ಆಯ್ಕೆ ಮತ್ತು ಎಐ ತಂತ್ರಜ್ಞಾನದ ಬಳಕೆಯಿಂದ ನಟರ ತುಟಿ ಚಲನೆಗೆ ಕನ್ನಡ ಸಂಭಾಷಣೆ ಹೊಂದಾಣಿಕೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ಕನ್ನಡದಲ್ಲೇ ನಿರ್ಮಾಣವಾದ ಸಿನಿಮಾ ನೋಡುವ ಅನುಭವ ಪ್ರೇಕ್ಷಕರಿಗೆ ಸಿಗುತ್ತಿದೆ. ಡಬ್ಬಿಂಗ್ ಗುಣಮಟ್ಟಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ಕನ್ನಡದ ಕಲೆಕ್ಷನ್ ವಿಚಾರದಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ದಾಖಲೆಯನ್ನೂ ರಾಮಾಯಣ ಗುರಿಯಾಗಿಸಿಕೊಂಡಿದೆ. ಟಾಕ್ಸಿಕ್ ಕನ್ನಡ ಆವೃತ್ತಿ ತನ್ನ ಸಂಪೂರ್ಣ ಪ್ರದರ್ಶನದಲ್ಲಿ 56 ಕೋಟಿ ರೂಪಾಯಿ ಗಳಿಸಿತ್ತು ಎನ್ನುವ ಅಂಕಿಅಂಶಗಳಿವೆ. ಆದರೆ ರಾಮಾಯಣ ಕೇವಲ ಆರು ದಿನಗಳಲ್ಲಿ 50 ಕೋಟಿ ರೂಪಾಯಿ ಗಡಿ ದಾಟಿದೆ. ಇದೇ ವೇಗ ಮುಂದುವರಿದರೆ ಟಾಕ್ಸಿಕ್ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆಯಿದೆ.

ಜಾಗತಿಕ ಗಳಿಕೆಯಲ್ಲೂ ರಾಮಾಯಣ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ವಿಶ್ವಾದ್ಯಂತ 823 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂಬ ಅಂಕಿಅಂಶಗಳು ಹೊರಬಿದ್ದಿವೆ. ಇದೇ ವೇಳೆ ಟಾಕ್ಸಿಕ್ ಚಿತ್ರದ ಒಟ್ಟು ಲೈಫ್‌ಟೈಮ್ ಗ್ರಾಸ್ ಗಳಿಕೆ 250 ಕೋಟಿ ರೂಪಾಯಿ ಎಂದು ಹೋಲಿಕೆ ಮಾಡಲಾಗುತ್ತಿದೆ.

ಒಟ್ಟಿನಲ್ಲಿ, ಕನ್ನಡದ ಡಬ್ಬಿಂಗ್ ಸಿನಿಮಾ ಮಾರುಕಟ್ಟೆಯಲ್ಲೂ ಹೊಸ ಸಾಧ್ಯತೆಗಳನ್ನು ತೆರೆದಿರುವ ರಾಮಾಯಣ, ಮುಂದಿನ ದಿನಗಳಲ್ಲಿ ಇನ್ನೆಷ್ಟು ದಾಖಲೆಗಳನ್ನು ನಿರ್ಮಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ