–  ರಾಘವೇಂದ್ರ ಅಡಿಗ ಎಚ್ಚೆನ್.

ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ದೇವಾ ಅವರ ನಿಧನದ ನೋವು ಮರೆಯಾಗುವ ಮುನ್ನವೇ, ಅವರ ಸೋದರಳಿಯ ಹಾಗೂ ಯುವ ನಟ ಕಾರ್ತಿಕ್ ಸಬೇಶ್ ಕೂಡ ಮೃತಪಟ್ಟಿದ್ದಾರೆ. 37 ವರ್ಷದ ಕಾರ್ತಿಕ್, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 19ರ ರಾತ್ರಿ ಸುಮಾರು 11.15ಕ್ಕೆ ಕೊನೆಯುಸಿರೆಳೆದಿದ್ದಾರೆ.

ಕಾರ್ತಿಕ್ ಸಬೇಶ್ ಅವರ ಅಕಾಲಿಕ ನಿಧನ ತಮಿಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮತ್ತು ಕುಟುಂಬದವರನ್ನು ದುಃಖದಲ್ಲಿ ಮುಳುಗಿಸಿದೆ. ಖ್ಯಾತ ಸಂಗೀತ ನಿರ್ದೇಶಕ ಸಬೇಶ್ ಅವರ ಪುತ್ರನಾಗಿದ್ದ ಕಾರ್ತಿಕ್, ಇತ್ತೀಚೆಗಷ್ಟೇ ನಿಧನರಾದ ಹಿರಿಯ ಸಂಗೀತ ನಿರ್ದೇಶಕ ದೇವಾ ಅವರ ಸೋದರಳಿಯ ಕೂಡ ಆಗಿದ್ದರು. ಕೇವಲ ಮೂರು ದಿನಗಳ ಅಂತರದಲ್ಲಿ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿರುವುದು ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ.

ದೇವಾ ಅವರು ಅಕ್ಟೋಬರ್ 17ರಂದು ನಿಧನರಾಗಿದ್ದರು. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ 400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ದೇವಾ, ‘ಅಣ್ಣಾಮಲೈ’, ‘ಅರುಣಾಚಲಂ’ ಮತ್ತು ‘ಬಾಷಾ’ ಅಂತಹ ಜನಪ್ರಿಯ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ತಮಿಳು ಚಿತ್ರರಂಗದಲ್ಲಿ ಗಾನಾ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದರು.

ಇತ್ತ ಕಾರ್ತಿಕ್ ಸಬೇಶ್ ಕೂಡ ತಮಿಳು ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದರು. ‘ದಮ್’, ‘ವಲ್ಲವನ್’, ‘ಪಟ್ಟತ್ತು ಯಾನೈ’ ಮತ್ತು ‘ಕುಲಿರ್ 100 ಡಿಗ್ರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಕಾರ್ತಿಕ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ನಿವಾಸಕ್ಕೆ ಕೊಂಡೊಯ್ಯಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಸಂಜೆ ಚೆನ್ನೈನ ವಲಸರವಕ್ಕಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಪತ್ನಿ ರಮ್ಯಾ ಕಾರ್ತಿಕ್ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಕಾರ್ತಿಕ್ ಅಗಲಿದ್ದಾರೆ.

ಒಟ್ಟಾರೆ, ಕೆಲವೇ ದಿನಗಳ ಅಂತರದಲ್ಲಿ ದೇವಾ ಮತ್ತು ಕಾರ್ತಿಕ್ ಸಬೇಶ್ ಅವರ ನಿಧನ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ. ಸಂಗೀತ ಮತ್ತು ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಇಬ್ಬರ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ