– ರಾಘವೇಂದ್ರ ಅಡಿಗ ಎಚ್ಚೆನ್

ಕರ್ನಾಟಕವು ದೇಶದ ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿರುವುದಕ್ಕೆ ನೆರವಾಗುವ  ಮೂರು ದಿನಗಳ  ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಟೆಕ್ ಸಮಿಟ್ -ಬಿಟಿಎಸ್) 29ನೆ ಆವೃತ್ತಿಗೆ  ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರು  ಇಂದು ಇಲ್ಲಿ  ಚಾಲನೆ ನೀಡಿದರು.

ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆಯಲಿರುವ ʼಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ’ ಧ್ಯೇಯೊದ್ದೇಶದ ಈ ಸಮಾವೇಶದಲ್ಲಿ ಜಾಗತಿಕ ತಂತ್ರಜ್ಞಾನ ಕ್ಷೇತ್ರದ  ದಿಗ್ಗಜರು, ಉದ್ಯಮ ಪ್ರತಿನಿಧಿಗಳು, ಹೂಡಿಕೆದಾರರು, ನವೋದ್ಯಮಿಗಳು, ಸಂಶೋಧಕರು ಮತ್ತು ನೀತಿ ನಿರೂಪಕರು ಒಂದೆಡೆ ಸೇರಲಿದ್ದಾರೆ. ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು ಮತ್ತು ಸಹಯೋಗದ ಹೊಸ ಅವಕಾಶಗಳ ಕುರಿತು ಚರ್ಚಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ.

1002005912

ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ  ಪ್ರಿಯಾಂಕ್ ಖರ್ಗೆ, ಫ್ರಾನ್ಸ್‌ನ ಇಲ್-ದೆ-ಫ್ರಾನ್ಸ್ ಪ್ರಾದೇಶಿಕ ಮಂಡಳಿಯ ಅಧ್ಯಕ್ಷೆ  ವ್ಯಾಲೆರಿ ಪೆಕ್ರೆಸ್, ಕಿಯೊನಿಕ್ಸ್‌ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ ಹಾಗೂ ಜಾಗತಿಕ ತಂತ್ರಜ್ಞಾನ ಉದ್ಯಮದ ಪ್ರಮುಖ ಪ್ರತಿನಿಧಿಗಳಾದ ಮೈಕ್ರೊಸಾಫ್ಟ್‌ನ  ಪುನೀತ್ ಚಂಡೋಕ್ ಮತ್ತು ಮೈಕ್ರಾನ್‌ನ  ಆನಂದ್ ರಾಮಮೂರ್ತಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ವಿಷನ್ ಗ್ರೂಪ್‌ಗಳ ಅಧ್ಯಕ್ಷರಾದ  ಕ್ರಿಸ್ ಗೋಪಾಲಕೃಷ್ಣನ್, ಡಾ. ಕಿರಣ್ ಮಜುಂದಾರ್-ಷಾ,  ಪ್ರಶಾಂತ್ ಪ್ರಕಾಶ್ ಮತ್ತು ಡಾ. ಎ.ಎಸ್. ಕಿರಣ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಎಸ್‌ಟಿಪಿಐ ಮಹಾನಿರ್ದೇಶಕ  ಅರವಿಂದ್ ಕುಮಾರ್ ಮತ್ತು ಕೆಡಿಇಎಂ ಅಧ್ಯಕ್ಷ  ಬಿ.ವಿ. ನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಆರು ನಾವೀನ್ಯತಾ  ಉಪಕ್ರಮಗಳು
ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಸೆಮಿಕಂಡಕ್ಟರ್ ಸಂಶೋಧನೆ, ಆರೋಗ್ಯ ತಂತ್ರಜ್ಞಾನ ಮತ್ತು ಡೀಪ್‌ಟೆಕ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ತಂತ್ರಜ್ಞಾನ   ವ್ಯವಸ್ಥೆ  ಬಲಪಡಿಸುವ ಆರು ನಾವೀನ್ಯತಾ ಉಪಕ್ರಮಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು.

1002005918

ರಾಜ್ಯದಲ್ಲಿ ಉದ್ಯಮಗಳ ಅಗತ್ಯಗಳಿಗೆ ಅನುಗುಣವಾಗಿ ಪ್ರತಿಭೆ ಮತ್ತು ಕೌಶಲ ಅಭಿವೃದ್ಧಿ  ಬಲಪಡಿಸುವ ಉದ್ದೇಶದಿಂದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಜೊತೆಗಿನ   ಸಹಯೋಗಗಳನ್ನೂ ಪ್ರಕಟಿಸಲಾಯಿತು.

*ಕರ್ನಾಟಕದ ತಂತ್ರಜ್ಞಾನ ಮಹತ್ವಾಕಾಂಕ್ಷೆಗೆ ಬಲ ತುಂಬಲಿರುವ ಆರು ನಾವೀನ್ಯತಾ ಉಪಕ್ರಮಗಳು*
*ಉದ್ಘಾಟನಾ ಕಾರ್ಯಕ್ರಮದಲ್ಲಿ ಆರು ಪ್ರಮುಖ ಉಪಕ್ರಮಗಳನ್ನು ಪರಿಚಯಿಸಲಾಯಿತು*

ಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತು ಕಾರ್ಯತಂತ್ರದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗತ್ಯ ಸಾಮರ್ಥ್ಯಗಳನ್ನು ಬೆಳೆಸುವ ಕರ್ನಾಟಕದ ಗಮನವನ್ನು ಈ ಉಪಕ್ರಮಗಳು ಪ್ರತಿಬಿಂಬಿಸುತ್ತವೆ.

*ಕರ್ನಾಟಕ ಎಐ ಹಬ್:* ಬೆಂಗಳೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಐಟಿ) ಸ್ಥಾಪಿಸಲಾಗಿರುವ ಕರ್ನಾಟಕ ಕೃತಕ ಬುದ್ಧಿಮತ್ತೆ ಕೇಂದ್ರವು (ಎಐ ಹಬ್),  ಉದ್ದೇಶಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪನೆ ನಿಟ್ಟಿನಲ್ಲಿನ ಮೊದಲ ಹೆಜ್ಜೆಯಾಗಿದೆ. ಕೃತಕ ಬುದ್ಧಿಮತ್ತೆ ಕುರಿತ ಕೌಶಲ ತರಬೇತಿ, ಸಂಶೋಧನೆ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಾಮರ್ಥ್ಯ ವೃದ್ಧಿಗೆ ಈ ಕೇಂದ್ರ ಆದ್ಯತೆ ನೀಡಲಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯ ಕೌಶಲ ಹೊಂದಿರುವ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು ಹಾಗೂ ಹೊಸ ಚಿಂತನೆಗಳನ್ನು ವಾಸ್ತವ ಬಳಕೆಯ ಪರಿಹಾರಗಳಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ.

1002005906

*ಬ್ರೇನ್ಸ್ (BRAINZ) – ಬೆಂಗಳೂರು ರೋಬೊಟಿಕ್ಸ್ ಮತ್ತು ಎಐ ನಾವೀನ್ಯತಾ ವಲಯ:* ಕರ್ನಾಟಕ ಸರ್ಕಾರವು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆರ್ಟ್‌ಪಾರ್ಕ್ ಸಹಯೋಗದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. ಒಂಬತ್ತು ಎಕರೆ ಪ್ರದೇಶದಲ್ಲಿ ರೋಬೊಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ಟೆಕ್‌ ಕ್ಷೇತ್ರಗಳ ಕೇಂದ್ರವಾಗಿ ಇದನ್ನು ರೂಪಿಸುವ ಉದ್ದೇಶವಿದೆ. ಸಂಶೋಧನಾ ಸಂಸ್ಥೆಗಳು, ಉದ್ಯಮಗಳು ಮತ್ತು ನವೋದ್ಯಮಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಹಾಗೂ ವಾಸ್ತವ  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ನೆರವಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ₹ 1,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನೂ ಈ ಯೋಜನೆ ಹೊಂದಿದೆ.
2ಡಿ ನಾವೀನ್ಯತಾ ಕೇಂದ್ರ: 200 ಮಿ.ಮೀ. (8 ಇಂಚು) ಸಾಮರ್ಥ್ಯದ ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಪ್ರಾಯೋಗಿಕ ಉತ್ಪಾದನಾ ಘಟಕವನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸಲು ಕರ್ನಾಟಕ ಸರ್ಕಾರವು ʼಐಐಎಸ್‌ಸಿʼಗೆ ನೆರವು ನೀಡುತ್ತಿದೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳ ಸಹಭಾಗಿತ್ವದಲ್ಲಿ ʼಐಐಎಸ್‌ಸಿʼ ಮುನ್ನಡೆಸಲಿರುವ ಈ ಕೇಂದ್ರವು ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಾಮಾನ್ಯ ವೇದಿಕೆಯಾಗಲಿದೆ. ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ತಂತ್ರಜ್ಞಾನ ಕಟ್ಟಡ, 15,000 ಚದರ ಅಡಿಯ ದೂಳು, ಸೂಕ್ಷ್ಮ ಕಣಗಳು, ಸೂಕ್ಷ್ಮಜೀವಿಗಳು ಮತ್ತು ಇತರ ಕಲ್ಮಶಗಳು ಪ್ರವೇಶಿಸದಂತೆ ನಿಯಂತ್ರಿಸಲಾದ ವಿಶೇಷ ಸ್ವಚ್ಛ ಕೊಠಡಿ (ಕ್ಲೀನ್‌ರೂಮ್)  ಹಾಗೂ 80ರಿಂದ 90 ಪ್ರಕ್ರಿಯೆ, ಅಳತೆ ಮತ್ತು ಪರೀಕ್ಷಾ ಉಪಕರಣಗಳನ್ನು ಇಲ್ಲಿ ಸ್ಥಾಪಿಸುವ ಉದ್ದೇಶವಿದೆ.
*ಇನ್ಫಿಫ್ಯಾಬ್ (INFIfab):* ಸೆಮಿಕಂಡಕ್ಟರ್ ನಾವೀನ್ಯತೆ, ಸುಧಾರಿತ ಉತ್ಪಾದನೆ ಮತ್ತು ತಂತ್ರಜ್ಞಾನವನ್ನು ಪ್ರಾಯೋಗಿಕ ಬಳಕೆಗೆ ತರುವ ಉದ್ದೇಶದ ರಾಷ್ಟ್ರೀಯ ಕೇಂದ್ರವನ್ನು ಬೆಂಗಳೂರಿನ ʼಐಐಎಸ್‌ಸಿʼಯ ನ್ಯಾನೊ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದಲ್ಲಿ (ಸಿಇಎನ್‌ಎಸ್‌ಇ) ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ನೆರವು ನೀಡುತ್ತಿದೆ. ಸುಮಾರು 96,284 ಚದರ ಅಡಿ ವಿಸ್ತೀರ್ಣದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದ್ದು, ಇದರಲ್ಲಿ 20,000 ಚದರ ಅಡಿಯ ದೂಳು, ಸೂಕ್ಷ್ಮ ಕಣಗಳು, ಸೂಕ್ಷ್ಮಜೀವಿಗಳು ಮತ್ತು ಇತರ ಕಲ್ಮಶಗಳು ಪ್ರವೇಶಿಸದಂತೆ ನಿಯಂತ್ರಿಸಲಾದ ವಿಶೇಷ ಸ್ವಚ್ಛ ಕೊಠಡಿ (ಕ್ಲೀನ್‌ರೂಮ್) ಇರಲಿದೆ. ಸೆಮಿಕಂಡಕ್ಟರ್ ಉತ್ಪಾದನೆ, ಸುಧಾರಿತ ಪ್ಯಾಕೇಜಿಂಗ್, ಎಂಇಎಂಎಸ್, ಫೋಟೊನಿಕ್ಸ್, ಕ್ವಾಂಟಮ್ ತಂತ್ರಜ್ಞಾನ ಮತ್ತು ಮಿದುಳಿನ ಕಾರ್ಯವೈಖರಿ  ಅನುಕರಿಸುವ ಗಣಕ ತಂತ್ರಜ್ಞಾನ (ನ್ಯೂರೊಮಾರ್ಫಿಕ್ ಕಂಪ್ಯೂಟಿಂಗ್) ಕ್ಷೇತ್ರಗಳ ಸಂಶೋಧನೆಗೆ ಇದು ನೆರವಾಗಲಿದೆ.

*ಕೆ-ಹೀಲ್ (K-HEAL) – ಕರ್ನಾಟಕ ಆರೋಗ್ಯ ಎಂಜಿನಿಯರಿಂಗ್ ಮತ್ತು ಸುಧಾರಿತ ಜೀವವಿಜ್ಞಾನ:* ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಮುಖ ಶ್ರೇಷ್ಠತಾ ಕೇಂದ್ರ ಯೋಜನೆಯಾಗಿರುವ ಕೆ-ಹೀಲ್, ರಾಜ್ಯದ ಆರೋಗ್ಯ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನ ಮತ್ತು ವಿಶೇಷ ನೆರವಿನ ತಂತ್ರಜ್ಞಾನ ಕ್ಷೇತ್ರಗಳನ್ನು ಬಲಪಡಿಸಲಿದೆ. ವೈದ್ಯರು, ಸಂಶೋಧಕರು, ಉದ್ಯಮಗಳು ಮತ್ತು ನವೋದ್ಯಮಗಳನ್ನು ಒಂದೇ ವೇದಿಕೆಗೆ ಕರೆತಂದು, ಆರೋಗ್ಯ ಕ್ಷೇತ್ರದ ಅಗತ್ಯಗಳನ್ನು ಗುರುತಿಸುವುದು, ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸುವುದು ಹಾಗೂ ಅವುಗಳ ಬಳಕೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ, ಕೈಗೆಟುಕುವ ದರದ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಆರೋಗ್ಯ ಕ್ಷೇತ್ರದ ನಾವೀನ್ಯತೆಗಳಿಗೆ ಇದು ಆದ್ಯತೆ ನೀಡಲಿದೆ.

1002005919

*ಇನ್ನೊವರ್ಸ್* (Innoverse)
ಈಗಾಗಲೇ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸಿರುವ ಕರ್ನಾಟಕದ ಡೀಪ್‌ಟೆಕ್‌ ನವೋದ್ಯಮಗಳು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಂಡು, ಜಾಗತಿಕ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಇನ್ನೊವರ್ಸ್ ಫೌಂಡೇಷನ್ ನೆರವು ನೀಡಲಿದೆ. ಸ್ವಯಂಚಾಲಿತ ವ್ಯವಸ್ಥೆಗಳು ಹಾಗೂ ಸಮುದ್ರದಾಳದ ತಂತ್ರಜ್ಞಾನ ಬಳಕೆಯಿಂದ ಹಿಡಿದು ಬಾಹ್ಯಾಕಾಶ ತಂತ್ರಜ್ಞಾನದವರೆಗಿನ ಕ್ಷೇತ್ರಗಳಿಗೆ ಇದು ಆದ್ಯತೆ ನೀಡಲಿದೆ. ನವೋದ್ಯಮಗಳು ತಮ್ಮ ಪರಿಹಾರಗಳನ್ನು ವಿಸ್ತರಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಉಪಕ್ರಮ ಸಹಕಾರಿಯಾಗಲಿದೆ.
ಒಟ್ಟಾರೆಯಾಗಿ, ಈ ಎಲ್ಲ ಆರು ಉಪಕ್ರಮಗಳು ಸಂಶೋಧನಾ ಮೂಲಸೌಕರ್ಯ ನಿರ್ಮಾಣ, ದೇಶೀಯ ನಾವೀನ್ಯತೆಗಳಿಗೆ ಉತ್ತೇಜನ, ತಂತ್ರಜ್ಞಾನವನ್ನು ಪ್ರಾಯೋಗಿಕ ಬಳಕೆಗೆ ತರುವ ಸಾಮರ್ಥ್ಯ ವೃದ್ಧಿ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ತಲುಪಿಸುವ ಮಾರ್ಗಗಳನ್ನು ರೂಪಿಸುವ ಕರ್ನಾಟಕದ ಪ್ರಯತ್ನವನ್ನು ಪ್ರತಿಬಿಂಬಿಸುತ್ತವೆ.
ಕೃತಕ ಬುದ್ಧಿಮತ್ತೆ ಕೌಶಲ ತರಬೇತಿ ಯೋಜನೆ
ಕೃತಕ ಬುದ್ಧಿಮತ್ತೆ (ಎಐ) ಬಳಕೆಯನ್ನು ತ್ವರಿತಗೊಳಿಸುವುದು ಮತ್ತು ಭವಿಷ್ಯದ ತಂತ್ರಜ್ಞಾನ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಕೌಶಲ ಹೊಂದಿದ ಮಾನವ ಸಂಪನ್ಮೂಲವನ್ನು ರೂಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಉದ್ಯಮಗಳ ಸಹಯೋಗದೊಂದಿಗೆ ಮಹತ್ವದ ಉಪಕ್ರಮ ಕೈಗೊಂಡಿದೆ. ಇದರಡಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಸೇರಿದಂತೆ ಒಟ್ಟು 63,200 ಮಂದಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಎಐ ತಂತ್ರಜ್ಞಾನಗಳಲ್ಲಿ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ಗೂಗಲ್, ಸೇಲ್ಸ್‌ಫೋರ್ಸ್, ಪೆಗಾ ಸಿಸ್ಟಮ್ಸ್, ಸರ್ವಂ ಎಐ ಮತ್ತು ಜ್ಞಾನಿಡಾಟ್ಎಐ‌  (Gnani.ai) ಸೇರಿದಂತೆ ಐದು ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಈ ಯೋಜನೆಯಡಿ ವಿಶೇಷ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಪ್ರಸ್ತಾವನೆ ಸಲ್ಲಿಸಿವೆ. ಜಾಗತಿಕ ತಂತ್ರಜ್ಞಾನ ಪರಿಣತಿ ಮತ್ತು ದೇಶೀಯ ಎಐ ಸಾಮರ್ಥ್ಯಗಳನ್ನು ಒಗ್ಗೂಡಿಸುವ ಮೂಲಕ ಕರ್ನಾಟಕದ ಪ್ರತಿಭಾ ಸಂಪನ್ಮೂಲವನ್ನು ಬಲಪಡಿಸುವುದು ಈ ಸಹಯೋಗದ ಉದ್ದೇಶವಾಗಿದೆ.
ಈ ತರಬೇತಿ ಕಾರ್ಯಕ್ರಮಗಳ ಮೂಲಕ ಕಲಿಯುವವರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನರೇಟಿವ್ ಎಐ, ಏಜೆಂಟಿಕ್ ಎಐ, ಎಐ ಏಜೆಂಟ್ ಅಭಿವೃದ್ಧಿ, ವಾಯ್ಸ್ ಎಐ, ಉದ್ಯಮ ನಿರ್ವಹಣಾ ವೇದಿಕೆಗಳು, ಕ್ಲೌಡ್ ಕಂಪ್ಯೂಟಿಂಗ್, ದತ್ತಾಂಶ ವಿಶ್ಲೇಷಣೆ ಮತ್ತು ಜವಾಬ್ದಾರಿಯುತ ಎಐ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಚಯ ಮಾಡಿಕೊಡಲಾಗುತ್ತದೆ.
ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಈ ಕಾರ್ಯಕ್ರಮಗಳಲ್ಲಿ ವ್ಯವಸ್ಥಿತ ತರಬೇತಿ, ಪ್ರಾಯೋಗಿಕ ಚಟುವಟಿಕೆಗಳು, ಉದ್ಯಮ ಕ್ಷೇತ್ರದ ಉಪಕರಣಗಳ ಬಳಕೆ, ಸಮಗ್ರ ಯೋಜನೆಗಳು ಮತ್ತು ಪ್ರಮಾಣಪತ್ರ ಪಡೆಯುವ ಅವಕಾಶಗಳನ್ನು ಒದಗಿಸಲಾಗುತ್ತದೆ.
ಜಾಗತಿಕ ಉದ್ಯಮ ದಿಗ್ಗಜರಿಂದ ತಂತ್ರಜ್ಞಾನ ಕ್ಷೇತ್ರದ ಅವಕಾಶಗಳ ಕುರಿತು ಮಾಹಿತಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಕ್ರೊಸಾಫ್ಟ್‌ನ  ಪುನೀತ್ ಚಂಡೋಕ್ ಮತ್ತು ಫ್ರಾನ್ಸ್‌ನ ವ್ಯಾಲೆರಿ ಪೆಕ್ರೆಸ್ ಸೇರಿದಂತೆ ಜಾಗತಿಕ ಉದ್ಯಮ ಕ್ಷೇತ್ರದ ಪ್ರಮುಖರು ಮಾತನಾಡಿದರು.

ಉದ್ಘಾಟನಾ ಸಮಾವೇಶದ ಮುಖ್ಯ ಅಧಿವೇಶನದಲ್ಲಿ ಮೈಕ್ರಾನ್‌ನ  ಆನಂದ್ ರಾಮಮೂರ್ತಿ, ಎನ್‌ಎಕ್ಸ್‌ಪಿ ಸಂಸ್ಥೆಯ  ಮೌಲಿನ್ ಪಟೇಲ್ ಮತ್ತು ಕಿಯೊನಿಕ್ಸ್‌ ಅಧ್ಯಕ್ಷ  ಶರತ್ ಕುಮಾರ್ ಬಚ್ಚೇಗೌಡ ಅವರು ಆಶಯ ಭಾಷಣ ಮಾಡಿದರು. ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ ಹಾಗೂ ಅವಕಾಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
‘ಎಐ ಮತ್ತು ಅದರಾಚೆಗೆ: ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತ’ ಕುರಿತ ಸಂವಾದ
‘ಎಐ ಮತ್ತು ಅದರಾಚೆಗೆ: ಉದಯೋನ್ಮುಖ ಭಾರತ’   ಶೀರ್ಷಿಕೆಯಡಿ ನಡೆದ ಉನ್ನತ ಮಟ್ಟದ ಸಂವಾದದೊಂದಿಗೆ ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಚಿವ  ಪ್ರಿಯಾಂಕ್ ಖರ್ಗೆ, ಡಾ. ಕಿರಣ್ ಮಜುಂದಾರ್-ಷಾ,  ಕ್ರಿಸ್ ಗೋಪಾಲಕೃಷ್ಣನ್ ಮತ್ತು  ಪ್ರಶಾಂತ್ ಪ್ರಕಾಶ್ ಅವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಲಿಂಗರಾಜು ಸಾವ್ಕರ್ ಅವರು ಸಂವಾದವನ್ನು ನಿರ್ವಹಿಸಿದರು.
ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಈ ಶೃಂಗಸಭೆಗೆ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಸಹ-ಆತಿಥ್ಯ ವಹಿಸಿದೆ. ಜಾಗತಿಕ ತಂತ್ರಜ್ಞಾನ ನಾಯಕರು, ಉದ್ಯಮ ಪ್ರತಿನಿಧಿಗಳು, ಹೂಡಿಕೆದಾರರು, ನವೋದ್ಯಮಿಗಳು, ಸಂಶೋಧಕರು ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು ಹಾಗೂ ಸಹಯೋಗದ ಅವಕಾಶಗಳ ಕುರಿತು ಚರ್ಚಿಸಲು ಈ ಸಮಾವೇಶ ವೇದಿಕೆ ಕಲ್ಪಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ