ಕನ್ನಡ ಚಿತ್ರರಂಗದ ಇತಿಹಾಸವನ್ನು ನೆನಪಿಸಿಕೊಂಡಾಗ ಕೆಲವು ಕಲಾವಿದರ ಹೆಸರುಗಳು ಕೇವಲ ನಟನೆಯ ಕಾರಣಕ್ಕೆ ಮಾತ್ರವಲ್ಲ, ಅವರು ಹಾಕಿಕೊಟ್ಟ ಹೊಸ ದಾರಿಗಳಿಂದಲೂ ಚಿರಸ್ಥಾಯಿಯಾಗುತ್ತವೆ. ಅಂತಹ ಅಪರೂಪದ ಸಾಧಕಿಯರಲ್ಲಿ ಒಬ್ಬರಾಗಿದ್ದ ಕೇವಲ ಕನ್ನಡ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಮಿಂಚಿದಷ್ಟೇ ಅಲ್ಲದೇ, ದಕ್ಷಿಣ ಭಾರತದ ಅನೇಕ ಮೇರುನಟರಿಗೆ ತಾಯಿಯಾಗಿ ಅಭಿನಯಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದದ್ದಲ್ಲದೇ, ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಧೈರ್ಯದಿಂದ ಹೆಜ್ಜೆಯಿಟ್ಟು, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೂ ಚಿತ್ರ ನಿರ್ಮಾಣದ ಸಾಮರ್ಥ್ಯವಿದೆ ಎಂಬುದನ್ನು ಕೊಟ್ಟ ದಿಟ್ಟ ಮಹಿಳಾ ಸಾಧನೆ ಶ್ರೀಮತಿ ಎಂ.ವಿ. ರಾಜಮ್ಮ ಆವರ ವ್ಯಕ್ತಿ, ವಕ್ತಿತ್ವ ಮತ್ತು ಸಿನಿಮಾರಂಗದ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿದ್ದ ರಾಜಮ್ಮ ಅವರು ಸುಮಾರು 60 ಕನ್ನಡ, 80 ತಮಿಳು, 20 ತೆಲುಗು ಹಾಗೂ ಒಂದು ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಲಾಗಿದೆ. ಒಟ್ಟು 150ಕ್ಕೂ ಹೆಚ್ಚು ಚಿತ್ರಗಳ ಈ ಪಯಣವು ಅವರ ಪ್ರತಿಭೆ, ಪರಿಶ್ರಮ ಮತ್ತು ವೃತ್ತಿಪರ ಬದ್ಧತೆಗೆ ಸಾಕ್ಷಿಯಾಗಿದೆ.
ಬಾಲ್ಯ, ಕುಟುಂಬ ಮತ್ತು ರಂಗಭೂಮಿಯ ಸೆಳೆತ

ಎಂ.ವಿ. ರಾಜಮ್ಮ ಅವರು 1921ರ ಮಾರ್ಚ್ 10ರಂದು ಇಂದಿನ ಬೆಂಗಳೂರು ನಗರ ಜಿಲ್ಲೆಯ ಅಗಂಡನಹಳ್ಳಿ ಗ್ರಾಮದಲ್ಲಿ ಶ್ರೀ ನಂಜಪ್ಪ ಮತ್ತು ಶ್ರೀಮತಿ ಸುಬ್ಬಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು. ತಂದೆ ನಂಜಪ್ಪ ಅವರು ವ್ಯಾಪಾರಿಯಾಗಿದ್ದರೂ ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಮಗಳು ಕಲೆಯತ್ತ ಒಲವು ತೋರಿಸುತ್ತಿರುವುದನ್ನು ಗಮನಿಸಿದ ತಂದೆ ಮತ್ತು ತಾಯಿ ಅವರು ಆಕೆಯ ಪ್ರತಿಭೆಗೆ ಪ್ರೋತ್ಸಾಹ ನೀಡಿದರು.
ರಾಜಮ್ಮ ಅವರು ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. ಆ ಕಾಲದಲ್ಲಿ ಹೆಣ್ಣುಮಕ್ಕಳು ರಂಗಭೂಮಿಗೆ ಬರುವುದು, ಅದರಲ್ಲೂ ಚಿತ್ರರಂಗದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವುದು ಸುಲಭದ ಸಂಗತಿಯಾಗಿರಲಿಲ್ಲ. ಸಾಮಾಜಿಕ ನಿರ್ಬಂಧಗಳು, ಕುಟುಂಬದ ಹಿಂಜರಿಕೆ ಮತ್ತು ಮಹಿಳೆಯರಿಗೆ ಸೀಮಿತವಾಗಿದ್ದ ಅವಕಾಶಗಳ ನಡುವೆ ಅವರು ಬಾಲ್ಯದಲ್ಲಿಯೇ ಕಲೆಯ ಹಾದಿ ಹಿಡಿದರು. ಹದಿಹರೆಯದಲ್ಲಿಯೇ ಅವರು ಚಂದ್ರಕಲಾ ನಾಟಕ ಮಂಡಳಿಯನ್ನು ಸೇರಿಕೊಂಡರು. ಅಲ್ಲಿ ಬಿ.ಆರ್. ಪಂಥುಲು ಅವರೊಂದಿಗೆ ರಂಗಪ್ರದರ್ಶನಗಳಲ್ಲಿ ಭಾಗವಹಿಸಿದರು. ಮುಂದೆ ಈ ಇಬ್ಬರೂ ಕನ್ನಡ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದರು.
ಆ ದಿನಗಳಲ್ಲಿ ನಾಟಕಗಳಲ್ಲಿ ಮಹಿಳಾ ಪಾತ್ರಗಳನ್ನು ಪುರುಷರೇ ಸ್ತ್ರೀವೇಷ ಧರಿಸಿ ನಿರ್ವಹಿಸುವ ಪದ್ಧತಿ ಇನ್ನೂ ಕೆಲವು ಕಡೆ ಇತ್ತು. ಅಂತಹ ಕಾಲಘಟ್ಟದಲ್ಲಿ ರಾಜಮ್ಮ ಅವರಂತಹ ಮಹಿಳೆಯರು ನೇರವಾಗಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸಿದ್ದು ರಂಗಭೂಮಿಯಲ್ಲಿನ ಮಹತ್ವದ ಬದಲಾವಣೆಯ ಸಂಕೇತವಾಗಿತ್ತು. ಸಂಸಾರ ನೌಕೆ, ಗೌತಮ ಬುದ್ಧ, ಸುಭದ್ರಾ ಮುಂತಾದ ನಾಟಕಗಳಲ್ಲಿ ಅವರು ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು.
ಮೂಕಿ ಚಿತ್ರದಿಂದ ನಾಯಕಿಯಾಗಿ ಬೆಳ್ಳಿತೆರೆಗೆ
ರಾಜಮ್ಮ ಅವರ ಚಿತ್ರರಂಗದ ಪಯಣದ ಆರಂಭದ ಕುರಿತು ಒಂದು ವಿಶೇಷ ಸಂಗತಿಯಿದೆ. 1932ರಲ್ಲಿ ಗುಬ್ಬಿ ವೀರಣ್ಣ ನಿರ್ಮಿಸಿದ ಮೂಕಿ ಚಿತ್ರ ಹರಿ ಮಾಯಾದಲ್ಲಿ ಅವರು ಕಾಣಿಸಿಕೊಂಡಿದ್ದರು ಎಂದು ದಾಖಲೆಗಳು ಉಲ್ಲೇಖಿಸುತ್ತವೆ. ಆದರೆ ನಾಯಕಿಯಾಗಿ ಅವರ ಗುರುತಿನ ಚಿತ್ರವಾಗಿ ಪ್ರಸಿದ್ಧವಾದದ್ದು 1936ರಲ್ಲಿ ಬಿಡುಗಡೆಯಾದ ಕನ್ನಡದ ಸಂಸಾರ ನೌಕೆ. ಈ ಚಿತ್ರದಲ್ಲಿ ಅವರು ಸರಳಾ ಪಾತ್ರವನ್ನು ನಿರ್ವಹಿಸಿದರು.





