‘ಕನ್ನಡ ಭಾಷೆ ಮತ್ತು ನಾಡಧ್ವಜಕ್ಕೆ ಗೌರವ, ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಅಗತ್ಯ ಕಾಯ್ದೆ ರೂಪಿಸಲಾಗುವುದು. ಅಲ್ಲದೆ, ನಮ್ಮ ನಾಡು, ನುಡಿ, ಸಂಸ್ಕೃತಿಗೆ ಮತ್ತಷ್ಟು ಒತ್ತು ನೀಡುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿಯೇ 2027ಕ್ಕೆ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

ಮೈಸೂರಿನಲ್ಲಿ ಬುಧವಾರ ಡಾ.ಎಂ.ವೀರಪ್ಪ ಮೊಯ್ಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ (ಸಂಪುಟ – 4)- ಗದ್ಯ ಮಹಾಕಾವ್ಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದ  ಅವರು, ಮುಂದಿನ ಬಜೆಟ್​ನಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕನ್ನಡ ಭಾಷೆ ಮತ್ತು ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಚಾರವಾಗಿಯೂ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಕನ್ನಡ ಧ್ವಜದ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಅಗತ್ಯ ಕಾನೂನು ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂವಿಧಾನದಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಕನ್ನಡ ಭಾಷೆ ಮತ್ತು ಕನ್ನಡ ಬಾವುಟಕ್ಕೆ ವಿಶೇಷ ಗುರುತು ಹಾಗೂ ಗೌರವ ದೊರಕಿಸುವುದು ಕಾಂಗ್ರೆಸ್ ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದರು.ಮೊಯ್ಲಿ ಅವರ ಸಾಹಿತ್ಯಿಕ ಹಾಗೂ ರಾಜಕೀಯ ಕೊಡುಗೆಗಳು ಅಪಾರ. 1985ರಲ್ಲಿ ನನಗೆ, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಯುವ ನಾಯಕರಿಗೆ ರಾಜೀವ್ ಗಾಂಧಿ ಅವರೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿಸಿಕೊಡುವಲ್ಲಿ ವೀರಪ್ಪ ಮೊಯ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಜೀವನದಲ್ಲಿ ಹಲವು ಯುವ ನಾಯಕರಿಗೆ ಅವಕಾಶ ಕಲ್ಪಿಸಿದ ಅವರು, ಇಂದು ಸಾಹಿತ್ಯ ಲೋಕದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿದ್ದಾರೆ ಎಂದು ಸ್ಮರಿಸಿದ ಅವರು, ಅವರಿಗೆ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳು ಲಭಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ’ ಎಂದರು.

ಸೋನಿಯಾ ಗಾಂಧಿ ಅವರ ಆತ್ಮಕಥೆ ಈಗ ದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಒಂದಷ್ಟು ಅನುಭವಗಳನ್ನು ಆಧರಿಸಿ ‘ನೀರಿನ ಹೆಜ್ಜೆ’ ಎಂಬ ಪುಸ್ತಕ ಬರೆದು ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದ್ದೆ. ಮಹಾತ್ಮ ಗಾಂಧೀಜಿ ಅವರ ನೂರು ವರ್ಷಗಳ ಇತಿಹಾಸ ಮತ್ತು ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಕಾರ್ಯಕ್ರಮದ ಕುರಿತು ಮತ್ತೊಂದು ಪುಸ್ತಕ ಸಿದ್ಧಪಡಿಸಿದ್ದು, ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ಮೊಯ್ಲಿ ಅವರ “ವಿಶ್ವ ಸಂಸ್ಕೃತಿ ಮಹಾಯಾನ” ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ಕೃತಿ. ಇದರಲ್ಲಿ ಜಗತ್ತಿನ ಸಂಸ್ಕೃತಿ, ನಾಗರಿಕತೆ, ಜ್ಞಾನ, ವಿಜ್ಞಾನ ಸ್ವಾತಂತ್ರ್ಯ ಹೋರಾಟದ ಕುರಿತು ಪ್ರಸ್ತಾಪಿಸಿದ್ದಾರೆ. ಗಾಂಧೀಜಿ ಅವರನ್ನು ಯುಗ ಪುರುಷ ಎಂದು ಕರೆದಿರುವುದು ಔಚಿತ್ಯಪೂರ್ಣವಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವೀರಪ್ಪ ಮೊಯ್ಲಿ ಅವರು ಸಾಹಿತಿ, ರಾಜಕಾರಣಿ ಹಾಗೂ ವಕೀಲರಾಗಿ ಮೂರೂ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಬಹುಮುಖ ಸಾಧನೆ ಮತ್ತು ಸಾಹಿತ್ಯದ ಕೊಡುಗೆ ಗಮನಾರ್ಹ ಎಂದರು.

ಎಂ. ವೀರಪ್ಪ ಮೊಯ್ಲಿ ಮಾತನಾಡಿ, ನನ್ನ ಸಾಹಿತ್ಯ ರಚನೆ ಸತ್ಯದ ಹುಡುಕಾಟದ ಪ್ರತಿಫಲವಾಗಿದೆ. ಯುದ್ಧದಿಂದ ವಿನಾಶವೇ ಹೊರತು ಶಾಂತಿ, ನೆಮ್ಮದಿ ಬರುವುದಿಲ್ಲ. ಹಾಗಾಗಿ ಎಲ್ಲರನ್ನೂ ಒಗ್ಗೂಡಿಸುವ ಸಲುವಾಗಿ ವಿಶ್ವ ಐಕ್ಯತೆಗಾಗಿ ವಿಶ್ವ ಸಂಸ್ಕೃತಿ ಬಗ್ಗೆ ಬರದಿದ್ದೇನೆ ಎಂದರು.

ಸಾಹಿತಿ ಡಾ. ಕೆ.ಅನಂತರಾಮು ಮಾತನಾಡಿ, ಮೊಯ್ಲಿ ಅವರು ಕನ್ನಡ ಮತ್ತು ಇಂಗ್ಲಿಷ್​ ಭಾಷೆಗಳಲ್ಲಿ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಹಲವು ಕೃತಿಗಳು ತೆಲುಗು, ತಮಿಳು, ರಷ್ಯನ್​ ಹಾಗೂ ಒಡಿಯಾ ಭಾಷೆಗಳಿಗೆ ಅನುವಾದಗೊಂಡಿರುವುದು ಅವರ ಸಾಹಿತ್ಯ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವಿಶ್ವ ಕನ್ನಡ ಸಮ್ಮೇಳನದ ಚಿಂತನೆ: 1985ರಲ್ಲಿ ಮೈಸೂರಲ್ಲೇ ಮೊದಲ ಬಾರಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು. ನಂತರ ಬೆಳಗಾವಿಯಲ್ಲಿ 2011ರ ಮಾರ್ಚ್​ 11ರಿಂದ 13ರವರೆಗೆ ಸಮ್ಮೇಳನ ಅದ್ಧೂರಿಯಾಗಿ ನಡೆದಿತ್ತು, ಇನ್ಫೋಸಿಸ್​ ಸಂಸ್ಥಾಪಕ ಡಾ ಎನ್​. ಆರ್. ನಾರಾಯಣಮೂರ್ತಿ ಸಮ್ಮೇಳನ ಉದ್ಘಾಟಿಸಿದ್ದರು. ಬಾಲುವುಡ್​ ನಟಿ ಐಶ್ವರ್ಯ ರೈ ಬಚ್ಚನ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. 15 ವರ್ಷಗಳ ನಂತರ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವ ಕನ್ನಡ ಸಮ್ಮೇಳನ ನಡೆಸಲು ನಿರ್ಧರಿಸಿದ್ದಾರೆ.

ಈ ಸಂದರ್ಭ ಸಚಿವ ಡಾ.ಯತೀದ್ರ ಸಿದ್ಧರಾಮಯ್ಯ, ಶಾಸಕರಾದ ತನ್ವೀರ್​ ಸೇಠ್​, ದರ್ಶನ್​ ಧ್ರುವನಾರಾಯಣ್​, ಗಣೇಶ್​ ಪ್ರಸಾದ್​, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್. ಎಂ. ರೇವಣ್ಣ, ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್​, ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷ ಕೆ. ಎಂ. ನಾಗರಾಜ್, ಸಪ್ನ ಬುಕ್​ ಹೌಸ್​ ವ್ಯವಸ್ಥಾಪಕ ನಿರ್ದೇಶಕ ನಿತಿನ್​ ಷಾ ಮತ್ತಿತರರು ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ