Sj*

*ಡಿಸೆಂಬರ್ 3ರಿಂದ 5ರವರೆಗೆ ಮೂರು ದಿನಗಳ ವಿಶೇಷ ಅಭಿನಂದನಾ ಸಮಾರಂಭ; ಮಣಿರತ್ನಂ, ಅನುರಾಗ್ ಕಶ್ಯಪ್, ರಸೂಲ್ ಪೂಕುಟ್ಟಿ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ; ‘ಘಟಶ್ರಾದ್ಧ’ ಸೇರಿದಂತೆ ಐದು ಚಿತ್ರಗಳ ಪ್ರದರ್ಶನ, ಮಾಸ್ಟರ್ ಕ್ಲಾಸ್, ಸಂವಾದ ಹಾಗೂ ವಿಚಾರ ಸಂಕಿರಣಗಳ ಆಯೋಜನೆ* .

ನ್ನಡ ಚಿತ್ರರಂಗದ ಹೆಮ್ಮೆಯ ಹಿರಿಯ ನಿರ್ದೇಶಕ ಡಾ. ಗಿರೀಶ್ ಕಾಸರವಳ್ಳಿ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಐದು ದಶಕಗಳ ಅಮೂಲ್ಯ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಡಿಸೆಂಬರ್ 3, 4 ಮತ್ತು 5ರಂದು ಮೂರು ದಿನಗಳ ವಿಶೇಷ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ‘ಕಾಸರವಳ್ಳಿ @ 50’ ಹೆಸರಿನಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡರು ಸಾರಥ್ಯ ವಹಿಸಿದ್ದಾರೆ.

ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಡಾ. ಗಿರೀಶ್ ಕಾಸರವಳ್ಳಿ ಅವರ ‘ಘಟಶ್ರಾದ್ಧ’ ಸೇರಿದಂತೆ ಆಯ್ದ ಐದು ಚಿತ್ರಗಳ ಪ್ರದರ್ಶನದ ಜೊತೆಗೆ ಸಿನಿಮಾ ಕ್ಷೇತ್ರದ ವಿವಿಧ ವಿಭಾಗಗಳ ಕುರಿತು ಮಾಸ್ಟರ್ ಕ್ಲಾಸ್‌ಗಳು, ಸಂವಾದಗಳು ಮತ್ತು ವಿಚಾರ ಸಂಕಿರಣಗಳು ನಡೆಯಲಿವೆ. ಖ್ಯಾತ ನಿರ್ದೇಶಕರಾದ ಮಣಿರತ್ನಂ, ಅನುರಾಗ್ ಕಶ್ಯಪ್ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರಸೂಲ್ ಪೂಕುಟ್ಟಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಸೌಂಡ್ ಡಿಸೈನ್ ಕುರಿತು ರಸೂಲ್ ಪೂಕುಟ್ಟಿ, ಸಿನಿಮಾ ಸಾಹಿತ್ಯ ಮತ್ತು ಗೀತರಚನೆ ಕುರಿತು ಜಯಂತ್ ಕಾಯ್ಕಿಣಿ, ಸಂಗೀತದ ಕುರಿತು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಾ, ಛಾಯಾಗ್ರಹಣದ ಕುರಿತು ಅಶೋಕ್ ಕಶ್ಯಪ್ ಹಾಗೂ ಸತ್ಯ ಹೆಗಡೆ, ಸಂಕಲನದ ಕುರಿತು ಸುರೇಶ್ ಅರಸ್ ಮತ್ತು ಗುಣಶೇಖರ್ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.ಇದರ ಜೊತೆಗೆ ಮಹಿಳಾ ಪ್ರಧಾನ ಕಥಾವಸ್ತುವಿನ ಸಿನಿಮಾಗಳ ಕುರಿತು ವಿಶೇಷ ಸಂವಾದ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಈ ಸಂವಾದದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಮೂರು ದಿನಗಳಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’ ಸೇರಿದಂತೆ ಅವರ ಐದು ಪ್ರಮುಖ ಚಿತ್ರಗಳ ಪ್ರದರ್ಶನ ಕೂಡ ಇರಲಿದೆ. ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

*ಕೃಷ್ಣೇಗೌಡ: ಹಿರಿಯ ನಿರ್ದೇಶಕರ ಸಾಧನೆ ಮುಂದಿನ ಪೀಳಿಗೆಗೆ ಪರಿಚಯವಾಗಲಿ*

ಈ ಕುರಿತು ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಹಿರಿಯ ನಿರ್ದೇಶಕರನ್ನು ಕೇವಲ ಒಂದು ದಿನದ ಸನ್ಮಾನಕ್ಕೆ ಸೀಮಿತಗೊಳಿಸದೆ, ಅವರ ಸಿನಿಮಾಗಳು, ಸಾಧನೆ, ಸಿನಿಮಾ ಭಾಷೆ ಮತ್ತು ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶ. ಕಳೆದ ವರ್ಷ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಅಭಿನಂದನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಬಾರಿ ಕರ್ನಾಟಕ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೂ ಹೆಮ್ಮೆ ತಂದಿರುವ ಡಾ. ಗಿರೀಶ್ ಕಾಸರವಳ್ಳಿ ಅವರ ವಿಶಿಷ್ಟ ಕಥನಶೈಲಿ, ಕಲಾತ್ಮಕ ದೃಷ್ಟಿಕೋನ, ಸಾಮಾಜಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಚಿತ್ರಗಳನ್ನು ಪ್ರದರ್ಶಿಸಿ, ಅವರ ಐದು ದಶಕಗಳ ಸಾಧನೆಯನ್ನು ಸಂಭ್ರಮಿಸುವ ಮೂಲಕ ಯುವ ಪೀಳಿಗೆಗೆ ಅವರ ಸೃಜನಶೀಲ ಚಿಂತನೆಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹಾಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

1000461725

*ಡಾ. ಗಿರೀಶ್ ಕಾಸರವಳ್ಳಿ: ಸಿನಿಮಾ ತಂತ್ರಜ್ಞಾನಕ್ಕಿಂತ ಮಾನವೀಯ ಅನುಭವ ಮುಖ್ಯ*

ತಮ್ಮ ಐದು ದಶಕಗಳ ಸಿನಿಮಾ ಪಯಣವನ್ನು ಸಂಭ್ರಮಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಾ. ಗಿರೀಶ್ ಕಾಸರವಳ್ಳಿ ಅವರು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡರು ಹಾಗೂ ಅವರ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

“ಡಿಸೆಂಬರ್ 3 ನನ್ನ ಹುಟ್ಟಿದ ದಿನ. ಅಂದು ನಾನು 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಅಂತಹ ವಿಶೇಷ ದಿನದಂದೇ ಈ ಮೂರು ದಿನಗಳ ಅಭಿನಂದನಾ ಸಮಾರಂಭ ಆರಂಭವಾಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ” ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಎಐ ಮೂಲಕ ಅದ್ಭುತ ದೃಶ್ಯಗಳನ್ನು ಸೃಷ್ಟಿಸಬಹುದಾದರೂ ಸಿನಿಮಾ ಎನ್ನುವುದು ಕೇವಲ ತಂತ್ರಜ್ಞಾನದಿಂದ ರೂಪುಗೊಳ್ಳುವುದಿಲ್ಲ. ನಿರ್ದೇಶಕ ತನ್ನ ಬದುಕಿನಲ್ಲಿ ಕಂಡ, ಅನುಭವಿಸಿದ ಮತ್ತು ಅರ್ಥಮಾಡಿಕೊಂಡ ಸಂಗತಿಗಳೇ ಸಿನಿಮಾದ ನಿಜವಾದ ಶಕ್ತಿ. ವಿಶ್ವ ಸಿನಿಮಾಗಳು, ಕನ್ನಡ ಸಾಹಿತ್ಯ ಮತ್ತು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಅನುಭವ ತಮ್ಮ ಸಿನಿಮಾ ದೃಷ್ಟಿಕೋನವನ್ನು ರೂಪಿಸಿವೆ. ಸಂಕಲನ, ಛಾಯಾಗ್ರಹಣ, ಸೌಂಡ್ ಡಿಸೈನ್ ಮತ್ತು ಸಂಗೀತ ಪ್ರತಿಯೊಂದಕ್ಕೂ ತನ್ನದೇ ಆದ ಸೃಜನಶೀಲತೆ ಹಾಗೂ ಸೌಂದರ್ಯಪ್ರಜ್ಞೆ ಇದೆ. ಈ ಕಾರ್ಯಕ್ರಮ ಸಿನಿಮಾ ಕಲೆಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳುವ ಅರ್ಥಪೂರ್ಣ ವೇದಿಕೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

*ರಾಜೇಂದ್ರ ಸಿಂಗ್ ಬಾಬು: ನಿರ್ದೇಶಕರ ಸೃಜನಶೀಲತೆಗೂ ಮನ್ನಣೆ ಸಿಗಬೇಕು*

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಸಿನಿಮಾ ಯಶಸ್ವಿಯಾದಾಗ ಅದರ ಕೀರ್ತಿ ಹೆಚ್ಚಾಗಿ ಕಲಾವಿದರಿಗೆ ಸಲ್ಲುತ್ತದೆ. ಆದರೆ ಸೋತಾಗ ಮಾತ್ರ ನಿರ್ದೇಶಕನ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ನಿರ್ದೇಶಕರ ಶ್ರಮ, ದೃಷ್ಟಿಕೋನ ಮತ್ತು ಸೃಜನಶೀಲತೆಗೂ ಸೂಕ್ತ ಮನ್ನಣೆ ದೊರೆಯಬೇಕು. ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ ಹಿರಿಯ ನಿರ್ದೇಶಕರ ಚಿತ್ರಗಳನ್ನು ಪ್ರದರ್ಶಿಸಿ, ಅವರ ಸಾಧನೆಯನ್ನು ಜನರಿಗೆ ಪರಿಚಯಿಸುವುದು ದೊಡ್ಡ ಕೆಲಸ. ರಸೂಲ್ ಪೂಕುಟ್ಟಿ ಅವರಂತಹ ಪರಿಣತರಿಂದ ಮಾಸ್ಟರ್ ಕ್ಲಾಸ್‌ಗಳನ್ನು ಆಯೋಜಿಸಿರುವುದು ಯುವ ನಿರ್ದೇಶಕರು ಮತ್ತು ತಂತ್ರಜ್ಞರಿಗೆ ಉತ್ತಮ ಅವಕಾಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

*ನಾಗತಿಹಳ್ಳಿ ಚಂದ್ರಶೇಖರ್: ಐದು ದಶಕಗಳ ಕಲಾತ್ಮಕ ಬದ್ಧತೆಯ ಪಯಣ*

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಗಿರೀಶ್ ಕಾಸರವಳ್ಳಿ ಅವರು 75 ವರ್ಷಗಳ ಬದುಕಿನಲ್ಲಿ ಸುಮಾರು 50 ವರ್ಷಗಳನ್ನು ಸಿನಿಮಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಎರಡು ಸಾಕ್ಷ್ಯಚಿತ್ರಗಳು ಹಾಗೂ 18 ಫೀಚರ್ ಫಿಲ್ಮ್‌ಗಳನ್ನು ನಿರ್ದೇಶಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಕಲಾತ್ಮಕ ನಿಲುವುಗಳಿಗೆ ಬದ್ಧರಾಗಿ ಸಿನಿಮಾ ಮಾಡಿಕೊಂಡು ಬಂದಿರುವ ಅವರ ಪಯಣ ಅನುಕರಣೀಯ. ಎಐ ಸೇರಿದಂತೆ ಹೊಸ ತಂತ್ರಜ್ಞಾನಗಳು ಬೆಳೆದರೂ ಸಿನಿಮಾದ ಮೂಲಭೂತ ಮಾನವೀಯ ಮೌಲ್ಯಗಳು ಉಳಿಯಬೇಕು. ಈ ಕಾರ್ಯಕ್ರಮದ ಮಾಸ್ಟರ್ ಕ್ಲಾಸ್‌ಗಳು ಯುವ ಪೀಳಿಗೆಗೆ ಉಪಯುಕ್ತವಾಗಲಿವೆ ಎಂದರು.

*ಪಿ. ಶೇಷಾದ್ರಿ: ಕಾಸರವಳ್ಳಿ ಅವರಿಗಾಗಿ ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ*

ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರು ಮಾತನಾಡಿ, ಡಾ. ಗಿರೀಶ್ ಕಾಸರವಳ್ಳಿ ಅವರ ಐದು ದಶಕಗಳ ಸಿನಿಮಾ ಪಯಣವನ್ನು ಗೌರವಿಸುವ ನಿಟ್ಟಿನಲ್ಲಿ ಇಂತಹ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷದ ವಿಚಾರ. ಅವರ ಸಿನಿಮಾ ಸಾಧನೆ ಮತ್ತು ಕೊಡುಗೆಯನ್ನು ಸ್ಮರಿಸುವ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

*ನಂಜುಂಡೇಗೌಡ: ಕಾಸರವಳ್ಳಿ ಅವರ ಸಿನಿಮಾ ಪಯಣ ಅನುಕರಣೀಯ*

ಹಿರಿಯ ನಿರ್ದೇಶಕ ನಂಜುಂಡೇಗೌಡ ಅವರು ಕೂಡ ಡಾ. ಗಿರೀಶ್ ಕಾಸರವಳ್ಳಿ ಅವರ ಸಿನಿಮಾ ಸಾಧನೆ, ವಿಶಿಷ್ಟ ನಿರ್ದೇಶನ ಶೈಲಿ ಹಾಗೂ ಐದು ದಶಕಗಳ ಸಾರ್ಥಕ ಪಯಣದ ಕುರಿತು ಮಾತನಾಡಿದರು. ಅವರ ಸಾಧನೆಯನ್ನು ಗೌರವಿಸುವ ಇಂತಹ ವಿಶೇಷ ಅಭಿನಂದನಾ ಸಮಾರಂಭವನ್ನು ಆಯೋಜಿಸಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಯತ್ನವನ್ನು ಶ್ಲಾಘಿಸಿ, ಕಾರ್ಯಕ್ರಮದ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ಗಂಗಾಧರ ಮೊದಲಿಯಾರ್, ಸಂಕಲನಕಾರ ಕೆಂಪರಾಜ್, ಹಾಗೂ ನಿರ್ದೇಶಕ ಸಂತೋಷ್ ಕೊಡಂಕೇರಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ