ಅತಿ ಹಿಂದಿನ ಕಾಲದ ಮಾತುಗಳಲ್ಲಿ 40ರ ನಂತರ ಜೀವನವೇ ಮುಗಿದುಹೋಯಿತು, ಇನ್ನೇನಿದ್ದರೂ ವೈರಾಗ್ಯವಷ್ಟೆ ಎನ್ನುತ್ತಿದ್ದರು. ಆದರೆ ಈಗಿನ ಹೊಸ ಯುಗದ ಜೀವನದಲ್ಲಿ ನವನವೀನ ವೈದ್ಯಕೀಯ ಕ್ರಾಂತಿಗಳಿಂದಾಗಿ 40+ ಈಗ 20 + ಆಗಿ ಪರಿಣಮಿಸಿದೆ. 40ರ ಘಟ್ಟ ಸಮೀಪಿಸುತ್ತಿದ್ದಂತೆ ಹೆಂಗಸರಿಗೆ, ಮುಖ್ಯವಾಗಿ ಆರೋಗ್ಯದ ವಿಷಯದಲ್ಲಿ ತೊಂದರೆಗಳೇ ಹೆಚ್ಚು.
ಆದರೆ ಈಗ 40+ನ ಮಹಿಳೆಯರು ವೈದ್ಯಕೀಯ ಕ್ರಾಂತಿಯಿಂದಾಗಿ, ಯಾವುದೇ ಟೆನ್ಶನ್‌ಗಳಿಲ್ಲದೆ ಹಾಯಾಗಿ ದಿನಗಳನ್ನು ಮುಂದೂಡುತ್ತಿದ್ದಾರೆ. ಅದೇ ಸಮಯದಲ್ಲಿ ಕಿರಿ ವಯಸ್ಸಿನ ತರುಣಿಯರು ತಾವು ತಮ್ಮ ಕೆರಿಯರ್ ರೂಪಿಸಿಕೊಳ್ಳುತ್ತಾ, 40+ನ್ನು ಮೈಲಿಗಲ್ಲಾಗಿ ಗುರುತಿಸಿಕೊಂಡು, ತಮ್ಮ ಶಕ್ತಿಸಾಮರ್ಥ್ಯ ನಿರೂಪಿಸುತ್ತಾ, ಜೀವನದ ಮೌಲ್ಯಗಳಿಗೆ ಹೊಸ ಅರ್ಥ ಕಲ್ಪಿಸುತ್ತಾ, ಯಾವುದೇ ಅಳುಕು ಅಂಜಿಕೆ ಇಲ್ಲದೆ, ಸಾಮಾಜಿಕ ಪಿಡುಗುಗಳನ್ನು ದಿಟ್ಟವಾಗಿ ಎದುರಿಸುತ್ತಾ, ತಮ್ಮ ಸಂತೋಷಕ್ಕೆ ತಡೆ ಇಲ್ಲದಂತೆ ಮಾಡಿಕೊಳ್ಳುತ್ತಿದ್ದಾರೆ.
ಇಂದಿನ ಸೆಲೆಬ್ರಿಟಿ ಮಾಮ್ಸ್ ನೋಡಿ, ಮುಖದಲ್ಲಿ ಸುಕ್ಕುಗಳಿಲ್ಲದೆ ನಳನಳಿಸುತ್ತಾ, ತಮ್ಮ ಜೈವಿಕ ಗಡಿಯಾರವನ್ನೂ ಸರಿದೂಗಿಸಿಕೊಳ್ಳುತ್ತಿದ್ದಾರೆ. ಹಾಗಿದ್ದರೆ 40+ ಈಗಿನ 20+ ಆಗುತ್ತಿರುವುದು ನಿಜವೇ? ಈ ಖ್ಯಾತನಾಮರನ್ನೇ ಗಮನಿಸಿ….
ಹ್ಯಾಲಿಬೆರಿ (42 ಹಾಗೂ 47ರಲ್ಲಿ ತಾಯಿ ಆದವರು), ಮೆಡೋನಾ (42ರಲ್ಲಿ), ಜೆನಿಫರ್ ಲೋಪೇಸ್ (39ರಲ್ಲಿ ಅವಳಿಗಳು), ಸ್ಮಾಲ್ ಹೇಕ್ (41), ಉಮಾ ತುರ್ಮನ್ (41). ಮರಿಯಾಜ್ ಕೇರಿ ಹಾಗೂ ಜೀನ್‌ಸೇಮರ್ ತಮ್ಮ 52 ಹಾಗೂ 45ರಲ್ಲಿ ಅವಳಿಗಳನ್ನು ಪಡೆದರು! ಖ್ಯಾತ ಪಾಪ್‌ಸಿಂಗರ್ ನಟಿ ರಾಗೇಶ್ವರಿ ಲೂಂಬಾ ಸಹ ತಮ್ಮ 40ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತರು.
ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ 1997ರ ಮಿಸ್ ವರ್ಲ್ಡ್ ಡಯಾನಾ ಹೇಡನ್. 42ರಲ್ಲಿ ಈ ವರ್ಷದ ಆರಂಭದಲ್ಲಿ ಸುಂದರ ಹೆಣ್ಣುಮಗು ಆರ್ಯಾಳಿಗೆ ಜನ್ಮವಿತ್ತರು. ಡಯಾನಾ 2013ರಲ್ಲಿ ಲಾಸ್‌ವೆಗಾಸ್‌ನ ಕೋಲಿನ್ ಡಿಕ್‌ರನ್ನು ಮದುವೆಯಾಗಿದ್ದರು. ಕೋಲಿನ್ ಮುಂಬೈನಲ್ಲಿ ಒಂದು ಅಂತಾರಾಷ್ಟ್ರೀಯ ಕಂಪನಿಗಾಗಿ ಕೆಲಸ ಮಾಡುತ್ತಿದ್ದರು. ಇದರಲ್ಲಿ ಕುತೂಹಲದ ವಿಷಯ ಅಂದಿರಾ? 8 ವರ್ಷಕ್ಕೆ ಮೊದಲೇ ಹೇಡನ್ ತಮ್ಮ ಎಗ್ ಪ್ರಿಸರ್ವ್ ಮಾಡಿಸಿದ್ದರು, ಅದರಿಂದ ಹುಟ್ಟಿದ್ದೇ ಈ ಮಗು! ಆಕೆಯನ್ನು ಟ್ರೀಟ್ ಮಾಡಿದ ಮುಂಬೈನ ವೈದ್ಯರಾದ ಡಾ. ನಂದಿತಾ ಪಾಲ್‌ಶೇಖರ್ ಹಾಗೂ ಡಾ. ಹೃಷಿಕೇಶ್ ಪೈ ನಡುವೆ ನಡೆದ ಎಗ್ ಫ್ರೀಝಿಂಗ್ ಟೆಕ್ನಾಲಜಿ ಹಾಗೂ ಪ್ರಸ್ತುತ ಮಹಿಳೆಗೆ ಅದೆಷ್ಟು ಮಹತ್ತರವಾದುದು ಎಂಬುದರ ಸಂವಾದದ ಮುಖ್ಯಾಂಶಗಳು :
ಡಯಾನಾ ಜೊತೆಗಿನ ಸಂಭಾಷಣೆ
ನಾನು ಮೊದಲಿನಿಂದಲೂ ವೈದ್ಯಕೀಯ ಲೇಖನಗಳನ್ನು ನಿರಂತರಾಗಿ ಓದಿ, ಗಮನಿಸುವವಳು. ಎಗ್ ಫ್ರೀಝಿಂಗ್ ಕುರಿತಾಗಿ 10 ವರ್ಷದ ಹಿಂದೆ ವಿವರಗಳನ್ನು ಸಂಗ್ರಹಿಸಿದ್ದೆ. ಇದನ್ನು ಅಮೆರಿಕಾ, ಆಸ್ಟ್ರೇಲಿಯಾಗಳಲ್ಲಿ ಮುಖ್ಯವಾಗಿ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುತ್ತಿದ್ದರು. ರೋಗಿ ಆ ಕಾಯಿಲೆಯಿಂದ ಹೊರಬಂದ ನಂತರ ಮಗು ಪಡೆಯಲು ಇದೊಂದು ವರದಾನವಾಗಿತ್ತು.
ನಾನು ಅದರ ಬಗ್ಗೆ ಹೆಚ್ಚು ವಿವರಗಳನ್ನು ಸಂಗ್ರಹಿಸಿದಷ್ಟೂ, ನಾನು ನನ್ನ ಎಗ್ಸ್ ಪ್ರಿಸರ್ವ್ ಮಾಡಿ ಮುಂದೆ ನನ್ನ ಭವಿಷ್ಯದಲ್ಲಿ ಸೂಕ್ತ ಸಂಗಾತಿ ದೊರಕಿದ ನಂತರ, ತಾಯಿಯಾಗಲು ಸೂಕ್ತ ಸಮಯಾವಕಾಶ ದೊರೆತಾಗ ಅದನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ನನಗೆ ವಯಸ್ಸಾಗಿ ಆ ಸಂದರ್ಭದಲ್ಲಿ ನೈಸರ್ಗಿಕವಾಗಿ ಹೆರಿಗೆ ಆಗದಿದ್ದಾಗ, ಈ ವಿಧಾನ ನಿಜಕ್ಕೂ ಒಂದು ಪವಾಡ ಆಗಲಿತ್ತು. ಈ ಟೆಕ್ನಿಕ್ ಈಗಾಗಲೇ ನಮ್ಮ ಭಾರತಕ್ಕೆ ಬಂದಿದ್ದು, ಮುಂಬೈನಲ್ಲಿ ಲಭ್ಯವಿರುವ ವಿವರಗಳು ಗೊತ್ತಿರಲಿಲ್ಲ. ನನ್ನ ಫ್ರೆಂಡ್ ಒಬ್ಬಳ ಮುಖಾಂತರ ಈ ವೈದ್ಯರನ್ನು ಸಂಪರ್ಕಿಸಿ, ಅವರು ಸುದೀರ್ಘ ಚರ್ಚೆಯ ನಂತರ ನನ್ನ ಸಂದೇಹಗಳೆಲ್ಲವನ್ನೂ ನಿವಾರಿಸಿದಾಗ,
ಖಂಡಿತಾ ನಾನು ಈ ವಿಧಾನ ಅಳವಡಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ.
ಹಾಂ…… ಒಂದು ವಿಧದಲ್ಲಿ ಹೌದು. ನನಗೆ ಮದುವೆ, ಗಂಡ, ಮಕ್ಕಳಲ್ಲಿ ಅಪಾರ ಆಸಕ್ತಿ. ನನ್ನ 20ನೇ ವಯಸ್ಸಿನಿಂದಲೇ ನಮ್ಮ ಮನೆಯವರು ಗಂಡು ಹುಡುಕಲಾರಂಭಿಸಿದರು. ಆದರೆ ಯಾವ ವರನೂ ನನಗೆ ಸೂಟ್ ಆಗುತ್ತಿರಲಿಲ್ಲ. ಕೆಲವರು ನನ್ನನ್ನು ರಿಜೆಕ್ಟ್ ಮಾಡಿದರೆ ಹಲವರನ್ನು ನಾನೇ ಬೇಡವೆಂದೆ. ಹೀಗಾಗಿ ನನ್ನ ಕೆರಿಯರ್‌ಗೆ ಮಹತ್ವ ಕೊಟ್ಟು ಮದುವೆ ಮುಂದೂಡಿದೆ.
ಅಸಲಿಗೆ ನೀವು ಯಾವ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕಾಯ್ತು?
ನಮ್ಮ ಮನೆಯಲ್ಲಿ ಹಿರಿಯರಿಂದ ಬೇಗ ಮದುವೆ ಆಗುವಂತೆ ಒತ್ತಾಯವಿತ್ತು. ನಾನೂ ರೊಮ್ಯಾಂಟಿಕ್ ವ್ಯಕ್ತಿ, ಹಾಗಿದ್ದೂ ನನ್ನ ಸಂಗಾತಿ ಷರುತ್ತುಗಳನ್ನು ಒಡ್ಡಿ ನನ್ನನ್ನು ಮದುವೆಯಾಗುವುದು ನನಗೆ ಬೇಕಿರಲಿಲ್ಲ. ಹಾಗಾಗಿಯೇ ನಾನು ಯೌವನದಲ್ಲಿ ಗಟ್ಟಿಮುಟ್ಟಾಗಿರುವಾಗಲೇ ಎಗ್ ಫ್ರೀಝಿಂಗ್ ಮಾಡಿಸೋಣ ಎನಿಸಿತು. ಅದು ನನಗೆ ಆಯ್ಕೆಯ ಸ್ವಾತಂತ್ರ್ಯ ನೀಡಿತು. ಆಗ ನಾನು ನನ್ನ ಫ್ರೆಂಡ್ಸ್ ಗೆ ಈ ಬಗ್ಗೆ ತಿಳಿಸಿದೆ. ಈ ತರಹ ನಿರ್ಧಾರ ಕೈಗೊಳ್ಳಲು ನಾನೇನು ಹುಚ್ಚಿಯೇ ಎಂದರು. ಈ ಕಾಂಪ್ಲಿಕೇಟೆಡ್ ಟೆಕ್ನಿಕ್ ಮುಂದೆ ಹೇಗೋ ಏನೋ ಎಂಬ ಆತಂಕವಿತ್ತು ಅವರಲ್ಲಿ. ಆದರೆ ಮುಂದೆ ನಾನು ನಿರ್ಧರಿಸಿದಾಗ ವಯಸ್ಸಿನ ಅಡೆತಡೆಯಿಲ್ಲದೆ ಮಾತೃತ್ವದ ಅವಕಾಶ ಪಡೆಯಬಹುದೆಂಬ ಸ್ವಾತಂತ್ರ್ಯ ನನಗೆ 100% ಗ್ಯಾರಂಟಿ ಇದ್ದುದರಿಂದ, ಸಂಪೂರ್ಣ ತೃಪ್ತ ಮನಸ್ಸಿನಿಂದ ಇಂದಿಗೆ 8 ವರ್ಷಗಳ ಹಿಂದೆ ನಾನು 34 ವರ್ಷದವಳಿದ್ದಾಗ ನನ್ನ ಎಗ್ಸ್ ಪ್ರಿಸರ್ವ್ ಮಾಡಲು ನಿರ್ಧರಿಸಿದೆ.
ತೊಂದರೆಗಳು ಜಾಸ್ತಿ ಇತ್ತೇ?
ಹೌದು, ನನ್ನ ಗರ್ಭಾವಸ್ಥೆ ಸುಖಕರವಾಗಿತ್ತು. ಯಾವುದೇ ಅಡ್ಡಿ ಆತಂಕಗಳಿರಲಿಲ್ಲ. ಹಲವು ವರ್ಷಗಳಿಂದ ನನ್ನನ್ನು ಕಾಡಿಸುತ್ತಿದ್ದ ಅಸಿಡಿಟಿ ನನಗೆ ಕಾಟ ಕೊಟ್ಟಿತು. ಇತರ ಗರ್ಭವತಿಯರಂತೆಯೇ ನಾನೂ ನಡೆದುಕೊಳ್ಳುತ್ತಿದ್ದೆ, ವಿಶೇಷ ಒತ್ತಡಗಳೇನೂ ಇರಲಿಲ್ಲ.
ತಾಯಿಯಾಗಲು ಮಾನಸಿಕ ತಯಾರಿ ಅಂದರೆ ಇದರಲ್ಲಿ ವಯಸ್ಸಿನ ಪ್ರಶ್ನೆ ಬರುವುದಿಲ್ಲ. ನಾನು 20+ ಇದ್ದಾಗಿನಿಂದಲೇ ಈ ವಿಷಯಕ್ಕಾಗಿ ತಯಾರಿ ನಡೆಸಿದ್ದೆ. 40+ ನಲ್ಲಿ ತಾಯಿ ಆಗುವುದಕ್ಕಾಗಿ ವಿಶೇಷ ಗಾಬರಿ ಏನೂ ಇರಲಿಲ್ಲ.
ವೈದ್ಯಕೀಯ ಕಾರಣಗಳಿಂದ ಹೆಣ್ಣು 30 ತಲುಪುವ ಮೊದಲು, ಮೊದಲ ಮಗುವಿನ ತಾಯಿ ಆಗುವುದು ಒಳ್ಳೆಯದಂತೆ…. ಆದರೆ ಆ ಕಾರಣದ ಒತ್ತಡಕ್ಕೆ ಮಣಿದು ಬೇಗ ಮದುವೆಯಾಗಿ ಬೇಗ ಮಗು ಹೆರಬೇಕು ಎಂದು ನಾನು ಯಾವ ಮಹಿಳೆಗೂ ಸಲಹೆ ನೀಡುವುದಿಲ್ಲ. ಇದೊಂದು ಸುಗಮ ವಿಧಾನ, ನಿರ್ಧಾರ ನಿಮ್ಮದು ಎಂದಷ್ಟೇ ಹೇಳಬಲ್ಲೆ. ಆತಂಕ ಬೇಡವೇ ಬೇಡ!
ಗುರಿ ತಲುಪಲು ಏನೆಲ್ಲ ಕಷ್ಟಗಳನ್ನು ಎದುರಿಸಬೇಕಾಯಿತು?
ಎಲ್ಲ ಗರ್ಭವತಿಯರಂತೆಯೇ ಒಂದೊಂದೇ ದಿನ ಕಳೆದು ನವಮಾಸ ತುಂಬಿ, ಸುಸೂತ್ರ ಹೆರಿಗೆ ನಂತರ, ಇದೀಗ ತಾಯಿಯಾಗಿ 6 ವಾರಗಳು ಕಳೆದಿವೆ. ಈಗ ನನ್ನ ಈ ಕೂಸು ಸಮಯಕ್ಕೆ ಸರಿಯಾಗಿ ಹಾಲು ಕುಡಿಯಿತೇ, ಕಕ್ಕ ಮಾಡಿತೇ…. ಎಂಬುದೇ ನನ್ನ ಟೆನ್ಶನ್! ಬೇರೆಲ್ಲ ಏನೂ ಚಿಂತೆ ಇಲ್ಲ. ಹೆಣ್ಣಿಗೆ ಮಾತೃತ್ವ ಎಂಥ ಉನ್ನತ ಸ್ಥಾನಕ್ಕೇರಿಸಬಲ್ಲದು ಎಂಬುದನ್ನು ಅನುಭವಿಸಿಯೇ ತಿಳಿಯಬೇಕು. ಇಂಥ ಮುದ್ದಾದ ಮಗುವಿನೊಂದಿಗೆ ಕಳೆಯುವ ಒಂದೊಂದು ಕ್ಷಣ ಅನುಪಮ, ಅವರ್ಣನೀಯ! ಆರ್ಯಾಳಂಥ ಕೂಸಿಗೆ ತಾಯಿಯಾಗಿ ನಾನು ಧನ್ಯೆ!
ವೈದ್ಯರೊಂದಿಗೆ ನಡೆಸಿದ ಸಂಭಾಷಣೆಯಿಂದ 40+ ಈಗಿನ 20+ ಎಂದು ನಿಮಗೆ ಅನಿಸುತ್ತದೆಯೇ?
ಇತ್ತೀಚೆಗೆ ಮಹಿಳೆಯರು ಮಾತೃತ್ವದ ಪಟ್ಟವನ್ನು ತಡವಾಗಿ ಏರಬಯಸುತ್ತಿದ್ದಾರೆ ಎಂಬುದು ನಿಜ. ಆದರೂ ಅವರು ತಮ್ಮ ದೈಹಿಕ ಇತಿಮಿತಿಗಳ ಬಗ್ಗೆ ಅರಿತಿರಬೇಕಾದುದು ಒಳ್ಳೆಯದು. ಎಗ್ ಫ್ರೀಝಿಂಗ್‌ನಿಂದ ಇಂದಿನ ಕೆರಿಯರ್ ವಿಮೆನ್ ತಮ್ಮ ನಿರ್ಧಾರದಂತೆ ನಡೆಯಬಹುದು, ಬೇಕಾದಾಗ ಸಂಸಾರ ಶುರು ಮಾಡಬಹುದು ಇತ್ಯಾದಿ ವಿಪುಲ ಅಕಾಶಗಳಿವೆ. ಆದರೆ…. ಎಗ್ ಫ್ರೀಝಿಂಗ್‌ನ ಯಶಸ್ಸು ನಿಂತಿರುವುದೇ ಮಹಿಳೆ ಯಾವಾಗ ತನ್ನ ಎಗ್ ಪ್ರಿಸರ್ವ್ ಮಾಡಿಸಬಯಸುತ್ತಾಳೆ, ಅಂದರೆ ಯಾವ ವಯಸ್ಸಿನಲ್ಲಿ ಎಂಬುದು ಅತಿ ಮುಖ್ಯ. 40+ ನಂತರ ಈ ನಿರ್ಧಾರ ಕೈಗೊಂಡು ಆಗ ಎಗ್ ಪ್ರಿಸರ್ವ್ ಮಾಡಿಸುತ್ತೇವೆ ಎಂದು ಅಂದರೆ ಲಾಭವಿಲ್ಲ. 22-28ರ ಒಳಗೆ ಈ ದೃಢ ನಿರ್ಧಾರ ಕೈಗೊಳ್ಳಬೇಕು.
ಈ ವಿಟ್ರಿಫಿಕೇಶನ್ ಟೆಕ್ನಿಕ್ ಭಾರತದಲ್ಲಿ ಶುರುವಾಗಿದ್ದು 2006ರಲ್ಲಿ, ನಮಗೆ ತಿಳಿದಂತೆ ಭಾರತದಲ್ಲಿ ಇದನ್ನು ಮೊದಲು ಆರಂಭಿಸಿದವರು ನಾವೇ!
ಒಂದು ಅಂಡಾಣು (ಎಗ್)ವಿನಲ್ಲಿ ಸಾಕಷ್ಟು ಪ್ರಮಾಣದ ನೀರಿನಂಶ ಇರುತ್ತದೆ. ಅದು ಕಂಪ್ಲೀಟ್ ಫ್ರೋಝನ್ ಆದಾಗ, ಅದರ ಮೇಲೆ ಕಟ್ಟುವ ಐಸ್ ಪದರ, ಅಂಡಾಣುವಿನ ಇಂಟೆಗ್ರೆಟಿ ಹಾಳು ಮಾಡಬಹುದು. ಇದನ್ನು ತಪ್ಪಿಸಲು, ಫ್ರೀಝಿಂಗ್‌ಗೆ ಮೊದಲು ಎಗ್‌ನ್ನು ಡೀಹೈಡ್ರೇಟ್‌ಗೊಳಿಸಬೇಕು. ಇದನ್ನು ಕ್ರೋಪ್ರೊಟೆಕ್ಟೆಂಟ್ಸ್ ಬಳಸಿ ಮಾಡಲಾಗುತ್ತದೆ.
ವಿಟ್ರಿಫಿಕೇಶನ್ ಎಂಬುದು ಇಂಥದೇ ಮತ್ತಷ್ಟು ಸುಧಾರಿತ ವಿಧಾನ. ಇದರಲ್ಲಿ ಊಸೈಟ್ ಫ್ರೀಝಿಂಗ್ ಮಾಡಲು ಹೈ ಕಾನ್‌ಸಂಟ್ರೇಟೆಡ್ ಕ್ರೋಪ್ರೊಟೆಕ್ಟೆಂಟ್ಸ್ ಐಸ್ ಕ್ರಿಸ್ಟ್ ಆಗದಂತೆ ಘನೀಕರಿಸಲಾಗುತ್ತದೆ. ಫ್ರೋಝನ್ ಎಗ್ಸ್ ಗಳನ್ನು ಸಂರಕ್ಷಿಸುವಲ್ಲಿ ಇದೊಂದು ಹೊಸ ಕ್ರಾಂತಿಕಾರಕ ಹೆಜ್ಜೆ. ಇದರಲ್ಲಿ ರಾಪಿಡ್ ಕೂಲಿಂಗ್ ವಿಧಾನದಿಂದ, ಎಗ್ ಐಸ್‌ಕ್ರಿಸ್ಟ್ ಆಗದಂತೆ ತಡೆಯಬಹುದಾಗಿದೆ. ಹೀಗಾಗಿ ಮುಂದೆ ಕರಗುವಿಕೆಯ ಸ್ಥಿತಿ ಬಂದಾಗಲೂ ಡ್ಯಾಮೇಜ್ ಆಗುವುದಿಲ್ಲ. ಸಂಶೋಧನೆಗಳ ಪ್ರಕಾರ ಪ್ರಸ್ತುತ ಇದು ಸೇಫ್ ಟೆಕ್ನಿಕ್.
ಭ್ರೂಣವನ್ನು ಪ್ರಿಸರ್ವ್ ಮಾಡುವಂತೆಯೇ ಎಗ್ಸ್ ನ್ನು ಸಹ ಮಾಡುತ್ತಾರೆ, ಮುಖ್ಯವಾಗಿ 190 ಡಿಗ್ರಿ ಸೆಲ್ಶಿಯಸ್ ಫ್ರೀಝಿಂಗ್ ಟೆಂಪರೇಚರ್ ನೆರವಿನಲ್ಲಿ. ವೈಜ್ಞಾನಿಕ ವಿಧಾನಗಳು ಹಾಗೂ ವೈದ್ಯರ ಅರಿವಿನ ಆಧಾರದ ಮೇರೆಗೆ, 5-10 ವರ್ಷಗಳ ಕಾಲ ಫ್ರೋಝನ್ ಮಾಡಿದ ಭ್ರೂಣಗಳಿಂದ ಯಶಸ್ವಿಯಾಗಿ ಗರ್ಭ ಕಟ್ಟಿಸಬಹುದಾಗಿದೆ. ಈ ರೀತಿ ದೀರ್ಘಕಾಲಿಕ ಸಂರಕ್ಷಣೆಯಿಂದ ಗುಣಮಟ್ಟದಲ್ಲಿ ಯಾವುದೇ ಲೋಪದೋಷಗಳಾಗಿಲ್ಲ. ನಮ್ಮ ಪೇಶೆಂಟ್ ಡಯಾನಾ, 8 ವರ್ಷಗಳ ಹಿಂದೆ ಪ್ರಿಸರ್ವ್ ಮಾಡಿಸಿದ ಅಂಡಾಣುಗಳಿಂದ ಈಗ ಗರ್ಭವತಿ ಆಗಿದ್ದಾರೆ, ಸುಸೂತ್ರ ಹೆರಿಗೆಯೂ ಆಯಿತು.
ಒಬ್ಬ ಮಹಿಳೆ ತನ್ನ ಓವೇರಿಯನ್ ರಿಸರ್ವ್ ಬಗ್ಗೆ ಡಬಲ್ ಚೆಕ್ ಮಾಡಿಸಿ ನಂತರ ಎಗ್ ಫ್ರೀಝಿಂಗ್‌ಗೆ ಹೋಗಬೇಕಷ್ಟೆ. ಜೊತೆಗೆ ಆಕೆ ವೈದ್ಯರ ಬಳಿ ಸಂಪೂರ್ಣವಾಗಿ ಸಲಹೆ ಪಡೆದು, ಈ ವಿಧಾನದ ಮೂಲಕ ಗರ್ಭ ಧರಿಸಲು ಯಶಸ್ಸಿನ ದರವೆಷ್ಟು, ಏನೇನು ಅಡ್ಡಿ ಆತಂಕಗಳಿವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು.
ಸಾಮಾನ್ಯವಾಗಿ ಎಗ್ ಫ್ರೀಝಿಂಗ್‌ನಲ್ಲಿ ದೊಡ್ಡ ಪ್ರಮಾಣದ ರಿಸ್ಕ್ ಅಥವಾ ಸೈಡ್ ಎಫೆಕ್ಸ್ಟ್ ಇಲ್ಲ. ಅಪರೂಪಕ್ಕೆ, ಓವ್ಯುಲೇಶನ್ ಇನ್‌ಡ್ಯೂಸ್ ಮಾಡಲು ಬಳಸುವ ಇಂಜೆಕ್ಟಬಲ್ ಡ್ರಗ್ಸ್ ನಿಂದ ಅಂಡಾಣುವಿಗೆ ಹೈಪರ್‌ಸ್ಟಿಮ್ಯುಲೇಶನ್ ಸಿಂಡ್ರೋಮ್ ಆಗಬಹುದು, ಆಗ ಓವರೀಸ್ ಊದಿಕೊಂಡು ದಪ್ಪಗಾಗಿ, ಓವ್ಯುಲೇಶನ್ ಅಥವಾ ಎಗ್ ರಿಟ್ರೀಟ್ ನಂತರ ನೋವು ಉಂಟುಮಾಡಬಹುದು.
– ಎಗ್ ಫ್ರೀಝಿಂಗ್‌ನಿಂದ ಒಬ್ಬ ಮಹಿಳೆ ತನ್ನ ಫಲವತ್ತಾದ ಅಂಡಾಣುಗಳನ್ನು ದೀರ್ಘಕಾಲ ಸಂರಕ್ಷಿಸಿ ತನ್ನಿಚ್ಛೆಯಂತೆ ಬೇಕಾದಾಗ ತಾಯಿ ಆಗುವ ಆಯ್ಕೆ ಇದೆ.
– ಯಾವ ದೇಶಗಳಲ್ಲಿ ಭ್ರೂಣ ಸಂರಕ್ಷಣೆಗೆ ಅನುಮತಿ ಇಲ್ಲವೋ, ಅಲ್ಲಿ ಹೆಚ್ಚಿನಂಶ ಊಸೈಟ್ಸ್ ನಷ್ಟವಾಗದಂತೆ ಕಾಪಿಡಬಹುದು.
– ಮಹಿಳೆಗೆ ಇದೊಂದು ತರಹ ಇನ್‌ಶ್ಯುರೆನ್ಸ್ ಪಾಲಿಸಿ ಇದ್ದಂತೆ, ಆಕೆ ಮುಂದೆ ತನಗೆ ಬೇಕಾದಂತೆ ಗರ್ಭ ಧರಿಸಲು ಈ ಎಗ್‌ಸೆಲ್ಸ್ ನ್ನು ಬಳಸಿಕೊಳ್ಳಬಹುದು.
– ಹಿಂದಿನ ಕಾಲಕ್ಕೆ ಹೋಲಿಸಿದಾಗ, ಈಗ ಫ್ರೋಝನ್ ಎಗ್ಸ್ ನ ಯಶಸ್ಸಿನ ದರ ಎಷ್ಟೋ ಸುಧಾರಿಸಿದೆ. ಆದರೂ ಎಗ್ ಫ್ರೀಝಿಂಗ್‌ನಿಂದ ಸಕ್ಸಸ್ ಗ್ಯಾರಂಟಿ ಎಂದು ಹೇಳಲಾಗದು.
– ಊಸೈಟ್ ಫ್ರೀಝಿಂಗ್‌ನ ಮತ್ತೊಂದು ಮಗ್ಗಲು ಎಂದರೆ, ರೋಗಿಗೆ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ವಿಧಾನ ಒಂದರಿಂದಲೇ ಘನೀಕೃತ ಊಸೈಟ್ಸ್ ನ್ನು ಫಲವತ್ತುಗೊಳಿಸಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಎಗ್ ಶೆಲ್ (ರೋನಾ ಪೆಲುಸೀಡಾ) ಫ್ರೀಝಿಂಗ್ ಪ್ರಕ್ರಿಯೆಯಲ್ಲಿ ಅಧಿಕ ಗಟ್ಟಿಗೊಂಡಿರುತ್ತದೆ.
ಬೇರೆ ವಿಧಾನಗಳಿಗೆ ಹೋಲಿಸಿದಾಗ, ಇದು ಎಷ್ಟೋ ಪಟ್ಟು ದುಬಾರಿಯಲ್ಲ (ಕಾಸ್ಟ್ ಎಫೆಕ್ಟಿವ್) ಎಂಬುದು ಸಾಬೀತಾಗಿದೆ. ಜೊತೆಗೆ ಇದು ಮಹಿಳೆಗೆ ತನ್ನಿಚ್ಛೆಯಂತೆ ಮಗುವಿಗೆ ಜನ್ಮ ನೀಡುವ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತದೆ. ಜೊತೆಗೆ ಇದು ಊಸೈಟ್ ಡೊನೇಷನ್‌ಗೆ ತಗಲುವ ವೆಚ್ಚ ಉಳಿಸುತ್ತದೆ, ಈ ಒಂದು ಆಯ್ಕೆಯು 40+ ನಂತರ ಇದಕ್ಕೆ ಮೊರೆಹೋಗುವವರಿಗೆ ಖರ್ಚಿನ ಬಾಬತ್ತಿನಲ್ಲಿ ಹೆಚ್ಚಿನ ಹೊರೆ ಆಗಲಿದೆ.
ಕೃತಕ ಗರ್ಭಧಾರಣೆಯಲ್ಲಿ ಎಗ್ ಫ್ರೀಝಿಂಗ್ ಲೇಟೆಸ್ಟ್ ಬೆಳವಣಿಗೆ, ಈ ಮೂಲಕ ಹೆಣ್ಣಿಗೆ ತನ್ನಿಚ್ಛೆಯಂತೆ ತಾಯ್ತನ ಪಡೆಯುವ ಸುವರ್ಣಾವಕಾಶವಿದೆ. ಆಕೆ ವಯಸ್ಸಿನ ಹಂಗಿಗೆ ಒಳಪಡಬೇಕಿಲ್ಲ. ಇದರ ಸಾಧಕಗಳನ್ನು ಗಮನಿಸಿ ಅಮೆರಿಕನ್ ಸೊಸೈಟಿ ಆಫ್ ರೀಪ್ರೊಡಕ್ಟಿವ್ ಮೆಡಿಸಿನ್, 2012ರಲ್ಲಿ ಈ ಟೆಕ್ನಿಕ್‌ನಿಂದ `ಎಕ್ಸ್ಪೆರಿಮೆಂಟ್’ ಎಂಬ ಲೇಬಲನ್ನೇ ತೆಗೆಸಿಹಾಕಿ, ಅದು ಎಲ್ಲರ ಹಿತರಕ್ಷಣೆಗಾಗಿ ಎಂಬಂತೆ ಕೃತಕ ಗರ್ಭಧಾರಣೆಯ ಮುಖ್ಯವಾಹಿನಿಯಲ್ಲಿ ಪ್ರಮುಖವಾದುದು ಎಂದು ನಿರೂಪಿಸಿತು.
– ಸುಧಾ ಹರಿಹರನ್