– ಎಸ್‌. ಸಾಧನಾ.

ಮನೆಯಲ್ಲಿ ಅಥವಾ ಬಾಹ್ಯ ವಾತಾವರಣದಲ್ಲಿ ಎಲ್ಲೆಲ್ಲೂ ಮಾಲಿನ್ಯವಿದೆ. ಹೊರಗಿನ ಮಾಲಿನ್ಯದ ಮೇಲೆ ನಮ್ಮ ನಿಯಂತ್ರಣ ಅಷ್ಟಾಗಿ ಇಲ್ಲ. ಆದರೆ ಮನೆಯ ಮಾಲಿನ್ಯದ ಮೇಲೆ ನಾವು ನಿಯಂತ್ರಣ ಹೇರುವುದು ಖಂಡಿತ ಸಾಧ್ಯವಿದೆ. ಚಳಿಗಾಲದಲ್ಲಂತೂ ನಾವು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಏಕೆಂದರೆ ಚಳಿಯ ವಾತಾವರಣದಲ್ಲಿ ಧೂಳು ಮತ್ತು ಹೊಗೆ ಬಹಳ ಎತ್ತರಕ್ಕೆ ಹೋಗವುದು. ಇಡೀ ಮಾಲಿನ್ಯ ನಮ್ಮ ಸುತ್ತಮುತ್ತಲೂ ಗಿರಕಿ ಹೊಡೆಯುತ್ತಿರುತ್ತದೆ.

ಚಳಿ ವಾತಾರಣದಲ್ಲಿ ಮಂಜು ಇರುವ ಕಾರಣದಿಂದ ಕಾರ್ಬನ್‌ ಡೈಆಕ್ಸೈಡ್‌, ಮೀಥೇನ್‌ ಮತ್ತು ನೈಟ್ರಸ್‌ ಆಕ್ಸೈಡ್‌ನಂತಹ ಅಪಾಯಕಾರಿ ಗ್ಯಾಸುಗಳ ಪ್ರಕೋಪ ಮತ್ತಷ್ಟು ಹೆಚ್ಚುತ್ತದೆ.

ಹಾಗೆ ನೋಡಿದರೆ ಮಂಜು ಅಪಾಯಕಾರಿಯೇನೂ ಅಲ್ಲ, ಆದರೆ ಅದರಲ್ಲಿ ಧೂಳು, ಹೊಗೆ ಸೇರಿಕೊಂಡಾಗ ಮಾತ್ರ ಅದು ಅಪಾಯಕಾರಿ. ಹೀಗಾಗಿ ಚಳಿಯ ವಾತಾವರಣದಲ್ಲಿ ಮಾಲಿನ್ಯ ಮತ್ತಷ್ಟು ಹೆಚ್ಚುತ್ತದೆ. ಇದೇ ಕಾರಣದಿಂದ ಈ ಹವಾಮಾನದಲ್ಲಿ ಕಣ್ಣುಗಳಲ್ಲಿ ಉರಿ, ಮೂಗಿನಲ್ಲಿ ತುರಿಕೆ, ಗಂಟಲಿನಲ್ಲಿ ಕಿರಿಕಿರಿ, ಕೆಮ್ಮಿನಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರ ಹೊರತಾಗಿ ಶ್ವಾಸಕೋಶದಲ್ಲಿ ಸೋಂಕಿನ ತಕರಾರುಗಳು ಕೇಳಿಬರುತ್ತವೆ.

ಅಂಕಿಅಂಶಗಳ ಪ್ರಕಾರ, ಪ್ರತಿವರ್ಷ 43 ಲಕ್ಷ ಜನರು ಮನೆಯ ಮಾಲಿನ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಮನೆಯ ಮಾಲಿನ್ಯದಿಂದ ಮುಕ್ತರಾಗುವುದು ಒಂದು ಸವಾಲಿನ ಕೆಲಸವೇ ಸರಿ. ಆದಾಗ್ಯೂ ಅಷ್ಟಿಷ್ಟು ಎಚ್ಚರಿಕೆ ವಹಿಸುವುದರ ಮೂಲಕ ಮನೆಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವುದು ಸಾಧ್ಯವಿದೆ.

ಅದ್ಹೇಗೆ ಎಂಬುದನ್ನು ತಿಳಿದುಕೊಳ್ಳಿ.

– ಧೂಮಪಾನ ಆರೋಗ್ಯಕ್ಕೆ ಹಾನಿಕರ. ಆದರೂ ಜನರು ಧೂಮಪಾನ ಮಾಡುತ್ತಾರೆ. ಸ್ವತಃ ಧೂಮಪಾನ ಮಾಡದವರಿಗಂತೂ ಅದು ಹಾನಿಕರ. ಧೂಮಪಾನಿಗಳ ಆಸುಪಾಸು ಇರುವವರಿಗೂ ಕೂಡ ಅದು ಅಷ್ಟೇ ಹಾನಿಕಾರಕ. ಹೀಗಾಗಿ ಕುಟುಂಬದಲ್ಲಿ ಯಾರಾದರೂ ಧೂಮಪಾನ ಮಾಡುವವರಿದ್ದರೆ, ಹೊಗೆ ಮನೆಯಲ್ಲಿ ಪಸರಿಸದ ಹಾಗೆ ನೋಡಿಕೊಳ್ಳಬೇಕು. ಸಿಗರೇಟು ಬೀಡಿಯ ಹೊಗೆ ವೃದ್ಧರು ಹಾಗೂ ಮಕ್ಕಳಿಗೆ ತುಂಬಾ ಅಪಾಯಕಾರಿ. ಅದರ ಹೊರತಾಗಿ ಮನೆಯಲ್ಲಿ ಯಾರಾದರೂ ಹೃದ್ರೋಗಿಗಳು ಇದ್ದರೆ, ಶ್ವಾಸಕೋಶದ ತೊಂದರೆಯಿಂದ ಬಳಲುವವರಿದ್ದರೆ, ಅವರಿಗೆ ಈ ಅಪರೋಕ್ಷ ಹೊಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.

– ಕ್ರಿಮಿನಾಶಕಗಳ ಬಳಕೆಯಲ್ಲಿ ಎಚ್ಚರವಿರಲಿ. ಮನೆಯನ್ನು ನೊಣ, ಜಿರಲೆಯಿಂದ ಮುಕ್ತಗೊಳಿಸಲು ಮಾರುಕಟ್ಟೆಯಲ್ಲಿ ಬಗೆಬಗೆಯ ರಿಪಲೆಂಟ್‌ ಅಗರಬತ್ತಿ ಹಾಗೂ ಲಿಕ್ವಿಡ್‌ ರೂಪದಲ್ಲಿ ಲಭ್ಯವಿವೆ. ಈ ಎಲ್ಲ ಬಗೆಯ ರಿಪಲೆಂಟ್‌ಗಳು ಕ್ರಿಮಿಕೀಟಗಳನ್ನು ನಿವಾರಿಸುವಲ್ಲಿ ನೆರವಾಗುತ್ತವೆ. ಎರಡೂ ಬಗೆಯ ರಿಪಲೆಂಟ್‌ಗಳಲ್ಲಿ ಹಾನಿಕಾರಕ ಕೆಮಿಕಲ್ಸ್ ಗಳಿರುತ್ತವೆ. ಇವುಗಳಿಂದ ವೃದ್ಧರಿಗೆ ಮತ್ತು ಮಕ್ಕಳಿಗೆ ಶ್ವಾಸಕೋಶದ ತೊಂದರೆ, ಕೆಮ್ಮು ಮತ್ತು ಅಲರ್ಜಿಯಂತಹ ತೊಂದರೆ ಕಾಣಿಸಬಹುದು.

– ಮನೆಯಲ್ಲಿ ಕ್ರಿಮಿಕೀಟಗಳು ಇರುವುದರಿಂದಲೂ ಮನೆಯ ಮಾಲಿನ್ಯ ಹೆಚ್ಚುತ್ತದೆ. ಇರುವೆ, ಜಿರಲೆ, ಜೇಡ ಇವು ಮನೆಯಲ್ಲಿ ಮಾಲಿನ್ಯ ಪಸರಿಸುತ್ತವೆ. ಇವುಗಳ ಹೊರತಾಗಿ ನೊಣಗಳು ಹಾಗೂ ಹಲ್ಲಿಗಳಿಂದಾಗಿಯೂ ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಪರದೆಗಳು ಮತ್ತು ಕಾರ್ಪೆಟ್‌ಗಳು ಸಾಕಷ್ಟು ಧೂಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಹೀಗಾಗಿ ಮೇಲಿಂದ ಮೇಲೆ ಅವುಗಳಲ್ಲಿನ ಧೂಳನ್ನು ಸ್ವಚ್ಛಗೊಳಿಸುತ್ತ ಇರಿ.

– ಪೈಪ್‌ನ ಸೋರುವಿಕೆಯಿಂದ ಮನೆ ಕಲುಷಿತ ವಾತಾವರಣಕ್ಕೆ ಸಾಕ್ಷಿಯಾಗುತ್ತದೆ. ಅಡುಗೆಮನೆ ಮತ್ತು ಬಚ್ಚಲುಮನೆಯ ಪೈಪ್‌ಗಳ ಸ್ವಚ್ಛತೆಯ ಬಗ್ಗೆ ಗಮನವಿಡಿ. ಪೈಪ್‌ನಲ್ಲಿ ಲೀಕೇಜ್‌ ಆಗಿರುವುದು ಅದು ಗೋಡೆಯ ಮೇಲೆ, ನೆಲದ ಮೇಲೆ ಪಸರಿಸಿದಾಗಲೇ ಗೊತ್ತಾಗುತ್ತದೆ. ಪೈಪ್‌ ಕಟ್ಟಿಕೊಂಡಾಗ ಅದನ್ನು ಬೇಗನೆ ಸರಿಪಡಿಸಿ. ಪೈಪ್‌ ಬದಲಿಸಬೇಕಾಗಿ ಬಂದಾಗ ವಿಳಂಬ ಮಾಡಬೇಡಿ.

– ಮನೆಯ ಗೋಡೆಗಳಿಗೆ ಬಳಸುವ ಬಣ್ಣಗಳಲ್ಲಿ  ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೀಸ ಮತ್ತು ಬಿಓಸಿ ಇರಬೇಕು. ಅದರ ಬಗ್ಗೆ ಗಮನಕೊಡಿ. ಸೀಸ ಹಾಗೂ ಬಿಓಸಿ ಪ್ರಮಾಣ ಇಲ್ಲದ ಬಣ್ಣಗಳನ್ನು ಆಯ್ದುಕೊಳ್ಳಿ. ಇದಕ್ಕೆ ಪ್ರಮುಖ ಕಾರಣವೆಂದರೆ, ಬಿಓಸಿಯಲ್ಲಿ ಫಾರ್ಮಾಲ್ಡಿಹೈಡ್‌ ಮತ್ತು ಅಸಿಟಾಲ್ಡಿಹೈಡ್‌ನಂತಹ ಅಪಾಯಕಾರಿ ರಸಾಯನಗಳು ನಮ್ಮ ನರಮಂಡಲದ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಮಕ್ಕಳ ಬೌದ್ಧಿಕ ವಿಕಾಸದ ಮೇಲೆ ಇವು ಮಾರಕ ಪರಿಣಾಮ ಉಂಟು ಮಾಡಬಹುದು. ಹೀಗಾಗಿ ಬಣ್ಣಗಳ ಆಯ್ಕೆ ಮಾಡುವಾಗ ಆರೋಗ್ಯದ ಅಂಶಗಳ ಬಗ್ಗೆ ಗಮನವಿರಲಿ.

– ಮನೆಯನ್ನು ಮಾಲಿನ್ಯದಿಂದ ಮುಕ್ತಗೊಳಿಸಲು ಏರೋಗಾರ್ಡ್‌ ಅಥವಾ ಏರ್‌ಪ್ಯೂರಿಫೈರ್‌ಗಳನ್ನು ಬಳಸಿ.

– ಮನೆಯ ಮಾಲಿನ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು ಅಡುಗೆಮನೆಯೇ. ಆಹಾರ ತಯಾರಿಸುವ ಸಮಯದಲ್ಲಿ ಹೊರಹೊಮ್ಮುವ ಹೊಗೆ ಮಾಲಿನ್ಯವನ್ನುಂಟು ಮಾಡುತ್ತದೆ. ಈ ಹೊಗೆ ಆಸ್ತಮಾ ರೋಗಿಗಳಿಗೆ ಅಪಾಯಕಾರಿಯಾದುದು. ಆರೋಗ್ಯವಂತ ವ್ಯಕ್ತಿಗಳಿಗೂ ಕೂಡ ಶೀತ ಹಾಗೂ ಕೆಮ್ಮನ್ನುಂಟು ಮಾಡಬಹುದು. ಹೀಗಾಗಿ ಅಡುಗೆಮನೆಯ ಮಾಲಿನ್ಯದಿಂದ ಮುಕ್ತರಾಗಲು ಎಗ್ಸಾಸ್ಚ್ ಫ್ಯಾನ್‌ಗಳ ವ್ಯವಸ್ಥೆ ಮಾಡಿ. ಇದು ಹೊಗೆಯನ್ನು ಅತ್ತಿತ್ತ ಪಸರಿಸದಂತೆ ತಡೆಯುತ್ತದೆ.

– ಕೆಲವು ಹೋಮ್ ಅಪ್ಲಯನ್ಸಸ್‌ ಕೂಡ ಮಾಲಿನ್ಯ ಹರಡುತ್ತವೆ. ಉದಾಹರಣೆಗೆ ಏರ್‌ಕಂಡೀಶನರ್ಸ್‌. ಹಾಗಾಗಿ ಮೇಲಿಂದ ಮೇಲೆ ಅವುಗಳ ಸ್ವಚ್ಛತೆಯ ಬಗ್ಗೆ ಗಮನಕೊಡಿ. ಒಂದು ವೇಳೆ ಏರ್‌ಕಂಡೀಶನರ್ಸ್‌ಗಳನ್ನು ಸ್ವಚ್ಛಗೊಳಿಸದೆ ಇದ್ದಲ್ಲಿ, ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅದರ ಫಿಲ್ಟರ್‌ನಲ್ಲಿ ಜಮೆಗೊಳ್ಳುವ ಧೂಳು ಶ್ವಾಸದ ತೊಂದರೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಅದು ಅಲರ್ಜಿಗೂ ಕಾರಣವಾಗುತ್ತದೆ. ಇದರಿಂದ ಶ್ವಾಸಕೋಶಗಳಲ್ಲಿ ಕೆಮ್ಮಿನ ತೊಂದರೆ ಉಂಟಾಗುತ್ತದೆ.

ಗೋಡೆಯಲ್ಲಿ ಕಾಣಿಸಿಕೊಳ್ಳುವ ಬಿರುಕು ಕೂಡ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಮನೆಯ ಛಾವಣಿ ಅಥವಾ ಗೋಡೆಯಲ್ಲಿ ಕಾಣಿಸಿಕೊಂಡ ಬಿರುಕು ಕೋಣೆಯ ತೇವಾಂಶ ಅಧಿಕಗೊಳಿಸುತ್ತದೆ. ಅಧಿಕ ತೇವಾಂಶದಿಂದಾಗಿ ಶೀತ, ನೆಗಡಿ, ಕೆಮ್ಮು ಹಾಗೂ ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳು ಇಡೀ ಕುಟುಂಬದವರನ್ನು ಬಾಧಿಸಬಹದು. ಹೀಗಾಗಿ ಮನೆಯ ಗೋಡೆ ಅಥವಾ ಛಾವಣಿಯಲ್ಲಿ ಎಲ್ಲಾದರೂ ಬಿರುಕು ಕಾಣಿಸಿಕೊಂಡರೆ, ತಕ್ಷಣವೇ ಅದನ್ನು ಮುಚ್ಚಲು ಪ್ರಯತ್ನಿಸಿ.

– ಮನೆಗೆ ಗಾಳಿಯ ವ್ಯವಸ್ಥೆ ಸಮರ್ಪಕವಾಗಿರಬೇಕು. ಮುಂಜಾನೆಯ ಸಮಯದಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನೂ ತೆರೆದಿಡಿ. ಪರದೆಗಳನ್ನು ಬದಿಗೆ ಸರಿಸಿ. ಏಕೆಂದರೆ ತಾಜಾ ಗಾಳಿ ಒಳಗೆ ಪ್ರವೇಶಿಸಬೇಕು. ಕಲುಷಿತ ಗಾಳಿ ಹೊರಗೆ ಹೋಗಲು ಅವಕಾಶ ಸಿಗಬೇಕು. ಆಗಲೇ ನೆಮ್ಮದಿಯ ಉಸಿರಾಟ ಸಾಧ್ಯವಾಗುತ್ತದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ