ಜೆಕೆ ಟೈರ್ಸ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಆಟೋಕ್ರಾಸ್ ಚಾಂಪಿಯನ್‌ಶಿಪ್ (ಐಎನ್‌ಎಸಿ) 2025 ರ ಸುತ್ತಿನ ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್ 2025 ರಲ್ಲಿ ಗೋವಾದ ವೈಭವ್ ಮರಾಠೆ ಮೊದಲ ಸ್ಥಾನ ಪಡೆದಿದ್ದಾರೆ. ಕುರ್ವಂಗಿ ಗ್ರಾಮದ ಸಾಂಗ್ನಿಪುರದಲ್ಲಿ ನಡೆದ ಈ ಫೆಸ್ಟ್ ನಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದರು.
ಜೆಕೆ ಟೈರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಮರಾಠೆ, ತಮ್ಮ ತಂಡದ ಸಹ ಆಟಗಾರರಾದ ಸಯದ್ ಸಲ್ಮಾನ್ ಅವರನ್ನು 02:57.876 ಸೆಕೆಂಡುಗಳಲ್ಲಿ ಹಿಂದಿಕ್ಕಿ ಮುನ್ನಡೆ ಸಾಧಿಸಿದರು. ಸಲ್ಮಾನ್ 02:59.687 ಸೆಕೆಂಡುಗಳಲ್ಲಿ ಮುಗಿಸಿ ದ್ವಿತೀಯ ಸ್ಥಾನ ಪಡೆದರೆ, ಏಮನ್ 03:01.786 ಸೆಕೆಂಡುಗಳಲ್ಲಿ ಓಟ ಮುಗಿಸಿ ಮೂರನೇ ಸ್ಥಾನಕ್ಕೆ ತೃಪ್ತರಾದರು.
ಸಯದ್ ಸಲ್ಮಾನ್ ಐಎನ್‌ಎಸಿ 1 - 2000 ಸಿಸಿ ವರ್ಗದಲ್ಲಿ 02:59.169 ಸೆಕೆಂಡುಗಳ ಸಮಯದಲ್ಲಿ ಓಟ ಮುಗಿಸಿ ಗೆಲುವು ಸಾಧಿಸಿದರು. ಚೇತನ್ ಶಿವರಾಮ್ ಹಾಗೂ ಏಮನ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದರೆ, ವೈಭವ್ ಮರಾಠೆ ಈ ವರ್ಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತರಾದರು.
ಐಎನ್‌ಎಸಿ 2 - 1650 ಸಿಸಿ ವರ್ಗದಲ್ಲಿ ಅಶದ್ ಪಾಷಾ ಮೊದಲ ಸ್ಥಾನ ಪಡೆದುಕೊಂಡರು, ಏಮನ್ ಮತ್ತು ಸಯದ್ ಸಲ್ಮಾನ್ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ಸಯದ್ ಸಲ್ಮಾನ್ ಐಎನ್‌ಎಸಿ 2 - 1450 ಸಿಸಿ ವರ್ಗದಲ್ಲಿ ಹಾಗೂ ನಂತರ ಐಎನ್‌ಎಸಿ 2 - 1100 ಸಿಸಿ ವರ್ಗದಲ್ಲಿಯೂ ಗೆಲುವು ಸಾಧಿಸಿದರು.
ಐಎನ್‌ಎಸಿ 2 - 800 ಸಿಸಿ ವರ್ಗದಲ್ಲಿ ಅಜ್ವೀರ್ ಗೆದ್ದರೆ, ಐಎನ್‌ಎಸಿ 3 ವರ್ಗದಲ್ಲಿ ಜೀಶಾನ್ ಮೊಹಮ್ಮದ್ ಪ್ರಶಸ್ತಿ ಪಡೆದರು. ಮಹಿಳಾ ವಿಭಾಗದಲ್ಲಿ ಶಮೀನಾ ಸಿ.ಪಿ 03:41.004 ಸೆಕೆಂಡುಗಳ ಸಮಯದೊಂದಿಗೆ ಪ್ರಥಮ ಸ್ಥಾನ ಪಡೆದರು.
ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಅನುಮತಿಯಿಂದ ಹಾಗೂ 2025ರ ಎಫ್‌ಐಎ ಅಂತರರಾಷ್ಟ್ರೀಯ ಕ್ರೀಡಾ ನಿಯಮಾವಳಿ ಮತ್ತು ಎಫ್‌ಎಂಎಸ್‌ಸಿಐ ನಿಯಮಗಳ ಅಡಿಯಲ್ಲಿ ನಡೆಸಲ್ಪಟ್ಟ ಚಿಕ್ಕಮಗಳೂರು ಗ್ರೆವೆಲ್ ಫೆಸ್ಟ್, ಐಎನ್‌ಎಸಿ ಕಪ್ ವಲಯದ ಏಳು ಅರ್ಹತಾ ಸುತ್ತುಗಳಲ್ಲೊಂದಾಗಿತ್ತು. ಗ್ರ್ಯಾಂಡ್ ಫೈನಲ್ಸ್‌ಗೆ ಅರ್ಹತೆ ಪಡೆಯಲು, ಪ್ರತಿಯೊಬ್ಬ ಚಾಲಕ ಕನಿಷ್ಠ ಎರಡು ಸುತ್ತುಗಳಲ್ಲಿ ಭಾಗವಹಿಸಬೇಕು. ಪ್ರತಿ ವರ್ಗದಲ್ಲಿಯೂ ಟಾಪ್ 5 ಸ್ಥಾನಗಳಲ್ಲಿ ಮುಗಿಸುವ ಚಾಲಕರಿಗೆ ಮಾತ್ರ ಅಂತಿಮ ಚಾಂಪಿಯನ್‌ಶಿಪ್‌ಗೆ ಪ್ರವೇಶ ಪಡೆಯಲಿದ್ದಾರೆ.
ಈ ಸ್ಪರ್ಧೆಯನ್ನು ಲೋಕೇಶ್ ಗೌಡ ಅವರ ಆಕ್ಟೇನ್ ಪಿಟ್ಸ್ ಪ್ರಚಾರ ಮಾಡಿದ್ದು, ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಎಂಎಸ್‌ಸಿಸಿ) ಜೇಕೆ ಟೈರ್ ಮೋಟಾರ್‌ಸ್ಪೋರ್ಟ್ಸ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.