Sj*

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿರುವ, ಧೀರೇನ್ ಹಾಗೂ ಅಮೃತಾ ಪ್ರೇಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ ಸಿನಿಮಾ ಡಿಸೆಂಬರ್ 11ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿತ್ರತಂಡ ಸಿನಿಮಾದ ಮೂರನೇ ಗೀತೆ ‘ನಡೆಸು ಬೆಳಕೆ..’ ವಿಡಿಯೋ ಸಾಂಗ್ ಅನ್ನು ಲೋಕಾರ್ಪಣೆಗೊಳಿಸಿದೆ. ಅತ್ಯಂತ ಭಾವನಾತ್ಮಕವಾಗಿ ಮೂಡಿಬಂದಿರುವ ಈ ಹಾಡಿಗೆ ಖ್ಯಾತ ಗಾಯಕ ಸಿದ್ ಶ್ರೀರಾಮ್ ಧ್ವನಿಯಾಗಿದ್ದು, ಕೇಳುಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಮಯೂರ್ ಅಂಬೆಕಲ್ಲು ಅವರ ಸುಮಧುರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ನಡೆಸು ಬೆಳಕೆ..’ ಗೀತೆಗೆ ವಿಶ್ವಜಿತ್ ರಾವ್ ಅರ್ಥಪೂರ್ಣ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಸಾಹಿತ್ಯ ರಚನೆಯ ಜೊತೆಗೆ ವಿಶ್ವಜಿತ್ ರಾವ್ ಅವರೇ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಉತ್ತರ ಭಾರತದ ರಮಣೀಯ ಹಾಗೂ ವಿವಿಧ ತಾಣಗಳಲ್ಲಿ ಈ ಹಾಡನ್ನು ಅತ್ಯಂತ ಮನಮೋಹಕವಾಗಿ ಚಿತ್ರೀಕರಿಸಲಾಗಿದ್ದು, ದೃಶ್ಯವೈಭವ ಮತ್ತು ಭಾವನಾತ್ಮಕ ಸನ್ನಿವೇಶಗಳು ಹಾಡಿನ ತೂಕವನ್ನು ಹೆಚ್ಚಿಸಿವೆ.

1000472911

ಸಂದೀಪ್ ಸುಂಕದ್ ಕಥೆ ಬರೆದು ನಿರ್ದೇಶನ ಮಾಡಿರುವ ‘ಪಬ್ಬಾರ್’ ಚಿತ್ರಕ್ಕೆ ಗೌತಮ್ ಪಲ್ಲಕ್ಕಿ ಹಾಗೂ ನಿರ್ದೇಶಕ ಸಂದೀಪ್ ಸುಂಕದ್ ಸಂಕಲನ ಮಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಧೀರೇನ್ ಮತ್ತು ಅಮೃತಾ ಪ್ರೇಮ್ ಜೊತೆಗೆ ಆರ್ಯನ್ ಗೌಡ, ಅಯ್ಯಪ್ಪ ಪಿ. ಶರ್ಮಾ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಭರತ್ ಜಿ.ಬಿ. ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ಬಳಗವೇ ಇದೆ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರದ ಟ್ರೈಲರ್ ನವೆಂಬರ್ 30ರಂದು ರಿಲೀಸ್ ಆಗಲಿದೆ. ಚಿತ್ರವು ಡಿಸೆಂಬರ್ 11ರಂದು ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ