ಟೇಸ್ಟಿ ರೆಡ್ಮೀಟ್

ಸಾಮಗ್ರಿ : 5-6 ಮಟನ್‌ ತುಂಡುಗಳು, 1-2 ಈರುಳ್ಳಿ, 10-12 ಎಸಳು ಬೆಳ್ಳುಳ್ಳಿ, ಒಂದಿಷ್ಟು ಜೀರಿಗೆ, ಸೋಂಪು, ಚಕ್ಕೆ, ಲವಂಗ, ಧನಿಯಾ, ಒಣಮೆಣಸಿನಕಾಯಿ, ಅರ್ಧ ಸೌಟು ತುಪ್ಪ, 4-5 ಚಮಚ ರೀಫೈಂಡ್‌ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಪುಡಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯಾಪುಡಿ, ಗರಂಮಸಾಲ, ಚಾಟ್‌ ಮಸಾಲ, ಟೊಮೇಟೊ ಪೇಸ್ಟ್. ತುಸು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮಟನ್‌ ತುಂಡುಗಳಿಗೆ ತುಸು ಉಪ್ಪು, ಅರಿಶಿನ, ಖಾರ ಸೇರಿಸಿ ಈ ಮಿಶ್ರಣವನ್ನು ಅರ್ಧ ಗಂಟೆ ಕಾಲ ಮ್ಯಾರಿನೇಟ್‌ಗೊಳಿಸಿ. ಒಂದು ದೊಡ್ಡ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಸೋಂಪು, ಪುಡಿಮೆಣಸು, ಚಕ್ಕೆ, ಲವಂಗ, ಇಡೀ ಧನಿಯಾ, ಒಣ ಮೆಣಸು, ಅರ್ಧದಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ನಿಧಾನವಾಗಿ ಬಾಡಿಸಿ. ಆರಿದ ನಂತರ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ತಿರುವಿಕೊಳ್ಳಿ. ಅದೇ ಪ್ಯಾನಿನಲ್ಲಿ ತುಸು ಎಣ್ಣೆ, ತುಪ್ಪ ಎರಡೂ ಬಿಸಿ ಮಾಡಿ. ಅದಕ್ಕೆ ಉಳಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ಆಮೇಲೆ ಧನಿಯಾಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ ಹಾಕಿ ಬಾಡಿಸಿ. ಇದಕ್ಕೆ ಮಟನ್‌ ಹಾಕಿ ಚೆನ್ನಾಗಿ ಕೆದಕಿ, ನೀರು ಚಿಮುಕಿಸಿ, ಟೊಮೇಟೊ ಪೇಸ್ಟ್ ಸಹಿತ ರುಬ್ಬಿದ ಮಿಶ್ರಣ ಸಹ ಬೆರೆಸಿಕೊಂಡು ಚೆನ್ನಾಗಿ ಕೈಯಾಡಿಸಿ 4-5 ಸೀಟಿ ಬರುವಂತೆ ಕುಕ್ಕರ್‌ ಕೂಗಿಸಿ. ನಂತರ ಇನ್ನೊಮ್ಮೆ ಎಲ್ಲ ಬೆರೆತುಕೊಳ್ಳುವಂತೆ ಕೆದಕಿ, ಕೆಳಗಿಳಿಸಿ ಇದಕ್ಕೆ ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಲು ಕೊಡಿ.

ಸಜ್ಜೆ ರೊಟ್ಟಿ

ಸಾಮಗ್ರಿ : 2-3 ಕಪ್‌ ಸಜ್ಜೆ ಹಿಟ್ಟು, 2 ಚಿಟಕಿ ಉಪ್ಪು, ಅಗತ್ಯವಿದ್ದಷ್ಟು ತುಪ್ಪ, ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಸಜ್ಜೆ ಹಿಟ್ಟು ಹಾಕಿಕೊಂಡು ಉಪ್ಪು, ಉಗುರು ಬೆಚ್ಚಗಿನ ನೀರು ಬೆರೆಸಿ ಚಪಾತಿ ಹಿಟ್ಟಿನಂತೆ ಮೃದುವಾಗಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 1 ಗಂಟೆ ಕಾಲ ನೆನೆಯಲು ಬಿಡಿ. ನಂತರ ಮತ್ತೆ ತುಪ್ಪ ಬೆರೆಸಿ ನಾದಿಕೊಂಡು ಇದರಿಂದ ಸಣ್ಣ ಉಂಡೆಗಳಾಗಿಸಿ ದಪ್ಪ ಚಪಾತಿಗಳಾಗಿ ಲಟ್ಟಿಸಿ. ಅದು ಮಣೆಗೆ ಅಂಟದಿರಲು ಮೇಲ್ಭಾಗಕ್ಕೆ ಆಗಾಗ ತುಸು ಸಜ್ಜೆ ಹಿಟ್ಟು ಉದುರಿಸಿಕೊಳ್ಳಿ. ಈ ರೀತಿ ಸಿದ್ಧಪಡಿಸಿಕೊಂಡು ಕಾದ ತವಾಗೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಬಿಸಿ ಇರುವಾಗಲೇ ಇದನ್ನು ಗ್ರೇವಿ, ಪಲ್ಯದ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಕಾರ್ನ್ಗ್ರೇವಿ

ಸಾಮಗ್ರಿ : 300 ಗ್ರಾಂ ತಾಜಾ ಕಾರ್ನ್‌, ಹೆಚ್ಚಿದ 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 3-4 ಇಡೀ ಒಣ ಮೆಣಸು, ತುಸು ಹಾಲು, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಹುಳಿ ಮೊಸರು.

ವಿಧಾನ : ತಾಜಾ ಕಾರ್ನ್‌ಗೆ ತುಸು ನೀರು, ಹಾಲು, ಚಿಟಕಿ ಉಪ್ಪು ಹಾಕಿ ಚಿಕ್ಕ ಕುಕ್ಕರ್‌ನಲ್ಲಿ 1 ಸೀಟಿ ಬರುವಂತೆ ಬೇಯಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಜೀರಿಗೆ, ಸೋಂಪು, ಓಮ ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ತುಂಡರಿಸಿದ ಒಣ ಮೆಣಸು ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಬೆಂದ ಕಾರ್ನ್‌ ಸೇರಿಸಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಉಪ್ಪು, ಖಾರ, ಅರಿಶಿನ, ಹುಳಿ ಮೊಸರು ಬೆರೆಸಿ ನಿಧಾನವಾಗಿ ಕೈಯಾಡಿಸುತ್ತಾ ಕುದಿಸಿರಿ. ಗ್ರೇವಿ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ಮೇಲೆ ಟೊಮೇಟೊ ಸಾಸ್‌ ತೇಲಿಬಿಟ್ಟು ಬಿಸಿಯಾಗಿ ಅನ್ನದ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ