ಬಾಯಿ ಉರಿಯ ಸಮಸ್ಯೆ ಕೇವಲ ಮಸಾಲೆಯುಕ್ತ ಪದಾರ್ಥಗಳ ಸೇವನೆಯಿಂದಷ್ಟೇ ಉಂಟಾಗುವುದಿಲ್ಲ, ಅದಕ್ಕೆ ಬೇರೆ ಕಾರಣಗಳು ಕೂಡ ಇವೆ. ಬಾಯಿ ಉರಿಗೆ ಕಾರಣಗಳು ಹಾಗೂ ಅವುಗಳಿಂದ ರಕ್ಷಿಸಿಕೊಳ್ಳುವ ಉಪಾಯಗಳ ಬಗ್ಗೆ ಅರಿತುಕೊಳ್ಳಿ!
ಹಲ್ಲುಗಳ ಸ್ವಚ್ಛತೆ : ಹಲ್ಲುಗಳ ಸ್ವಚ್ಛತೆಯ ಬಗ್ಗೆ ಗಮನ ಕೊಡದೇ ಇರುವುದರಿಂದ ಬಾಯಿ ಉರಿ, ಬಾಯಿ ಶುಷ್ಕತೆ, ಬಾಯಿಯ ಅಲ್ಸರ್ನಂತಹ ಲಕ್ಷಣಗಳು ಗೋಚರಿಸುತ್ತವೆ. ಬಾಯಿ ಸ್ವಚ್ಛತೆಗಾಗಿ ನಿಯಮಿತವಾಗಿ ಬ್ರಶ್ ಮಾಡುವುದು ಅತ್ಯವಶ್ಯ.
ಪೋಷಕಾಂಶಗಳ ಕೊರತೆ : ದೇಹದಲ್ಲಿ ವಿಟಮಿನ್, ಕಬ್ಬಿಣಾಂಶ ಹಾಗೂ ಇತರೆ ಖನಿಜಾಂಶಗಳ ಕೊರತೆ ಕೂಡ ಇದಕ್ಕೆ ಕಾರಣವಾಗಿರಬಹುದು. ಮೇಲ್ಕಂಡ ಅಂಶಗಳು ಇರುವಂತಹ ಆಹಾರ ಪದಾರ್ಥಗಳಿಗೆ ಪ್ರಾಧಾನ್ಯತೆ ಕೊಡಿ.
ರೋಗ : ಮಧುಮೇಹ ಹಾಗೂ ಥೈರಾಯ್ಡ್ ತೊಂದರೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅತಿ ಸಂವೇದನಾಶೀಲತೆ : ಅಲರ್ಜಿ ಸಮಸ್ಯೆಗೆ ತುತ್ತಾದ ಜನರಿಗೆ ಯಾವುದಾದರು ಒಂದು ಆಹಾರದಿಂದ ಈ ಸಮಸ್ಯೆ ಉತ್ಪನ್ನವಾಗಬಹುದು.
ಹಾರ್ಮೋನ್ ಅಸಮತೋಲನ : ಹಾರ್ಮೋನ್ ಸಮಸ್ಯೆಗೆ ತುತ್ತಾದವರಲ್ಲೂ ಈ ಬಗೆಯ ಲಕ್ಷಣಗಳು ಕಂಡುಬರುತ್ತವೆ. ಹಾರ್ಮೋನ್ ಅಸಮತೋಲನದ ಸಮಸ್ಯೆ ಮುಟ್ಟಂತ್ಯದಲ್ಲಿರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಲಾಲಾರಸದ ಕೊರತೆಯಿಂದ ಅವರಲ್ಲಿ ಬಾಯಿ ಒಣಗುವ ಅಂದರೆ ಶುಷ್ಕತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಔಷಧಿಗಳ ಸೇವನೆ ಹಾಗೂ ಚಿಕಿತ್ಸೆ : ರೇಡಿಯೇಶನ್ ಹಾಗೂ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವವರು ಈ ಬಗೆಯ ಸಮಸ್ಯೆಯಿಂದ ಬಳಲುತ್ತಾರೆ. ಹೀಗಾಗಿ ಯಾವುದೇ ಔಷಧಿ ಸೇವನೆ ಮಾಡುವ ಮುನ್ನ ವೈದ್ಯರ ಜೊತೆ ಸಮಾಲೋಚನೆ ನಡೆಸಿ.
ಅಮಲಿನ ಚಟ : ಧೂಮಪಾನದ ಚಟ ಕೂಡ ಬಾಯಿ ಒಣಗುವ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮದ್ಯ ಸೇವನೆ ಮಾಡುವವರಲ್ಲಿ ಈ ಸಮಸ್ಯೆ ಸಾಮಾನ್ಯ ಎಂಬಂತಿರುತ್ತದೆ. ಇಂತಹ ಜನರಲ್ಲಿ ಬಾಯಿ ಶುಷ್ಕಗೊಳ್ಳುವ ಸಮಸ್ಯೆಯ ಜೊತೆಗೆ ಹೊಟ್ಟೆ ಹಾಗೂ ಎದೆ ಉರಿಯ ಸಮಸ್ಯೆ ಕೂಡ ಉಂಟಾಗುತ್ತದೆ.
ಬಾಯಿ ಉರಿಗೆ ಚಿಕಿತ್ಸೆ : ಬಾಯಿ ಉರಿಯ ಸಮಸ್ಯೆಯನ್ನು ಹಗುರವಾಗಿ ಭಾವಿಸಬೇಡಿ. ತಕ್ಷಣವೇ ವೈದ್ಯರ ಜೊತೆ ಸಮಾಲೋಚನೆ ನಡೆಸಿ ಈ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಿ :
– ಧೂಮಪಾನದ ಚಟದಿಂದ ದೂರ ಇರಿ.
– ಆಮ್ಲ ಪೇಯ ಮತ್ತು ಮದ್ಯದ ಚಟದಿಂದಲೂ ದೂರ ಇರಿ.
– ನಿಮ್ಮ ಆಹಾರದಲ್ಲಿ ಪೌಷ್ಟಿಕಾಂಶಗಳಾದ ಬೇಳೆ ಕಾಳುಗಳು, ನಾರುಯುಕ್ತ ಹಣ್ಣು ತರಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಿ.
– ದ್ರವ ಪದಾರ್ಥಗಳನ್ನು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ಆದರೆ ಒಂದು ಸಂಗತಿ ಗಮನದಲ್ಲಿರಲಿ, ದ್ರವ ಪದಾರ್ಥಗಳು ಹೆಚ್ಚು ಕೋಲ್ಡ್ ಆಗಿರಬಾರದು.
– ಸರಿಯಾಗಿ ಬ್ರಶ್ ಮಾಡುವ ವಿಧಾನವನ್ನು ತಿಳಿದುಕೊಳ್ಳಿ.
– ರುಚಿ ರಹಿತ ಟೂಥ್ ಪೇಸ್ಟ್ ಬಳಸಿ.
– ನಿಮ್ಮ ಡೆಂಚರ್ ಫಿಕ್ಸ್ ಮಾಡಿಟ್ಟುಕೊಳ್ಳಿ.
– ಅತಿಯಾದ ಮಸಾಲೆಯುಕ್ತ ಹಾಗೂ ಹೆಚ್ಚು ಬಿಸಿ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
– ರಾತ್ರಿ ಹೊತ್ತು ಮಸಾಲೆಯುಕ್ತ ಆಹಾರ ಪದಾರ್ಥವನ್ನು ಸೇವಿಸಬೇಡಿ.
– ಜೀವನವಿಡೀ ರುಚಿಕರ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ಆನಂದ ಪಡೆಯಬೇಕೆಂದಿದ್ದರೆ, ಬಾಯಿಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈ ಸಂಗತಿಗಳನ್ನು ಚಾಚೂ ತಪ್ಪದೇ ಅನುಸರಿಸಿ.
– ಡಾ. ಶಾಂತರಾಜ್