- ರಾಘವೇಂದ್ರ ಅಡಿಗ ಎಚ್ಚೆನ್.
ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ನಟಿ ರಮ್ಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅಪಾರವಾಗಿದ್ದು, ಅವರಿಗೆ ನ್ಯಾಯಯುತ ವೇತನ ಹಾಗೂ ಗೌರವ ದೊರೆಯಬೇಕು ಎಂದು ಒತ್ತಾಯಿಸಿದ್ದಾರೆ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಳೆದ ಐದು ದಿನಗಳಿಂದ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮಾಸಿಕ 15 ಸಾವಿರ ರೂಪಾಯಿ ನಿಶ್ಚಿತ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತೆಯರಿಗೆ ನಟಿ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ಸೂಚಿಸಿದ್ದಾರೆ.
ವೀಡಿಯೊ ಹಂಚಿಕೊಂಡು ಆಶಾ ಕಾರ್ಯಕರ್ತೆಯರ ಪರ ಧ್ವನಿ ಎತ್ತಿದ ರಮ್ಯಾ
ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಸಂಬಂಧಿಸಿದ ವೀಡಿಯೊವೊಂದನ್ನು ಹಂಚಿಕೊಂಡಿರುವ ನಟಿ ರಮ್ಯಾ, ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದು, ಅವರ ಪರಿಶ್ರಮಕ್ಕೆ ತಕ್ಕ ಗೌರವ ಮತ್ತು ವೇತನ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಆಶಾ ಕಾರ್ಯಕರ್ತೆಯರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಅವರಿಗೆ ನ್ಯಾಯಯುತ ಹಾಗೂ ಗೌರವಯುತ ವೇತನ ದೊರೆಯಬೇಕು. ಅಲ್ಲದೆ, ವೇತನವನ್ನು ನಿಗದಿತ ಸಮಯಕ್ಕೆ ಪಾವತಿಸಬೇಕು ಎಂದು ರಮ್ಯಾ ಒತ್ತಾಯಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಭರವಸೆ ಶೀಘ್ರದಲ್ಲೇ ನಿರ್ಧಾರವಾಗಿ ಕಾರ್ಯರೂಪಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಐದು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ
ಮಾಸಿಕ ಗೌರವಧನ ಹೆಚ್ಚಳ ಹಾಗೂ ಬಾಕಿ ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಳೆದ ಐದು ದಿನಗಳಿಂದ ಹಗಲು-ರಾತ್ರಿ ಧರಣಿ ಮುಂದುವರಿದಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳೇನು?
ಆಶಾ ಕಾರ್ಯಕರ್ತೆಯರು ಮಾಸಿಕ 15 ಸಾವಿರ ರೂಪಾಯಿ ನಿಶ್ಚಿತ ಗೌರವಧನ ನೀಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಹಲವು ವಿಷಯಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
• ಮಾಸಿಕ 15,000 ರೂಪಾಯಿ ನಿಶ್ಚಿತ ಗೌರವಧನ ನೀಡಬೇಕು.
• ಸಮಸ್ತ ಆ್ಯಪ್ ಮೂಲಕ ಕಡ್ಡಾಯವಾಗಿ ಮೊಬೈಲ್ನಲ್ಲಿ ಕೆಲಸ ಮಾಡುವ ಒತ್ತಾಯವನ್ನು ಕೈಬಿಡಬೇಕು.
• ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಇಡಿಗಂಟು ಬಿಡುಗಡೆ ಮಾಡಬೇಕು.
• ಆಶಾ ನಿಧಿಯಡಿ ಬಾಕಿ ಉಳಿದಿರುವ ಪ್ರೋತ್ಸಾಹಧನ ಪಾವತಿಸಬೇಕು.
• ಸುಗಮಕಾರರನ್ನು ಮರುನೇಮಕ ಮಾಡಿ, ಬಾಕಿ ವೇತನ ನೀಡಬೇಕು.
• ಎನ್ಐಒಎಸ್ ತರಬೇತಿಗೆ ಸಂಬಂಧಿಸಿದ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು.
• ತೀವ್ರ ಅನಾರೋಗ್ಯದ ಚಿಕಿತ್ಸಾ ಅವಧಿಯಲ್ಲಿ ಮೂರು ತಿಂಗಳ ಗೌರವಧನ ನೀಡಬೇಕು.
• ಸೇವಾ ನಿವೃತ್ತಿ ಇಡಿಗಂಟನ್ನು ಪಶ್ಚಿಮ ಬಂಗಾಳ ಮಾದರಿಯಲ್ಲಿ 5 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.
ಸರ್ಕಾರದ ನಿರ್ಧಾರದತ್ತ ಆಶಾ ಕಾರ್ಯಕರ್ತೆಯರ ಚಿತ್ತ
ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರಿಸಿರುವ ನಡುವೆಯೇ ನಟಿ ರಮ್ಯಾ ಬೆಂಬಲ ವ್ಯಕ್ತಪಡಿಸಿರುವುದು ಗಮನ ಸೆಳೆದಿದೆ.





