- ರಾಘವೇಂದ್ರ ಅಡಿಗ ಎಚ್ಚೆನ್.
ನಟ ಪ್ರಮೋದ್ ಶೆಟ್ಟಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ 'ಕೌಸ್ತುಭ' ಚಿತ್ರತಂಡ ಶೆಟ್ಟರ ಹೊಸ ಪೊಲೀಸ್ ಲುಕ್ ರಿಲೀಸ್ ಮಾಡುವ ಮೂಲಕ ಶುಭ ಕೋರಿದೆ.
ಕೌಸ್ತುಭ ಚಿತ್ರದ ಪಾತ್ರದ ಮೂಲಕ ಪ್ರಮೋದ್ ಶೆಟ್ಟಿಯವರು ಕನ್ನಡದ ಜನಪ್ರಿಯ ನಾಯಕ ನಟರ ಪಟ್ಟಿ ಸೇರುವುದು ಖಚಿತ. ಇಂಥದೊಂದು ಭರವಸೆಯನ್ನು ಖುದ್ದು ಚಿತ್ರದ ನಿರ್ದೇಶಕ ಸಿದ್ದು ವಜ್ರಪ್ಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಕಷ್ಟು ಪೋಷಕ, ಖಳ ಹಾಗೂ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿಯವರ ಕೌಸ್ತುಭದ ಲುಕ್ ಹೊಸ ಕಥೆಯನ್ನೇ ಹೇಳುತ್ತಿದೆ.
ಇದೊಂದು ಪತ್ತೆದಾರಿ ಕಥೆಯಾದ ಕಾರಣ ಯಾವುದೇ ಅಂಶಗಳನ್ನು ಬಿಟ್ಟು ಕೊಡುವುದು ಕಷ್ಟ. ಆದರೆ ಪೊಲೀಸ್ ಪಾತ್ರವಾಗಲೀ, ಚಿತ್ರದ ಕ್ಲೈಮ್ಯಾಕ್ಸ್ ಆಗಲೀ ವಿಭಿನ್ನವಾಗಿದೆ ಎನ್ನುವುದು ನಾಯಕ ಪ್ರಮೋದ್ ಶೆಟ್ಟಿ ಅಭಿಪ್ರಾಯ. ಅದಕ್ಕೆ ತಕ್ಕಂತೆ ಅವರು ತಮ್ಮಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಇದುವರೆಗೆ ತಮ್ಮ ಪಾತ್ರಗಳಲ್ಲಿ ಹಾಸ್ಯವನ್ನು ಕೂಡ ಪ್ರದರ್ಶಿಸುತ್ತಿದ್ದ ಪ್ರಮೋದ್ ಇಲ್ಲಿ 'ಚಾಣಕ್ಯ' ಎನ್ನುವ ಪೊಲೀಸ್ ಅಧಿಕಾರಿಯಾಗಿದ್ದಾರೆ. ಪಾತ್ರದ ತೂಕಕ್ಕೆ ಹೊಂದಿಕೊಳ್ಳುವಂತೆ ಗಂಭೀರವಾದ ಪಾತ್ರ ನಿಭಾಯಿಸುತ್ತಿದ್ದಾರೆ. ದೇಹದ ತೂಕವನ್ನು ಕೂಡ ಇಳಿಸಿದ್ದಾರೆ. 'ಲಾಫಿಂಗ್ ಬುದ್ಧ' ಪಾತ್ರಕ್ಕಾಗಿ ಬೆಳೆಸಿದ್ದ ದೇಹದಿಂದ ಬರೋಬ್ಬರಿ 27 ಕೆ.ಜಿ ಕಡಿಮೆಯಾಗಿದ್ದಾರೆ.
ಕೌಸ್ತುಭದಲ್ಲಿ ನಾಲ್ಕು ಪ್ರಮುಖ ಫೈಟ್ ಗಳಿವೆ. ಹೀಗಾಗಿ ಇದು ಪ್ರಮೋದ್ ಶೆಟ್ಟಿಯವರು ನಾಯಕರಾಗಿರುವ ಮೊದಲ ಕಮರ್ಷಿಯಲ್ ಚಿತ್ರ ಎಂದು ಧೈರ್ಯದಿಂದ ಹೇಳಬಹುದು.
ನಿರ್ದೇಶಕ ಸಿದ್ದು ವಜ್ರಪ್ಪ ಅವರಿಗೆ ಇದು ಎರಡನೇ ಸಿನಿಮಾ. ಕಳೆದ ವರ್ಷ ರಾವುತ ಎನ್ನುವ ಪ್ರಯೋಗಾತ್ಮಕ ಚಿತ್ರ ನಿರ್ದೇಶಿಸಿ ಗಮನ ಸೆಳೆದವರು ಸಿದ್ದು ವಜ್ರಪ್ಪ. ಮುಂದಿನ ಚಿತ್ರವನ್ನು ಪ್ರಮೋದ್ ಶೆಟ್ಟಿ ನಾಯಕತ್ವದಲ್ಲೇ ಮಾಡಬೇಕೆಂದು ಕಥೆ ಸಿದ್ಧಪಿಡಿಸಿ, ಕಾದು ಒಪ್ಪಿಗೆ ಪಡೆದುಕೊಂಡಿದ್ದಾರೆ. ಚಿತ್ರದ ಬಗ್ಗೆ ಹೇಳುವುದಾದರೆ ಇಲ್ಲಿ ಸಿನಿಮಾದೊಳಗೊಂದು ಸಿನಿಮಾ ಇರುತ್ತದೆ. ರಾಜಕೀಯ ಹಾಗೂ ಸಿನಿಮಾ ರಂಗದ ಸಂಬಂಧದ ಬಗ್ಗೆಯೇ ಈ ಚಿತ್ರ ಪ್ರಮುಖಾಗಿ ಮಾತನಾಡಲಿದೆ. ಈಗಾಗಲೇ 60 ಭಾಗದಷ್ಟು ಚಿತ್ರೀಕರಣ ಪೂರ್ತಿಯಾಗಿದೆ. ಸಾಕಷ್ಟು ಸಮಯತೆಗೆದುಕೊಂಡು, ಸಂಪೂರ್ಣ ಸಿದ್ಧತೆಗಳೊಂದಿಗೆ ಮುಂದಿನ ವರ್ಷ ಸಿನಿಮಾ ತೆರೆಗಾಣಿಸುವ ಯೋಜನೆ ಹಾಕಲಾಗಿದೆ.
ಕೌಸ್ತುಭ ಚಿತ್ರದಲ್ಲಿ ನಾಯಕನ ಎಂಟ್ರಿಗೆ ಒಂದು ವಿಶೇಷ ಹಾಡು ರೆಡಿ ಮಾಡಲಾಗಿದೆ. ಇನ್ನೊಂದು ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ವಿದ್ಯಾಪತಿ ಚಿತ್ರಕ್ಕೆ ಸಂಗೀತ ನೀಡಿದ್ದ ಡಾಸ್ ಮೊಡ್ ಈ ಚಿತ್ರದ ಸಂಗೀತ ನಿರ್ದೇಶಕರು. ಮೂರು ಹಾಡುಗಳಿದ್ದು, ಒಂದು ಹಾಡನ್ನು ನಿರ್ದೇಶಕರು ಖುದ್ದಾಗಿ ರಚಿಸಿದ್ದಾರೆ. ಇನ್ನೊಂದು ಗೀತೆಗೆ ಪ್ರಶಾಂತ್ ಬಾಗೂರು ಪೆನ್ನು ಹಿಡಿದಿದ್ದಾರೆ.
ತಾರಾಗಣದಲ್ಲಿ ಹಿರಿಯನಟ, ನಿರ್ದೇಶಕ ಟಿ.ಎಸ್. ನಾಗಾಭರಣ ಸೇರಿದಂತೆ ರವಿಶಂಕರ್ ಗೌಡ, ಕಿರುತೆರೆ ನಟಿ ವಿದ್ಯಾ, ಕಡ್ಡಿ ಪುಡಿ ಚಂದ್ರು
ಸೇರಿದಂತೆ ದೊಡ್ಡ ತಾರಗಣವೇ ಇಲ್ಲಿದೆ. 'ರಾಮಾ ರಾಮಾ ರೇ' ಖ್ಯಾತಿಯ ನಟರಾಜ್ ವಿಶೇಷ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಅರವಿಂದ್ ರಾಜ್ ಸಂಕಲನ ಮತ್ತು ದಿಲೀಪ್ ಎಂ.ರಾಜ್ ಸಾಹಸವಿದೆ. ಎವಿಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೌಸ್ತುಭ ಚಿತ್ರಕ್ಕೆ ರಾಜೇಶ್ ಧನಪಾಲ್ ಬಂಡವಾಳ ಹೂಡಿದ್ದಾರೆ.





