ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಇವನ್ನು ನಿಮ್ಮ ಬೇಸಿಗೆಯ ಡಯೆಟ್‌ನಲ್ಲಿ ಸೇರ್ಪಡಿಸಿಕೊಳ್ಳಿ.
ಬೇಸಿಗೆಯ ಪ್ರಖರತೆ ಇರುವ ದಿನಗಳಲ್ಲಿ ದೇಹದಿಂದ ಹಾನಿಕಾರಕ ಘಟಕಗಳನ್ನು ನಿವಾರಿಸಲು (ಡಿಟಾಕ್ಸ್) ಪ್ರಯತ್ನ ಮಾಡಬೇಕು. ಏಕೆಂದರೆ ಈ ಅವಧಿಯಲ್ಲಿ ನೈಸರ್ಗಿಕವಾಗಿ ಬೆಳೆದ ಹಣ್ಣು ಹಾಗೂ ತರಕಾರಿಗಳು ಹೇರಳವಾಗಿ ಲಭಿಸುತ್ತವೆ.
ಕರುಳು ತನ್ನ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ತಾನೇ ಉತ್ಪಾದನೆ ಮಾಡಿಕೊಳ್ಳುತ್ತಿರುತ್ತದೆ. ಆದರೆ ಆರೋಗ್ಯದಿಂದಿರಲು ಇದನ್ನು ಆಹಾರ ಪದಾರ್ಥಗಳ ಮೂಲಗಳಿಂದಲೂ ಇತರೆ ಆ್ಯಂಟಿ ಆಕ್ಸಿಡೆಂಟ್‌ಗಳ ಅವಶ್ಯಕತೆ ಕೂಡ ಉಂಟಾಗುತ್ತದೆ. ಹೀಗಾಗಿ ಎಂತಹ ಕೆಲವು ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕೆಂದರೆ, ಅವು ಲಿವರ್ ಹಾಗೂ ಪಚನ ಕ್ರಿಯೆಯನ್ನು ಸಮರ್ಪಕಗೊಳಿಸಲು ನೆರವಾಗಬೇಕು. ಆ್ಯಂಟಿ ಆಕ್ಸಿಡೆಂಟ್ ಆಧಾರಿತ ಆಹಾರ ಪದಾರ್ಥಗಳ ಸೇವನೆಯಿಂದ ದೇಹದ ಮುಕ್ತ ಕಣಗಳೊಂದಿಗೆ ಹೋರಾಡಲು ಸಹಾಯ ದೊರೆಯುತ್ತದೆ. ಡಿಟಾಕ್ಸ್ ನ ಕೆಳಕಂಡ ಟಿಪ್ಸ್ ಅನುಸರಿಸುವುದರ ಮೂಲಕ ದೇಹವನ್ನು ಸ್ವಚ್ಛಗೊಳಿಸಬಹುದು.
– ದೇಹವನ್ನು ಶುಚಿಗೊಳಿಸಲು ಕಲ್ಲಂಗಡಿ ಹಣ್ಣು ಒಂದು ಉತ್ತಮ ಆಹಾರ ಪದಾರ್ಥವಾಗಿದೆ. ಇದರಿಂದ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಷಾರ ಅಂಶ ನಿರ್ಮಾಣಗೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೈಟ್ರೊಲೈನ್ ಇರುತ್ತದೆ. ಇದರಿಂದ ಅರ್ಜಿನಿನ್ ತಯಾರಾಗಲು ನೆರವಾಗುತ್ತದೆ. ಅದರಿಂದ ದೇಹದಲ್ಲಿನ ಕಲ್ಮಶಗಳು ಹೊರಹೋಗುತ್ತವೆ. ಕಲ್ಲಂಗಡಿ ಪೊಟ್ಯಾಶಿಯಮ್ ನ ಅತ್ಯುತ್ತಮ ಮೂಲ ಕೂಡ. ಅದು ನಮ್ಮ ಆಹಾರದಲ್ಲಿ ಸೋಡಿಯಮ್ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ನಮ್ಮ ಕಿಡ್ನಿಗಳಿಗೂ ಲಾಭವಾಗುತ್ತದೆ.
– ದೇಹದಲ್ಲಿನ ಹಾನಿಕಾರಕ ಘಟಕಗಳನ್ನು ಹೊರಹಾಕುವಲ್ಲಿ ಸೌತೆಕಾಯಿ ನೆರವಾಗುತ್ತದೆ. ಸೌತೇಕಾಯಿಯಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ ಮೂತ್ರ ಜನಕಾಂಗದ ವ್ಯವಸ್ಥೆ ಸಮರ್ಪಕವಾಗಿರುತ್ತದೆ.
– ನಿಂಬೆಹಣ್ಣು ಲಿವರ್‌ಗೆ ಉಪಯುಕ್ತವಾಗಿದೆ. ಇದು ಯೂರಿಕ್ ಆ್ಯಸಿಡ್ ಹಾಗೂ ಇತರೆ ಹಾನಿಕಾರಕ ರಸಾಯನಗಳ ಮಿಶ್ರಣವನ್ನು ಸಿದ್ಧಗೊಳಿಸುತ್ತದೆ. ಈ ರೀತಿ ಅದು ದೇಹದ ಪಿ.ಎಚ್. ಲೆವೆಲ್‌ನ್ನು ಸಮತೋಲನಗೊಳಿಸುತ್ತದೆ.
– ಪುದೀನಾ ಬೇಸಿಗೆಯಲ್ಲಿ ತಂಪಿನ ಅನುಭೂತಿ ನೀಡುತ್ತದೆ. ಇದು ಆಹಾರವನ್ನು ಪಚನಗೊಳಿಸಲು ಹೆಚ್ಚಿನ ನೆರವು ನೀಡುತ್ತದೆ. ಅಷ್ಟೇ ಅಲ್ಲ, ಲಿವರ್ ಹಾಗೂ ಚಿಕ್ಕ ಕರುಳಿನಲ್ಲಿ ಪಿತ್ತದ ಪ್ರವಾಹನ್ನು ಸಮರ್ಪಕಗೊಳಿಸುತ್ತದೆ. ಜೊತೆಗೆ ಆಹಾರದಲ್ಲಿನ ಕೊಬ್ಬನ್ನು ವಿಲೀನಗೊಳಿಸುತ್ತದೆ.
– ಅಮೈನೊ ಆ್ಯಸಿಡ್ ಪ್ರೋಟೀನ್‌ಯುಕ್ತ ಪದಾರ್ಥಗಳಲ್ಲಿ ಕಂಡುಬರುತ್ತದೆ. ಇದು ಹಾನಿಕಾರಕ ಘಟಕಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ.
– ತರಕಾರಿಗಳನ್ನು ಹಬೆಯಲ್ಲಿ ಕನಿಷ್ಠ ನೀರಿನಲ್ಲಿ ಬೇಯಿಸುವುದು ಅಥವಾ ಸಾಧಾರಣ ಪ್ರಮಾಣದಲ್ಲಿ ಹುರಿಯುವುದು ಅತ್ಯಂತ ಒಳ್ಳೆಯ ಉಪಾಯ. ಏಕೆಂದರೆ ಇದರಿಂದ ಆಹಾರದಲ್ಲಿನ ಪೋಷಕಾಂಶಗಳು ನಷ್ಟಗೊಳ್ಳುವುದಿಲ್ಲ.
– ಹಾನಿಕಾರಕ ಘಟಕಗಳನ್ನು ದೇಹದಿಂದ ಹೊರಕ್ಕೆ ಹಾಕಲು ಅಷ್ಟಿಷ್ಟು ಸುಲಭ, ಸರಳ ವ್ಯಾಯಾಮಗಳನ್ನು ಮಾಡಿ. ಡಿಟಾಕ್ಸಿಂಗ್ ಸಂದರ್ಭದಲ್ಲಿ ನೀವು ಆಲ್ಕೋಹಾಲ್ ಹಾಗೂ ಕೆಫಿನ್‌ನಿಂದ ದೂರ ಇರಬೇಕು.
– ಪ್ರತಿದಿನ ಮುಂಜಾನೆ ಬಿಸಿ ನೀರಿನಲ್ಲಿ ನಿಂಬೆರಸ ಹಾಗೂ ಜೇನುತುಪ್ಪ ಬೆರೆಸಿ ಕುಡಿಯಿರಿ. ಏಕೆಂದರೆ ಇದು ಪಚನಕ್ರಿಯೆಯನ್ನು ಮತ್ತಷ್ಟು ಸಕ್ರಿಯಗೊಳಿಸುತ್ತದೆ. ಅಷ್ಟೇ ಅಲ್ಲದೆ, ಮಲಬದ್ಧತೆಯಿಂದ ದೂರ ಇರಲು ನೆರವಾಗುತ್ತದೆ.
– ಪಾಲಿಫೆನಾಲ್‌ಯುಕ್ತ ಗ್ರೀನ್ ಟೀ ಕುಡಿಯಿರಿ. ಅದು ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ನ ಕೆಲಸ ಮಾಡುತ್ತದೆ.
– ನಿರ್ದಿಷ್ಟ ಪ್ರಮಾಣದಲ್ಲಿ ನಿಯಮಿತವಾಗಿ ಹಾಲು ಸೇವನೆ ಮಾಡಿ. ಹಾಲಿನಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ಮೂಳೆಗಳಿಗೆ ಬಲ ನೀಡುವ ಕೆಲಸವನ್ನು ಹಾಲು ಮಾಡುತ್ತದೆ. ಹಾಲು ನಮ್ಮ ದೇಹದ ಅಶುದ್ಧ ಘಟಕಗಳನ್ನು ಹೊರಹಾಕಿ ದೇಹಕ್ಕೆ ಶಕ್ತಿ ನೀಡುತ್ತದೆ.
– ಕೆಫಿನ್‌ನಿಂದ ದೂರ ಇರಿ. ಅದು ನಮ್ಮ ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡೆತಡೆಯನ್ನುಂಟು ಮಾಡುತ್ತದೆ. ಅದೇ ರೀತಿ ಮದ್ಯ ಸೇವನೆ ಕೂಡ ಮಾಡಬೇಡಿ. ಏಕೆಂದರೆ ಅದು ರಕ್ತ ಪ್ರವಾಹದಲ್ಲಿ ಸುಲಭವಾಗಿ ಸೇರಿಕೊಳ್ಳುತ್ತದೆ ಹಾಗೂ ದೇಹದ ಪ್ರತಿಯೊಂದು ಭಾಗದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ.
– ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯಿರಿ. ಪುರುಷರಿಗೆ ಪ್ರತಿದಿನ 3 ಲೀಟರ್ ನೀರು ಬೇಕು. ಮಹಿಳೆಯರಿಗೆ 2 ರಿಂದ ಎರಡೂವರೆ ಲೀಟರ್‌ನಷ್ಟು ಬೇಕು. ನೀರು ದೇಹದ ಪ್ರಮುಖ ಅಂಗಗಳಿಂದ ಹಾನಿಕಾರಕ ಘಟಕಗಳನ್ನು ಹೊರಹಾಕುತ್ತದೆ.
– ನಿಮ್ಮ ಆಹಾರದಲ್ಲಿ ನಾರಿನ ಪ್ರಮಾಣವನ್ನು ಹೆಚ್ಚಿಸಿ. ನಾರಿನ ಆಹಾರ ಪದಾರ್ಥಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತವೆ. ಆ ಕಾರಣದಿಂದ ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಹಾಗೂ ಬೊಜ್ಜಿನ ಅಪಾಯ ಕಡಿಮೆಗೊಳ್ಳುತ್ತದೆ.
– ಸಾಕಷ್ಟು ವಿಟಮಿನ್‌ಗಳನ್ನು ಸೇವಿಸಿ. ಇದು ಅತ್ಯಂತ ಮಹತ್ವದ ಪೋಷಕಾಂಶವಾಗಿದೆ. ಯಾರ ದೇಹ ವಿಟಮಿನ್‌ಗಳನ್ನು ತಯಾರಿಸಲು ಸಾಮರ್ಥ್ಯ ಹೊಂದಿರುವುದಿಲ್ಲವೋ, ಅವರು ಆಹಾರದ ಮೂಲಕ ಇವುಗಳ ಸೇವನೆ ಮಾಡಬೇಕು.
– ನಿದ್ರೆ ಕೂಡ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಮಲಗಿದಾಗ ಎಲ್ಲ ಜೀವಕೋಶಗಳಿಗೆ ಹಾಗೂ ಊತಕಗಳಿಗೆ ಆಮ್ಲಜನಕದ ಲಭ್ಯತೆ ಎಲ್ಲ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ. ಅದು ಚರ್ಮ ಹಾಗೂ ಕಣ್ಣುಗಳನ್ನು ಹೊಳೆಯುವಂತೆ ಮಾಡುತ್ತದೆ.
– ಸ್ವರ್ಣಲತಾ ನಾಗೇಶ್