‘ಮೈಸೂರಿನ ಹೊರವಲಯದಲ್ಲಿ ಸರ್ಕಾರದಿಂದ ನಿರ್ಮಾಣ‌ ಮಾಡಲು ಉದ್ದೇಶಿಸಿರುವ ಚಿತ್ರನಗರಿ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು, ಶೀಘ್ರವೇ ಈ ಕುರಿತ ಅಧಿಕೃತ ಆದೇಶ ಹೊರಬೀಳಲಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್ ಹೇಳಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ‘ಮಹಿಳಾ ಸಿನಿ ಸಂವಾದ’ ಒಂದು ದಿನದ ಚಲನಚಿತ್ರ ನಿರ್ಮಾಣ ಕುರತ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಕನ್ನಡ ಚಿತ್ರರಂಗಕ್ಕೆ‌ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಉದ್ಯಮದ ಬಹುಬೇಡಿಕೆಯಂತೆ ಈಗ ಚಿತ್ರನಗರಿ ನಿರ್ಮಾಣಕ್ಕೆ‌ಮೈಸೂರು ಹೊರವಲಯದ ನಂಜನಗೂಡು ರಸ್ತೆಯಲ್ಲಿ 160 ಎಕರೆ ಜಾಗವನ್ನು‌ಮೀಸಲಿರಿಸಿರುವುದು ಮಾತ್ರವಲ್ಲ, ಚಿತ್ರನಗರಿ ನಿರ್ಮಾಣಕ್ಕೆ ಸಂಪುಟದಲ್ಲಿ‌ಅನುಮೋದನೆಯೂ‌ ಸಿಕ್ಕಿದೆ. ಈ ಕುರಿತ ಆದೇಶ ಶೀಘ್ರ ಹೊರ ಬೀಳಲಿದೆ. ಚಿತ್ರೋದ್ಯಮಕ್ಕೆ ಇದು ಸಂತೋಷದ ಸಂಗತಿಯಾಗಿದೆ. ಚಿತ್ರನಗರಿ ನಿರ್ಮಾಣ ಅತ್ಯಂತ ವ್ಯವಸ್ಥಿತ ಯೋಜನೆಯಾಗಿದ್ದು, ಇದು ಮೂರು ವರ್ಷಗಳ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿ ಚಿತ್ರೀಕರಣಕ್ಕೆ ಬೇಕಾದ ಲೋಕೆಷನ್ಸ್ ಜತೆಗೆ ಫೈ ಸ್ಟಾರ್ ಹೋಟೆಲ್, ಸ್ಟುಡಿಯೋ ನಿರ್ಮಾಣಗೊಳ್ಳಲಿವೆ. ಇದರೊಂದಿಗೆ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಕೂಡ ಆರಂಭವಾಗಲಿದೆ. ಆದರೆ ಚಿತ್ರನಗರಿ ಮೂರು ವರ್ಷಗಳ ಕಾಲಾವಧಿಯ ಯೋಜನೆ ಆಗಿರುವುದರಿಂದ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಅನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲೇ ಆರಂಭಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದರು.

1000466160

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಮಾತನಾಡಿ, ‘ಹೆಣ್ಣಿಗೆ ಅವಕಾಶ ಕೊಡಬೇಕು. ಆಕೆಗೆ ಅವಕಾಶ ನೀಡಿದರೆ ಏನು ಬೇಕಾದರೂ ಸಾಧನೆ ಮಾಡಬಲ್ಲಳು. ಹೆಣ್ಣಿಗೆ ಅವಕಾಶ ಸಿಕ್ಕಿರೆ ಸಾಲದು, ನಾಯಕತ್ವ ನೀಡಬೇಕು. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತೆಯರಿದ್ದಾರೆ. ಅವರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಮಹಿಳೆಯರಿಗಾಗಿಯೇ ಒಂದು ತರಬೇತಿ ಸಂಸ್ಥೆ ಅವಶ್ಯವಿದೆ’ ಎಂದರು. ಶಿಬಿರಾರ್ಥಿಗಳಿಗೆ ಅವರು ಕಿವಿಮಾತು ಹೇಳುತ್ತಾ, ‘ನಿಮ್ಮಲ್ಲಿ ನಿರ್ಮಾಪಕಿ, ನಿರ್ದೇಶಕಿ, ಕಲಾವಿದೆ, ತಂತ್ರಜ್ಞೆಯಾಗಬೇಕೆಂಬ ಆಶಯ ಇದ್ದರೆ ಆ ಹಾದಿಯಲ್ಲೇ ಸಾಗಿ. ನಾವೆಲ್ಲರೂ ನಿಮ್ಮೊಂದಿಗೆ ಇರುತ್ತೇವೆ’ ಎಂದರು.

ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಅವರು ಮಾತನಾಡಿ, ‘ನಮ್ಮೆಲ್ಲರಲ್ಲೂ ಒಬ್ಬ ಕತೆಗಾರರಿದ್ದಾರೆ. ಮಹಿಳೆ ತೆರೆಯ ಮುಂದೆ ಅಷ್ಟೇ ಅಲ್ಲ, ತೆರೆಯ ಹಿಂದೆಯೂ ಸಾಕಷ್ಟು ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶವಿದೆ. ನಿಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ, ಅದರಲ್ಲಿ ಮುಂದೆ ಸಾಗಿ’ ಎಂದು ಶಿಬಿರಾರ್ಥಿಗಳಿಗೆ ಹೇಳಿದರು. ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜುಮಾರ್‌, ‘ಪ್ರತಿ ಸಿನಿಮಾದ ತೆರೆಯ ಹಿಂದಿನ ಕೆಲಸಗಳಲ್ಲಿ ಮಹಿಳೆಗಾಗಿ ಒಂದು ಸ್ಥಾನ ನೀಡಬೇಕು’ ಎಂದರು. ನಟಿ, ಚಿತ್ರನಿರ್ದೇಶಕಿ, ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್‌ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅವರಿಗೆ ಶುಭ ಹಾರೈಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮಜುಮ್ದಾರ್‌ ಸ್ವಾಗತಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಅಕಾಡೆಮಿ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ