Sj*
ನಮ್ ಋಷಿ ಅವರ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಗೀತ ಸಂಯೋಜನೆಯೊಂದಿಗೆ ಅವರೇ ನಿರ್ಮಿಸಿ ನಿರ್ದೇಶಿಸಿರುವ ‘ರಾಮ್ ರಹೀಮ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಹೆಸರಾಂತ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಕೆ. ಮಂಜು ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಲಕ್ಷ್ಮೀನಾರಾಯಣ ಗೌಡ ಅವರು ಸಹ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ. ಮಂಜು ಅವರು, ತಮ್ಮ ಆತ್ಮೀಯ ಸ್ನೇಹಿತ ನಮ್ ಋಷಿ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಚಿತ್ರದ ಕೆಲಸ, ಕಲಾವಿದರ ಅಭಿನಯ ಹಾಗೂ ಲೊಕೇಷನ್ಗಳು ಆಕರ್ಷಕವಾಗಿವೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಋಷಿಗೆ ಭಗವಂತ ಒಳ್ಳೆಯ ಯಶಸ್ಸು ನೀಡಲಿ. ಮುಂದಿನ ಚಿತ್ರ ಮಾಡುವ ಶಕ್ತಿಯೂ ದೊರೆಯಲಿ. ಅವರ ಬೆನ್ನೆಲುಬಾಗಿ ನಾವೆಲ್ಲರೂ ಇರುತ್ತೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಚಿತ್ರದ ಕುರಿತು ಮಾತನಾಡಿದ ನಮ್ ಋಷಿ, ಚಿತ್ರಕ್ಕೆ ಬೆಂಬಲವಾಗಿ ನಿಂತಿರುವ ಹಿರಿಯರು, ಸಾಹಿತಿಗಳು, ಪತ್ರಿಕಾ ಮಾಧ್ಯಮದವರು, ನಿರ್ಮಾಪಕರು, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.

‘ರಾಮ್ ಎಂದರೆ ಹಿಂದೂ, ರಹೀಮ್ ಎಂದರೆ ಮುಸ್ಲಿಂ ಎಂಬ ಭೇದವಿಲ್ಲ. ರಾಮ್ ರಹೀಮ್ ಎಂದರೆ ಮಾನವೀಯತೆಯ ಸಂದೇಶ. ಸ್ನೇಹಕ್ಕೆ ಜಾತಿ, ಧರ್ಮದ ಬೇಧವಿಲ್ಲ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಚಿತ್ರಕ್ಕಾಗಿ ಕಳೆದ ಮೂರು ವರ್ಷಗಳಿಂದ ಕಾಯುತ್ತಿದ್ದೇವೆ. ಸಿನಿಮಾ ನಿರ್ಮಾಣದ ಹಾದಿಯಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಅಡೆತಡೆಗಳನ್ನು ಎದುರಿಸಿದ್ದೇವೆ.
‘ಪ್ರೇಮದ ಊರಲಿ’ ಚಿತ್ರ ಯಶಸ್ವಿಯಾಗಿದ್ದರಿಂದ ನಮ್ಮ ‘ರಾಮ್ ರಹೀಮ್’ ಚಿತ್ರಕ್ಕೆ ಮಾತ್ರವಲ್ಲದೆ, ನನ್ನನ್ನೂ ಸೇರಿಸಿಕೊಂಡು ನೂರಾರು ತಂತ್ರಜ್ಞರಿಗೆ ಕೆಲಸ ಸಿಗುವಂತಾಗಿದೆ. ಆ ಚಿತ್ರದ ಯಶಸ್ಸನ್ನು ನೋಡಿ ನಮ್ಮ ಚಿತ್ರಕ್ಕೂ ಹಣ ಹೂಡಲು ಹಲವರು ಮುಂದೆ ಬಂದಿದ್ದಾರೆ. ಒಂದು ಚಿತ್ರದ ಯಶಸ್ಸು ಮತ್ತೊಂದು ಚಿತ್ರಕ್ಕೆ ಹೇಗೆ ಭರವಸೆ ತುಂಬುತ್ತದೆ ಎಂಬುದಕ್ಕೆ ಇದು ಉದಾಹರಣೆ. ಈ ಮೂಲಕ ನಮಗೂ ಅನುಕೂಲವಾಗಿದೆ. ಇದಕ್ಕಾಗಿ ‘ಪ್ರೇಮದ ಊರಲಿ’ ಚಿತ್ರದ ಇಡೀ ತಂಡಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು’ ಎಂದರು.
ಮುಂದುವರಿದು, ‘ನಮ್ಮ ಉದ್ದೇಶ ಕೇವಲ ಹಣ ಸಂಪಾದನೆಯಲ್ಲ. ನಮ್ಮವರನ್ನು ಬೆಂಬಲಿಸುವುದು, ಪರಸ್ಪರ ಸಹಕಾರ ನೀಡುವುದು ಮುಖ್ಯ. ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ. ಪ್ರಸ್ತುತ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎಂದು ತಿಳಿಸಿದರು.
ಚಿತ್ರದಲ್ಲಿ ರಾಮ್ ಪಾತ್ರದಲ್ಲಿ ನಟಿಸಿರುವ ಕ್ಯಾದಿಗಾರ ಅರುಣ್ ಹಾಗೂ ರಹೀಮ್ ಪಾತ್ರದಲ್ಲಿ ಅಭಿನಯಿಸಿರುವ ಕಿರಣ್ ಅದ್ವಿತ್ ಮಾತನಾಡಿ, ಈ ವಿಶೇಷ ದಿನಕ್ಕಾಗಿ ಮೊದಲಿಗೆ ತಮ್ಮ ತಂದೆ-ತಾಯಿಯ ಆಶೀರ್ವಾದವನ್ನು ಸ್ಮರಿಸಿದರು. ಚಿತ್ರಕ್ಕಾಗಿ ಇಡೀ ತಂಡ ಸಾಕಷ್ಟು ಶ್ರಮಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದ ಒಂದರ ಮೇಲೊಂದು ಸಮಸ್ಯೆಗಳನ್ನು ಎದುರಿಸುತ್ತಾ, ಹಲವು ಅಡೆತಡೆಗಳನ್ನು ದಾಟಿ ಇಂದು ಟ್ರೇಲರ್ ಬಿಡುಗಡೆ ಹಂತಕ್ಕೆ ತಲುಪಿರುವುದು ಸಂತೋಷ ತಂದಿದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಮೆಚ್ಚಿ ಗೆಲ್ಲಿಸಬೇಕು ಎಂಬುದೇ ನಮ್ಮ ಆಶಯ ಎಂದು ಹೇಳಿದರು.





