ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮೊನ್ನೆ ಮೊನ್ನೆಯಷ್ಟೇ ಸನ್ಯಾಸತ್ವ ಸ್ವೀಕಾರ ಮಾಡಿದ ಬಾಲಿವುಡ್ನ ಖ್ಯಾತ ನಟಿ ಮಮತಾ ಕುಲಕರ್ಣಿ ದೇಶದೆಲ್ಲೆಡೆ ಸಖತ್ ಸುದ್ದಿಯಾಗಿದ್ದರು. ತಿಂಗಳಾನುಗಟ್ಟಲೇ ವಿವಿಧ ವಿಧಿವಿಧಾನಗಳ ಮೂಲಕ ದೀಕ್ಷೆ ಪಡೆಯುವ ಬದಲು ದಿಢೀರ್ನೇ ಒಂದೇ ದಿನದಲ್ಲಿ ಕಿನ್ನರರ ಅಖಾಡದಲ್ಲಿ ಧೀಕ್ಷೆ ಪಡೆದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆದ್ರೆ, 90ರ ದಶಕದಲ್ಲಿ ಬಾಲಿವುಡ್ ಇಂಡಸ್ಟ್ರೀಯಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದ ನಟಿ ಮಮತಾ ಕುಲಕರ್ಣಿ ಇಷ್ಟು ದಿನ ಎಲ್ಲಿದ್ದರು..? ಏನ್ ಮಾಡ್ತಿದ್ದರು..? ಅನ್ನೋದು ಕೆಲವರಿಗೆ ಭಾರೀ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ಈಗ್ಲೂ ಕೂಡ ಹೈಫೈ ಲೈಫ್ ಲೀಡ್ ಮಾಡ್ತಿದ್ದ ಮಮತಾ ಕುಲಕರ್ಣಿ ಎಲ್ಲಿ ಸೆಟಲ್ ಆಗಿದ್ದರು..? ಮಮತಾ ಮಾಡಿರೋ ಆಸ್ತಿ ಎಷ್ಟು..? ಸನ್ಯಾಸಿ ಆಗಿರೋದ್ರಿಂದ ಆ ಆಸ್ತಿನ್ನೆಲ್ಲಾ ಏನ್ ಮಾಡ್ತಾರೆ ಅನ್ನೋ ಭಾರೀ ಗುಸುಗುಸು ಶುರುವಾಗಿದೆ.
ಮಮತಾ ಬಳಿ 85 ಕೋಟಿ ಆಸ್ತಿ..? :
ಬಾಲಿವುಡ್ನಲ್ಲಿ ನೇಮು ಫೇಮು ಸಂಪಾದನೆ ಮಾಡಿದ್ದ ಮಮತಾ ಕುಲಕರ್ಣಿ ಒಂದಷ್ಟು ಆಸ್ತಿಯನ್ನೂ ಮಾಡಿದ್ದಾರೆ. ಡಿಎನ್ಎ ಇಂಡಿಯಾ ಪ್ರಕಟಿಸಿರೋ ವರದಿ ಪ್ರಕಾರ ಮಮತಾ ಕುಲಕರ್ಣಿಯ ಆಸ್ತಿ ಸುಮಾರು 85 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಭಾರತದಲ್ಲೇ ಮನೆ ಮತ್ತು ವಿದೇಶದಲ್ಲೂ ಒಂದಷ್ಟು ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಆದ್ರೆ, ಅದೆಲ್ಲಾ ಎಲ್ಲಿದೆ ಅನ್ನೋದನ್ನ ಇದುವರೆಗೂ ಬಹಿರಂಗಪಡಿಸಿಲ್ಲ. ಇಷ್ಟು ಆಸ್ತಿ ಇದ್ದ ಮಮತಾ ಕುಲರ್ಣಿ 2000ನೇ ಇಸವಿಯಲ್ಲಿ ಬಾಲಿವುಡ್ ಸಿನಿಮಾ ರಂಗವನ್ನು ದಿಢೀರನೇ ತೊರೆದಿದ್ದೇಕೆ..? ಕನ್ನಡದಲ್ಲೂ ಡಾ. ವಿಷ್ಣುವರ್ಧನ್ ಮತ್ತು ನಟ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದ ಈ ನಟಿಗೆ ಆಗ ಏನಾಯ್ತು..? ಅದೆಲ್ಲವನ್ನೂ ನೋಡೋಣ ಬನ್ನಿ.
90ರ ದಶಕದಲ್ಲೇ ಮ್ಯಾಗ್ಜಿನ್ ಕವರ್ ಪೇಜ್ಗೆ ಟಾಪ್ಲೆಸ್ ಪೋಸು ನೀಡಿದ್ದ ಮಮತಾ ಕುಲಕರ್ಣಿ ಅಂದೇ ಇಡೀ ಇಂಡಿಯಾದ ಮಾದಕ ನಟಿಯಾಗಿ ಹೊರಹೊಮ್ಮಿದ್ದರು. ಅಷ್ಟೇ ಅಲ್ಲ, ಖ್ಯಾತ ನಟರ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದರು. ಬಾಜಿ, ಕರಣ್ ಅರ್ಜುನ್, ಚೈನಾ ಗೇಟ್, ಆಶಿಕ್ ಆವಾರ, ಕ್ರಾಂತಿವೀರ್, ಸಬ್ಸೆ ಬಡಾ ಕಿಲಾಡಿ, ಆಂದೋಲನ, ಹೀಗೆ ಹಲವಾರು ಚಿತ್ರಗಳನ್ನು ಮಾಡಿದ್ದರು. ಕೇವಲ ಹಿಂದಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಅಂಡರ್ವರ್ಲ್ಡ್ ನಂಟು:
ಖ್ಯಾತಿಯ ತುತ್ತತುದಿಯಲ್ಲಿದ್ದಾಗಲೇ ಮಮತಾ ಕುಲಕರ್ಣಿ ಅವರ ಮೇಲೆ ಅಂಡರ್ವರ್ಲ್ಡ್ ಡಾನ್ ಛೋಟಾ ರಾಜನ್ ಕಣ್ಣು ಬಿದ್ದಿತ್ತು. ಇದಕ್ಕೆ ಪೂರಕವಾಗಿ ಛೋಟಾ ರಾಜನ್ ಜೊತೆ ಮಮತಾ ಕುಲಕರ್ಣಿ ಹೆಸರು ಥಳಕು ಹಾಕಿಕೊಂಡಿತ್ತು. ಆ ಕಾಲದಲ್ಲಿ ಸಖತ್ ಸದ್ದು ಮಾಡಿತ್ತು.
ಸಾಲದಕ್ಕೆ ಡ್ರಗ್ ಮಾಫಿಯಾದ ಕಿಂಗ್ ವಿಕ್ಕಿ ಗೋಸ್ವಾಮಿಯ ಸಾಂಗತ್ಯವನ್ನು ಕೂಡ ಮಮತಾ ಕುಲಕರ್ಣಿ ಬೆಳೆಸಿಕೊಂಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದ ವಿಕ್ಕಿಯನ್ನು ಬಿಡಿಸಿಕೊಂಡು ಬಂದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆತನನ್ನೇ ಮದುವೆಯಾದರು ಎಂಬ ಸುದ್ದಿಗಳೆಲ್ಲ ಆಗ ಹಬ್ಬಿದ್ದವು.
2000ನೇ ಇಸವಿಯಲ್ಲಿ ಭಾರತವನ್ನು ಮಮತಾ ಕುಲಕರ್ಣಿ ತೊರೆದರೂ ಕೂಡ ನಂತರ 2016ರಲ್ಲಿ 2000 ಕೋಟಿ ರೂಪಾಯಿಯ ಡ್ರಗ್ಸ್ ಪ್ರಕರಣದಲ್ಲಿ ಇದೇ ಮಮತಾ ಕುಲಕರ್ಣಿಯ ಹೆಸರು ಕೇಳಿ ಬಂದಿತ್ತು.