Sj*

ಕಳೆದ ಒಂದು ವರ್ಷದಿಂದ ಕನ್ನಡಿಗರ ಮನೆಮನಗಳಲ್ಲಿ ಹಳ್ಳಿಯ ಸೊಗಡು ಮತ್ತು ಮುಗ್ಧ ಪ್ರೇಮಕಥೆಯ ಮೂಲಕ ವಿಶೇಷ ಛಾಪು ಮೂಡಿಸಿರುವ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ ‘ಜೈ ಲಲಿತಾ’, ಇದೀಗ ತನ್ನ ಮೊದಲ ಅಧ್ಯಾಯಕ್ಕೆ ಭಾವನಾತ್ಮಕ ವಿದಾಯ ಹೇಳಿ, ರೋಚಕ ತಿರುವಿನೊಂದಿಗೆ ‘ಸೀಸನ್-2’ಕ್ಕೆ ಕಾಲಿಡುತ್ತಿದೆ. ಬರೋಬ್ಬರಿ 365 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಧಾರಾವಾಹಿ, 366ನೇ ಸಂಚಿಕೆಯಿಂದ ಸಂಪೂರ್ಣ ಹೊಸ ರೂಪ, ಹೊಸ ಕಥಾಹಂದರ ಹಾಗೂ ಹೊಸ ಪಾತ್ರಗಳೊಂದಿಗೆ ವೀಕ್ಷಕರ ಮುಂದೆ ಬರಲಿದ್ದು, ಇದೇ ನವೆಂಬರ್ 30, ಸೋಮವಾರದಿಂದ ಈ ಹೊಸ ಕಥೆ ಆರಂಭವಾಗಲಿದೆ.

​ಕಥೆಯ ಹೊಸ ದಿಕ್ಕಿನ ಕುರಿತು ಹೇಳುವುದಾದರೆ, ಇದುವರೆಗೂ ‘ಭೈರವಾಪುರ’ ಎಂಬ ಹಳ್ಳಿಯ ಸುತ್ತಮುತ್ತ ನಡೆಯುತ್ತಿದ್ದ ಜೈ ಮತ್ತು ಲಲಿತಾಳ ಬದುಕು ಈಗ ಅನಿವಾರ್ಯವಾಗಿ ಮಹಾನಗರ ಬೆಂಗಳೂರಿನತ್ತ ಮುಖ ಮಾಡಿದೆ. ಹಳ್ಳಿಯ ಮುಗ್ಧತೆಗೂ, ಸಿಲಿಕಾನ್ ಸಿಟಿಯ ವೇಗದ ಬದುಕಿಗೂ ಇರುವ ಸಂಘರ್ಷವೇ ಈ ಹೊಸ ಸೀಸನ್‌ನ ಜೀವಾಳವಾಗಿದೆ. ಬೆಂಗಳೂರಿನ ಹೊಸ ಪರಿಸರದಲ್ಲಿ ಎದುರಾಗುವ ಅನಿರೀಕ್ಷಿತ ಸವಾಲುಗಳು, ಬಯಲಾಗಬೇಕಿರುವ ಹೊಸ ರಹಸ್ಯಗಳು ಮತ್ತು ಬದಲಾಗುವ ಸಂಬಂಧಗಳ ನಡುವೆ ಜೈ-ಲಲಿತಾ ಹೇಗೆ ಗಟ್ಟಿಯಾಗಿ ನಿಲ್ಲುತ್ತಾರೆ ಎನ್ನುವುದೇ ಮುಂದಿನ ಕುತೂಹಲ. ವಿಶೇಷವೆಂದರೆ, ಯಾವುದೇ ರೀಮೇಕ್ ಹಂಗಿಲ್ಲದ ಅಪ್ಪಟ ಸ್ವಮೇಕ್ ಕಥೆಯ ಮೂಲಕ ಈ ಹೊಸ ಅಧ್ಯಾಯವನ್ನು ಕಟ್ಟಿಕೊಡಲಾಗುತ್ತಿದೆ.

1000472373

​ಈ ಹೊಸ ಅಧ್ಯಾಯಕ್ಕೆ ತಾರಾಗಣದ ಮೆರುಗು ಕೂಡ ಹೆಚ್ಚಾಗಿದ್ದು, ಎಂದಿನಂತೆ ಜೈ ಮತ್ತು ಲಲಿತಾ ಪಾತ್ರಗಳಲ್ಲಿ ಶಿವಾಂಕ್ ಹಾಗೂ ಮನಸ್ವಿ ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಇವರೊಂದಿಗೆ ಬೆಂಗಳೂರಿನ ಹೊಸ ಟ್ರ್ಯಾಕ್‌ಗೆ ಮತ್ತಷ್ಟು ತೂಕ ತರಲು ಕನ್ನಡ ಕಿರುತೆರೆ ಹಾಗೂ ರಂಗಭೂಮಿಯ ಖ್ಯಾತ ಕಲಾವಿದರ ದಂಡೇ ಸೇರಿಕೊಂಡಿದೆ. ಪ್ರಮುಖವಾಗಿ ಅಂಬರೀಶ್ ಸಾರಂಗಿ, ಅಮೃತಾ ಉಪ್ಪಾರ್, ಮಾಲತಿ ಸರದೇಶಪಾಂಡೆ, ‘ಮಂಗಳೂರು ಮೀನನಾಥ’ ಖ್ಯಾತಿಯ ರಾಘವೇಂದ್ರ ರೈ, ರಜನಿ ಹಾಗೂ ಶಿವಮೊಗ್ಗ ಹರೀಶ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಕಥೆಗೆ ಹೊಸ ತಿರುವು ನೀಡಲಿದ್ದಾರೆ.

​ತಾಂತ್ರಿಕ ಬಳಗದ ವಿಚಾರಕ್ಕೆ ಬಂದರೆ, ಶ್ರೀ ಭ್ರಾಮರೀ ಕ್ರಿಯೇಷನ್ಸ್ ಸಂಸ್ಥೆಯಡಿ ಈ ಧಾರಾವಾಹಿ ಅತ್ಯಂತ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಹೊಸ ಸೀಸನ್‌ನ ನಿರೂಪಣೆಗೆ ಹರೀಶ್ ಪುಟ್ಟಣ್ಣ ಅವರ ಸಮರ್ಥ ನಿರ್ದೇಶನವಿದ್ದು, ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನು ಶ್ರೀನಿಧಿ ಡಿ.ಎಸ್. ಹೊತ್ತಿದ್ದಾರೆ. ಕಥೆಯ ಭಾವನಾತ್ಮಕ ಸನ್ನಿವೇಶಗಳಿಗೆ ‘ಪ್ರೇಮದ ಊರಲಿ’ ಖ್ಯಾತಿಯ ಸುನಾದ್ ಗೌತಮ್ ಅವರ ಸುಮಧುರ ಸಂಗೀತ ಮತ್ತಷ್ಟು ಜೀವ ತುಂಬಲಿದೆ.

​ಹಳ್ಳಿಯ ತಂಪಾದ ಗಾಳಿಯಿಂದ ಬೆಂಗಳೂರಿನ ಬಿಸಿ ಬಿಸಿ ಸವಾಲುಗಳ ನಡುವೆ ಹೆಜ್ಜೆ ಇಡುತ್ತಿರುವ ಜೈ ಮತ್ತು ಲಲಿತಾಳ ಈ ಹೊಸ ಪಯಣವನ್ನು ವೀಕ್ಷಕರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ವೀಕ್ಷಿಸಬಹುದಾಗಿದೆ. ಅಲ್ಲದೆ, ಈ ರೋಚಕ ಸಂಚಿಕೆಗಳನ್ನು ಜಿಯೋ ಹಾಟ್‌ಸ್ಟಾರ್ ವೇದಿಕೆಯಲ್ಲಿಯೂ ನೋಡಿ ಆನಂದಿಸಬಹುದಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ